ನಾಲ್ಕೂರು ಡೆಂಘೀ ಪೀಡಿತ ಪ್ರದೇಶ ಪರಿಶೀಲನೆ
ಸುಬ್ರಹ್ಮಣ್ಯ: ಇತ್ತೀಚೆಗೆ ನಾಲ್ಕೂರು ಗ್ರಾಮದ ಹೊಸಹಳ್ಳಿ ಪ್ರದೇಶದಲ್ಲಿ ಜ್ವರಕಾಣಿಸಿದ್ದು ಮಹಿಳೆ ಒಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಗುತ್ತಿಗಾರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಂದಕುಮಾರ್ ನೇತೃತ್ವದಲ್ಲಿ ಗುರುವಾರ ಈ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜ್ವರದಿಂದ ಮೃತಪಟ್ಟ ಮಹಿಳೆ ಹುದೇರಿ ನಿರ್ಮಲರ ಮನೆಗೆ ಭೇಟಿ ನೀಡಿ ಮನೆಯ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿ ಇಡುವಂತೆ ಸೂಚಿಸಿದರು. ನಂತರ ಡಾ. ನಂದಕುಮಾರ್‌ರವರು ಈ ಭಾಗದಲ್ಲಿ ಇಲಿ ಜ್ವರವಿಲ್ಲ. ಡೆಂಗ್ಯೂ ಜ್ವರ ಇರುವುದು ಖಚಿತವಾಗಿದೆ. ಇದು ಆಕಾಲಿಕ ಮಳೆಯಿಂದಾಗಿ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಸಾಂಕ್ರಮಿಕ ಜ್ವರ ವ್ಯಾಪಿಸಿದೆ. ಇದು ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ ಎಂದು ತಿಳಿಸಿದ್ದಾರೆ.
ಅನುಸರಿಸಬೇಕಾದ ಕ್ರಮ: ಅದಕ್ಕಾಗಿ ಜನರಿಗೆ ವೈದ್ಯಕೀಯ ಶಿಕ್ಷಣದಡಿ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ಕೊಳಚೆ ನೀರು ಶೇಖರಣೆಯಾಗದಂತೆ ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು. ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳನ್ನು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳೆನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥಾವ ವಿಲೇವಾರಿ ಮಾಡುವುದು ಸೊಳ್ಳೆ ನಿರೋಧಕಗಳನ್ನು ಮತ್ತು ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸುವುದು ಹಾಗೂ ಔಷದಿ ಸಿಂಪಡಿಸುವುದು, ತೊಟ್ಟಿಗಳಲ್ಲಿ ಕೀಟ ತಿನ್ನುವ ಮೀನು ಸಾಕುವುದು. ಈ ಬಗ್ಗೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಜ್ವರ ಕಾಣಿಸಿದರೆ ತಕ್ಷಣ ಪ್ರಥಮಿಕ ಅರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳುವಂತೆ ಈ ಸಂದರ್ಭದಲ್ಲಿ ಅವರು ಸೂಚಿಸಿದ್ದರು. ಈ ಮಧ್ಯೆ ಇನ್ನೊಬ್ಬ ಜ್ವರ ಪೀಡಿತ ಮಹಿಳೆ ಮೀನಾಕ್ಷಿ ಗುಡ್ಡೆಮನೆಗೆ ತೆರಳಿ ಮನೆಯ ಸುತ್ತಮುತ್ತಲು ಮತ್ತು ಹಂದಿ ಸಾಕಣೆ ಕೇಂದ್ರ ಮತ್ತು ಆ ಪ್ರದೇಶವನ್ನು ಶುಚಿಯಾಗಿ ಇಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಇವರೊಂದಿಗೆ ಜಿಲ್ಲಾ ಅರೋಗ್ಯ ಕೇಂದ್ರದ ಸುಬ್ರಹ್ಮಣ್ಯ ಹೊಳ್ಳ, ತಾಲೂಕು ವೈದ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ವಾಸುದೇವನಾಯಕ್, ಸದಾಶಿವ ರಾವ್, ಅರೋಗ್ಯ ಕೇಂದ್ರದ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಗ್ರಾಮ ನೈರ್ಮಲ್ಯ ಸಮಿತಿ ಅದ್ಯಕ್ಷೆ ಜ್ಯೋತಿ ಪ್ರೇಮನಂದ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

