'ಪಂಚತಂತ್ರ'ದಲ್ಲೂ ಸಿಗದ ಗ್ರಾಪಂ ಸಮಗ್ರ ಮಾಹಿತಿ
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚತಂತ್ರ ತಂತ್ರಾಂಶದಲ್ಲಿ ಕಾಲ ಕಾಲಕ್ಕೆ ಮಾಹಿತಿ ಅಪ್ಲೋಡ್ ಮಾಡುವಲ್ಲಿ ಗ್ರಾಮ ಪಂಚಾಯಿತಿಗಳು ವಿಫಲವಾಗಿವೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಗ್ರಾಮಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆ, ಗ್ರಾಮ ಪಂಚಾಯಿತಿ ಅನುಷ್ಠಾನಗೊಳಿಸಬೇಕಾದ ಹಲವು ಕಾರ್ಯಕ್ರಮಗಳು, ವಾರ್ಷಿಕ ಕ್ರಿಯಾಯೋಜನೆಗಳ ಮಾಹಿತಿ, ಪ್ರಗತಿ ವರದಿ, ವಾರ್ಷಿಕ ಪ್ರಗತಿ ವರದಿ, ವಾರ್ಡ್ ಸಭೆ, ಗ್ರಾಮ ಸಭೆ, ವಿಶೇಷ ಸಭೆಗಳ ಮಾಹಿತಿಯನ್ನು ಆಗಾಗ ಪಂಚತಂತ್ರ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕೆಂದು ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಸಾರ್ವಜನಿಕರಿಂದ ದೂರು: ಪಂಚತಂತ್ರ ವೆಬ್ಸೈಟ್ನಲ್ಲಿ ಸಮಗ್ರ ಮಾಹಿತಿ ಲಭ್ಯವಾಗುತ್ತಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಕಾರ್ಯದರ್ಶಿಯವರು ಕಳೆದ ಏಪ್ರಿಲ್ 21ರಂದು ಆದೇಶ ಹೊರಡಿಸಿ ಸಾರ್ವಜನಿಕರು ಆಗಾಗ ಪಂಚತಂತ್ರ ಪರಿಶೀಲಿಸುತ್ತಿದ್ದು, ಸಮರ್ಪಕವಾಗಿ ಮಾಹಿತಿಗಳು ಲಭ್ಯವಾಗದೆ ಇರುವುದರಿಂದ ದೂರು ನೀಡಿದ್ದಾರೆ. ಪಂಚತಂತ್ರ ವೆಬ್ಸೈಟ್ ಪರಿಶೀಲಿಸಿದಾಗ ಯಾವುದೇ ಮಾಹಿತಿಗಳನ್ನು ಪೂರ್ಣವಾಗಿ ಅಳವಡಿಸದೆ ಇರುವುದು ಗಮನಕ್ಕೆ ಬಂದಿದ್ದು, ಗ್ರಾಮ ಪಂಚಾಯಿತಿಗಳು ಸಮಗ್ರವಾದ ಮಾಹಿತಿಯನ್ನು ಏಪ್ರಿಲ್ 30ರೊಳಗೆ ಅಪ್ಲೋಡ್ ಮಾಡಬೇಕು. ಈ ಸಂಬಂಧ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದ್ದಾರೆ.
ಮೇ 11 ಆದರೂ ಗ್ರಾಮ ಪಂಚಾಯ್ತಿಗಳು ಸಮಗ್ರವಾದ ಮಾಹಿತಿಯನ್ನು ಅಪ್ಲೋಡ್ ಮಾಡಿರುವುದಿಲ್ಲ. ಅಂದರೆ ಸರ್ಕಾರದ ಈ ಆದೇಶಕ್ಕೆ ಗ್ರಾಮ ಪಂಚಾಯಿತಿಗಳು ಕಿವಿಗೊಟ್ಟಂತೆ ಕಾಣುತ್ತಿಲ್ಲ.
ಉತ್ತರ ಕನ್ನಡ ಮೊದಲು: ಗ್ರಾಮ ಸಭೆ, ಸಾಮಾನ್ಯ ಸಭೆ, ವಾರ್ಡ್ ಸಭೆಗಳು ಸೇರಿದಂತೆ ಕಂದಾಯ ವಸೂಲಿಯಲ್ಲಿ ಕೆಲವು ಜಿಲ್ಲೆಗಳು ಪ್ರಗತಿ ಸಾಧಿಸಿವೆ. ಪಂಚತಂತ್ರದಲ್ಲಿ ಅಳವಡಿಸಿರುವ ಮಾಹಿತಿಯ ಪ್ರಕಾರ ಸಕಾಲದಲ್ಲಿ ಗ್ರಾಮ ಸಭೆ, ವಾರ್ಡ್ ಸಭೆ, ಸಾಮಾನ್ಯಸಭೆ ಹಾಗೂ ಕಂದಾಯ ವಸೂಲಿ ಸೇರಿದಂತೆ ಕಾರ್ಯನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಅಂದರೆ, ಶೇ. 54 ರಷ್ಟು ಪ್ರಗತಿ ಸಾಧಿಸಿದೆ. ಇನ್ನುಳಿದ ಸ್ಥಾನಗಳಲ್ಲಿ ಧಾರಾವಾಡ(ಶೇ. 52), ದಕ್ಷಿಣ ಕನ್ನಡ (ಶೇ.50), ಮಂಡ್ಯ ಹಾಗೂ ರಾಮನಗರ (ಶೇ. 49) ಜಿಲ್ಲೆಗಳಿವೆ.
30 ಜಿಲ್ಲೆಗಳ ಪೈಕಿ ಕೊನೆಯ ಐದು ಸ್ಥಾನಗಳಲ್ಲಿ ಪ್ರಥಮದಲ್ಲಿ ರಾಯಚೂರು(ಶೇ.18), ಇನ್ನುಳಿದ ಸ್ಥಾನಗಳಲ್ಲಿ ಯಾದಗಿರಿ (ಶೇ.22), ಬೀದರ್(ಶೇ. 27), ತುಮಕೂರು (ಶೇ.30) ಹಾಗೂ ಬೆಳಗಾವಿ(ಶೇ. 31) ಜಿಲ್ಲೆಗಳಿವೆ.
ತೃಪ್ತಿಕರವಾಗಿಲ್ಲ: ಸಾಮಾನ್ಯ ಸಭೆ, ವಾರ್ಡ್ಸಭೆ, ಗ್ರಾಮಸಭೆ ನಡೆಸಿ, ಅವುಗಳ ನಿರ್ಣಯವನ್ನು ಆಪ್ಲೋಡ್ ಮಾಡುವಲ್ಲಿ ರಾಯಚೂರು ಜಿಲ್ಲೆ ತೀರ ಹಿಂದುಳಿದಿದೆ. ಅಂದರೆ, ಶೇ. 1ರಷ್ಟು ಮಾತ್ರ ಪ್ರಗತಿ ಕಂಡಿದೆ. ಈ ಅಂಕಿ- ಅಂಶ ನೋಡಿದರೆ ಕಾರ್ಯನಿರ್ವಹಣೆಯಲ್ಲಿ ಯಾವುದೇ ಜಿಲ್ಲೆಗಳ ಕೆಲಸ ತೃಪ್ತಿಕರವಾಗಿಲ್ಲ. ಅಂದರೆ, ಕೊಟ್ಟ ಕೆಲಸ ನಿಭಾಯಿಸುವಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಿನ್ನಡೆ ಸಾಧಿಸಿವೆ.
ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

