ನೀರಿಗೆ ಆಗ್ರಹಿಸಿ ಕಳಸ ಬಂದ್ ಯಶಸ್ವಿ
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಮೇ 23
ಕಳಸ ಹೋಬಳಿಯ ಹೊನ್ನೆಕಾಡು ಕುಡಿಯುವ ನೀರಿಗಾಗಿ ಕಳಸ ಪಟ್ಟಣದ ಜನತೆ ಸ್ವಯಂ ಪ್ರೇರಿತರಾಗಿ ಶುಕ್ರವಾರ ಬಂದ್ ಆಚರಿಸುವ ಮೂಲಕ ರಸ್ತೆ ತಡೆ ಚಳವಳಿ ನಡೆಸಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ಎ.ಶೇಷಗಿರಿ ಮಾತನಾಡಿ, 2006ರಲ್ಲಿ ಗುರುತ್ವಾಕರ್ಷಣೆ ಮೂಲಕ ಕಳಸ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಅನುಮೋದನೆ ದೊರೆತು ಆದೇಶವಾಗಿ ತಾಂತ್ರಿಕ ವರದಿಯಂತೆ 6.98 ಕೋಟಿ ಸರ್ಕಾರ ಮಂಜೂರು ಮಾಡಿ ಅನುಮೋದನೆ ನೀಡಿದ್ದು, 2.62 ಕೋಟಿ ಚಿಕ್ಕಮಗಳೂರು ಜಿ.ಪಂ.ಗೆ ಬಿಡುಗಡೆ ಮಾಡಿದೆ. ಅಧಿಕಾರಿಗಳು ಕಳಪೆ ಕಾಮಗಾರಿಗಳನ್ನು ನಡೆಸಿದ್ದಾರೆ ಎಂದರು.
ಒಂದಾದರೆ ಇನ್ನೊಂದು ಕಡೆ ಅರಣ್ಯ ಇಲಾಖೆಯ ತಕರಾರು ಎಂದು ಕುಂಟುನೆಪಗಳನ್ನು ಹೇಳಿ ಸರ್ಕಾರದಿಂದ ಮಂಜೂರಾಗಿರುವ ಹಣವನ್ನು ಸದುಪಯೋಗವಾಗದಂತೆ ಅಧಿಕಾರಿಗಳ ವರ್ಗ ತಡೆ ಹಿಡಿದು ಕಳಸ ಪಟ್ಟಣದ ಜನತೆಗೆ ಅನ್ಯಾಯ ಎಸಗಿದ್ದಾರೆ. ಕೂಡಲೇ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರಗಿಸುವಂತೆ ಒತ್ತಾಯಿಸಿದರು.
ಎಚ್ಚರಿಕೆ: ನಂತರ ಮಾತನಾಡಿದ ಹೋರಾಟ ಸಮಿತಿ ಸಂಚಾಲಕಿ ಮಮ್ತಾಜ್ ಬೇಗಂ, ಗ್ರಾಪಂಯವರು ಅಧಿಕಾರಿಗಳೊಂದಿಗೆ ಮತ್ತು ಶಾಸಕರೊಂದಿಗೆ ಹೊನ್ನೆಕಾಡಿಗೆ ಭೇಟಿ ನೀಡಿ ನೀರಿನ ಯೋಜನೆಗೆ ಗುದ್ದಲಿ ಪೂಜೆ ಮಾಡುವಾಗ ಕಾರ್ಕಳ ವಿಭಾಗದ ಡಿಎಫ್ಓ ಉಪಸ್ಥಿತರಿದ್ದರು. ನಂತರ ಅವರೇ ಈ ಯೋಜನೆಗೆ ಅಡ್ಡಗಾಲು ಹಾಕಿರುವುದು ಸರಿಯಲ್ಲ. ಜಿಪಂ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಂಡಿದೆ. ತಕ್ಷಣವೇ ಹೊನ್ನೇಕಾಡಿನ ಕುಡಿಯುವ ನೀರು ಕಳಸ ಜನತೆ ನೀಡದೇ ಇದ್ದಲ್ಲಿ ಕಳಸ ಹೋಬಳಿ ಸೇರಿದಂತೆ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಪಟ್ಟು: ಹೋರಾಟ ಸಮಿತಿ ಗೌರವಾಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ಮಾತನಾಡಿ, ಕಳಸ ಭಾಗವು ಒಂದಲ್ಲಾ ಒಂದು ಸಮಸ್ಯೆಗಳನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎದುರಿಸುತ್ತಿದೆ. ಒಂದೆಡೆ ಇನಾಂ, ಇನ್ನೊಂದೆಡೆ ಹುಲಿ ಯೋಜನೆ, ಈಗ ಕುಡಿಯುವ ನೀರಿಗೆ ಅಡ್ಡಗಾಲು ಅಧಿಕಾರಿಗಳು ಮಾಡುವ ತಪ್ಪಿಗೆ ಜನ ಸಾಮಾನ್ಯರು ಪರದಾಡುವಂತಾಗಿದೆ. ನ್ಯಾಯ ಸಿಗುವವರೆಗೂ ರಸ್ತೆ ತಡೆ ಚಳವಳಿಯನ್ನು ಮುಂದುವರಿಸುವುದಾಗಿ ಪಟ್ಟುಹಿಡಿದು ಕುಳಿತರು.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕುದುರೆಮುಖ ವೃತ್ತ ನಿರೀಕ್ಷಕ ಶಾಂತರಾಮ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಜಿ.ಪಂ. ಅಧಿಕಾರಿಗಳು ಮತ್ತು ತಹಸೀಲ್ದಾರರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ರಸ್ತೆ ತಡೆ ಚಳವಳಿ ಕೈಬಿಟ್ಟರು.
ಇದಕ್ಕೂ ಮುನ್ನ ಪ್ರತಿಭಟನಾಕಾರರು ಕಲಶೇಶ್ವರ ದೇವಾಲಯದಿಂದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಕಳಸ ಪೊಲೀಸ್ ಠಾಣೆ ಸಮೀಪ ರಸ್ತೆ ತಡೆ ನಡೆಸಿದರು.
ಈ ಸಂದರ್ಭ ಕೆ.ಬಾಲಕೃಷ್ಣ ಭಟ್, ಸಂತೋಷ್ ಹಿನಾರಿ, ಜ್ವಾಲನಯ್ಯ, ಗ್ರಾಪಂ ಅಧ್ಯಕ್ಷೆ ಉಷಾ, ಗೋಪಾಲ ಶೆಟ್ಟಿ, ವಿಶ್ವನಾಥ್ ರಾವ್, ರಫೀಕ್, ಕವಿತಾ ಚಂದ್ರು, ರಂಗನಾಥ್, ನಾಗೇಶ್ ಭಟ್, ಜಯಂತ್, ಮಹಾಬಲ ಶಾಸ್ತ್ರಿ, ಕಾರ್ತಿಕೇಯ ಶಾಸ್ತ್ರಿ, ಲಕ್ಷ್ಮಣಾಚಾರ್, ರತ್ನಮ್ಮ, ಭಾಸ್ಕರ, ಸತೀಶ್ ಸೇರಿದಂತೆ ವಿವಿಧ ಪಕ್ಷ ಹಾಗೂ ಸಂಘಟನೆಯ ಮುಖಂಡರುಗಳು ಇದ್ದರು.
ಪ್ರಯಾಣಿಕರು, ಭಕ್ತರ ಪರದಾಟ
ಕಳಸ ಪಟ್ಟಣ ಬಂದ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬಂದಂತಹ ಪ್ರಯಾಣಿಕರು ಮತ್ತು ಭಕ್ತರು ಅನ್ನ, ಆಹಾರವಿಲ್ಲದೆ ಪರದಾಡಬೇಕಾಯಿತು. ಎರಡು ಗಂಟೆಗಳಿಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದ್ದರಿಂದ ಕೆಲ ಪ್ರಯಾಣಿಕರು ಪೊಲೀಸರಲ್ಲಿ ಮತ್ತು ಪ್ರತಿಭಟನಾಕಾರರಲ್ಲಿ ಮೊರೆ ಹೋಗಿ ಮಾತಿನ ಚಕಮಕಿ ನಡೆಸಿದರು. ಬಂದ್ ಪ್ರಯುಕ್ತ ಅಂಗಡಿ ಮುಂಗಟ್ಟುಗಳು, ಹೊಟೇಲುಗಳು, ಬ್ಯಾಂಕುಗಳು ಮುಚ್ಚಿದ್ದರೆ, ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದವು. ಕಳಸ ಬಂದ್ ಬೆಳಗ್ಗೆ 8 ರಿಂದ ಸಂಜೆ 6ರ ತನಕ ಮುಂದುವರಿಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

