ಎಸ್‌ಸಿಡಿಸಿಸಿ ಬ್ಯಾಂಕ್ ಲಾಭಾಂಶ ಶೇ.56ಕ್ಕೆ ಏರಿಕೆ
ಮಂಗಳೂರು: ಶತಮಾನೋತ್ಸವ ಸಂಭ್ರಮದಲ್ಲಿರುವ ದಕ್ಷಿಣಕನ್ನಡ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ 18.80 ಕೋಟಿ ಲಾಭ ಗಳಿಸಿದ್ದು ಲಾಭಾಂಶ ಶೇ.56ಕ್ಕೇ ಏರಿಕೆಯಾಗಿದೆ. ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಿದೆ. ಸರ್ಕಾರ ಘೋಷಿಸಿದ ಸಾಲಮನ್ನಾ ಮತ್ತು ಅದರ ಬಡ್ಡಿ 217.36 ಕೋಟಿ ಇನ್ನೂ ಬ್ಯಾಂಕ್‌ಗೆ ಪಾವತಿಸಿಲ್ಲ. ಆದರೂ ಗರಿಷ್ಠ ಲಾಭ ದಾಖಲಿಸಿರುವುದು ಅಭಿವೃದ್ಧಿ ದ್ಯೋತಕ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು ವ್ಯವಹಾರದ ಗುರಿ ದಾಟಿ 2925.28 ಕೋಟಿ ತಲುಪಿದೆ. ರಾಜ್ಯ ಸರ್ಕಾರ ಯಾವುದೇ ಠೇವಣಿ ಇಡದಿದ್ದರೂ 57 ಶಾಖೆಗಳ ಮೂಲಕ ಕಳೆದ ಸಾಲಿನಲ್ಲಿ 1565.96 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ರಾಜ್ಯದಲ್ಲಿಯೇ ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಸಹಕಾರಿ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ. 2079 ಕೋಟಿ ಮುಂಗಡ ಸಾಲ ನೀಡುವ ಮೂಲಕ ಶೇ.33 ಹೆಚ್ಚಿನ ಸಾಧನೆ ಮಾಡಿದೆ.
ಸತತ 18 ವರ್ಷಗಳಿಂದ ಕೃಷಿ ಸಾಲ ವಸೂಲಿಯಲ್ಲಿ ಶೇ.100 ಸಾಧನೆ. 902 ಸದಸ್ಯ ಸಂಘಗಳ ಪಾಲು ಬಂಡವಾಳ 34.90 ಕೋಟಿ, ದುಡಿಯುವ ಬಂಡವಾಳ 2297.87 ಕೋಟಿ, 44.67 ಕೋಟಿ ವಿವಿಧ ನಿಧಿ ಹೊಂದುವ ಮೂಲಕ ಎಲ್ಲ ವಿಭಾಗದಲ್ಲಿ ಪ್ರಗತಿ ಸಾಧಿಸಿದೆ. ಬ್ಯಾಂಕ್ ಅನುತ್ಪಾದಕ ಆಸ್ತಿ ಶೇ.3.12. ಕಳೆದ ವರ್ಷಕ್ಕಿಂತ ಈ ಬಾರಿ ಶೇ.1.09 ಇಳಿಕೆಯಾಗಿ ಪ್ರಗತಿ ಸಾಧಿಸಿದೆ.
ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ನಬಾರ್ಡ್‌ನಿಂದ ನೇರ ಸಾಲ ಪಡೆದ ಹೆಗ್ಗಳಿಕೆ ಪಡೆದಿದೆ. ಶತಮಾನೋತ್ಸವ ಸವಿ ನೆನಪಿಗೆ 5 ಅಂತಸ್ತಿನ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪ್ರಧಾನ ಕಚೇರಿ, ತರಬೇತಿ ಕೇಂದ್ರ, ವಿಶಾಲ ಹವಾನಿಯಂತ್ರಿತ ಸಭಾಭವನ, ಅತಿಥಿ ಗೃಹಗಳು ಈ ಕಟ್ಟದಲ್ಲಿರಲಿದೆ. ಶತಮಾನೋತ್ಸವ ಸ್ಮರಣೆಗೆ ಬ್ಯಾಂಕ್ ಮುಂಭಾಗ ಕೆ.ಎಸ್.ರಾವ್ ರಸ್ತೆಯಲ್ಲಿ ವೃತ್ತ ನಿರ್ಮಿಸಿಸಿ ಮೊಳವಳ್ಳಿ ಶಿವರಾಯರ ಹೆಸರು ಇಡಲು ನಿರ್ಧರಿಸಲಾಗಿದೆ.
ರುಪೇ ಕಾರ್ಡ್: ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆ ಹೊಂದಿರುವ ರೈತರಿಗೆ ರುಪೇ ಕಾರ್ಡ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ನಬಾರ್ಡ್‌ನ ಈ ಯೋಜನೆಯನ್ನು ಮೊದಲು ಕಾರ್ಯಗತ ಗೊಳಿಸಿದ ಹಿರಿಮೆಗೆ ಬ್ಯಾಂಕ್ ಪಾತ್ರವಾಗಲಿದೆ. ಕಾರ್ಡ್ ಹೊಂದಿದ ರೈತರು ಸಂಘಗಳಲ್ಲಿ ಮತ್ತು ಈ ವ್ಯವಸ್ಥೆ ಇರುವ ಜಿಲ್ಲೆಯ ಯಾವುದೇ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ವ್ಯವಹಾರ ನಡೆಸಬಹುದು. ಯಾವುದೇ ಬ್ಯಾಂಕ್ ಎಟಿಎಂಗಳಲ್ಲಿ ಹಣ ನಗದೀಕರಣ ಸಹಿತ ಇನ್ನಿತರ ಸೌಲಭ್ಯಗಳಿವೆ.
ಪ್ರಶಸ್ತಿ, ಸೌಲಭ್ಯಗಳು: ಬ್ಯಾಂಕ್‌ಗೆ 14 ಬಾರಿ ಪ್ರಶಸ್ತಿ ಬಂದಿದ್ದು, 12 ಬಾರಿ ನಬಾರ್ಡ್ ಪ್ರಶಸ್ತಿ ಲಭಿಸಿದೆ. ಸ್ವಸಹಾಯ ಗುಂಪು ಸಮರ್ಪಕ ಅನುಷ್ಠಾನದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ. 86573 ರೈತರಿಗೆ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್, 71513 ಮಂದಿಗೆ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯ ಒದಗಿಸಾಲಿದೆ.
17 ಹೊಸ ಶಾಖೆ: ಬ್ಯಾಂಕ್ 17 ಶಾಖೆ ತೆರೆಯಲು ನಿರ್ಧರಿಸಲಾಗಿದ್ದು, ಉಳ್ಳಾಲ, ಹಳೆಯಂಗಡಿ, ಮುಲ್ಕಿ-ಕಾರ್ನಾಡು, ಮಂಗಳಾದೇವಿ, ಉಡುಪಿಯ ಉಚ್ಚಿಲ, ಕಟಪಾಡಿ, ಸಾಸ್ತಾನ, ಕಾರ್ಕಳದ ಅಜೆಕಾರು, ಪುತ್ತೂರಿನ ಕಬಕ, ಬೆಳ್ತಂಗಡಿ ಕಕ್ಕಿಂಜೆಯಲ್ಲಿ ಸುಸಜ್ಜಿತ ಗಣಕೀಕರಣದೊಂದಿಗೆ ಶೀಘ್ರ ಶಾಖೆ ಆರಂಭವಾಗಲಿದೆ. ಸರ್ಕಾರ ಕೃಷಿಕರ ಪರ ತಳೆದಿರುವ ನೀತಿಗೆ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಬಿ.ನಿರಂಜನ್, ಎಂ.ವಾದಿರಾಜ ಶೆಟ್ಟಿ, ಭಾಸ್ಕರ ಎಸ್.ಕೋಟ್ಯಾನ್, ಸದಾಶಿವ ಉಳ್ಳಾಲ್, ವ್ಯವಸ್ಥಾಪನೆ ನಿರ್ದೇಶಕ ಎಂ.ಗೋಪಾಲಕೃಷ್ಣ ಭಟ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

