ಅಭ್ಯರ್ಥಿ ನೋಡಬೇಡಿ, ಪಕ್ಷ ಗೆಲ್ಲಿಸಿ...!
-ಆತ್ಮಭೂಷಣ್
ಮಂಗಳೂರು: 'ಅಭ್ಯರ್ಥಿ ಯಾರಾದರೂ ಸರಿ, ಪಕ್ಷವನ್ನು ಗೆಲ್ಲಿಸಿ'!
ಈ ಬೀಜಮಂತ್ರವನ್ನು ಬಿಜೆಪಿ ಈ ಬಾರಿ ರಾಜ್ಯದೆಲ್ಲೆಡೆ ಕಡ್ಡಾಯ ಪಠಿಸಲು ಮುಂದಾಗಿದೆ. ಪಕ್ಷವನ್ನು ಗೆಲ್ಲಿಸಿ ಎನ್ನುವುದು ಬಿಜೆಪಿಗೆ ಹೊಸದಲ್ಲ, ಆದರೆ ಕಳೆದ ಅವಧಿಯಲ್ಲಿ ನಡೆದ ರಾಜಕೀಯ ಕೆಟ್ಟ ಬೆಳವಣಿಗೆ ಹಿನ್ನಲೆಯಲ್ಲಿ ಕಳೆದುಕೊಂಡ ವರ್ಚಸ್ಸು ಮರಳಿ ಪಡೆಯಲು, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷವನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಅಂಗಲಾಚುವ ಏಕಮೇವ ತಂತ್ರವನ್ನು ಹೆಣೆದಿದೆ.
ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕಿರಬಹುದು, ಇವರಲ್ಲಿ ಹಲವು ಮಂದಿ ಘಟಾನುಘಟಿಗಳೂ ಇರಬಹುದು. ಅವರ ಸಾಧನೆಯನ್ನು ಹೇಳಿ, ಜತೆಗೆ ಪಕ್ಷವನ್ನು ಗೆಲ್ಲಿಸಿಕೊಡಿ ಎನ್ನುವುದನ್ನು ಹೇಳಲು ಮಾತ್ರ ಮರೆಯಬೇಡಿ. ಅದಕ್ಕಿಂತಲೂ ಮುಖ್ಯವಾಗಿ ಪಕ್ಷವನ್ನು ಗೆಲ್ಲಿಸಿಕೊಡಿ, ತಾವರೆ ಚಿನ್ನೆಗೆ ಮತ ನೀಡಿ ಎಂದು ಕಡ್ಡಾಯ ಹೇಳಲೇ ಬೇಕು- ಹೀಗೆಂದು ರಾಜ್ಯ ನಾಯಕರು ಜಿಲ್ಲಾ ಮುಖಂಡರಿಗೆ ಕಿವಿಯೂದಿದ್ದಾರೆ. ಇದನ್ನೇ ಪಕ್ಷದ ಬೈಠಕ್‌ಗಳಲ್ಲಿ ಬಾಯಿಪಾಠ ಮಾಡಿಸಿ, ಮನೆ ಮನೆ ಭೇಟಿ ವೇಳೆ ಹೇಳುವಂತೆ ಕಾರ್ಯಕರ್ತರಿಗೆ ಸೂಚಿಸುತ್ತಿದ್ದಾರೆ.
ಪಕ್ಷಕ್ಕೆ ಜೈ ಎನ್ನಿರಿ...: ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಆರಂಭಗೊಂಡರೂ ಬಿಜೆಪಿ ಅಭ್ಯರ್ಥಿ ಆಯ್ಕೆ ಪಟ್ಟಿ ಪೂರ್ಣಗೊಂಡಿಲ್ಲ. ಆದರೂ ಪ್ರಚಾರ ಕಾರ್ಯದಲ್ಲಿ ಎಲ್ಲರಿಗಿಂತ ಬಿಜೆಪಿ ಮುಂದಿದೆ. 2ನೇ ಹಂತದ ಅಭ್ಯರ್ಥಿ ಪಟ್ಟಿ ಬಳಿಕ 3ನೇ ಹಂತದ ಪಟ್ಟಿ ಬಿಡುಗಡೆಗೆ ಒದ್ದಾಟ ನಡೆಸಬೇಕಾಗಿದೆ. ಪಕ್ಷಕ್ಕೆ ಯಡಿಯೂರಪ್ಪ ಏಟಿನ ಬಳಿಕ ಅಭ್ಯರ್ಥಿಗಿಂತ ಪಕ್ಷ ಮುಖ್ಯ ಎಂಬ ತತ್ವಕ್ಕೆ ಹೆಚ್ಚಿನ ಒತ್ತು ನೀಡುವ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಪಕ್ಷ ಹಾಗೂ ತತ್ವಸಿದ್ಧಾಂತಕ್ಕೆ ಮೊದಲ ಆದ್ಯತೆ. ಅಭ್ಯರ್ಥಿಗೆ ನಂತರದ ಸ್ಥಾನ. ಈ ನಿಯಮವನ್ನು ಕರಾವಳಿ ಜಿಲ್ಲೆಗಳಲ್ಲಿ ಇದುವರೆಗೆ ಪಾಲಿಸುತ್ತ ಬಂದ ಕಾರಣ ಈ ಮಂತ್ರ ಬಿಜೆಪಿ ಗೆಲವಿಗೆ ಮಹತ್ತರ ಪಾತ್ರ ವಹಿಸಿತ್ತು. ಇದನ್ನೇ ಪ್ರಚಾರದಲ್ಲಿ ರಾಜ್ಯವ್ಯಾಪಿ ಕಟ್ಟುನಿಟ್ಟಾಗಿ ಪಾಲಿಸುವಂತೆ ನಾಯಕತರು ತಾಕೀತು ಮಾಡಿದ್ದಾರೆ.
ಪ್ರಥಮ ಸುತ್ತು ಪೂರ್ಣ: ಜಿಲ್ಲೆಯ ಬೆಳ್ತಂಗಡಿ ಮತ್ತು ಮೂಡುಬಿದಿರೆಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿಲ್ಲ.
ಆದರೆ ಇಲ್ಲಿ ಮನೆ ಮನೆಗೆ ಕಾರ್ಯಕರ್ತರು ತೆರಳಿ ಪಕ್ಷ ಚಿನ್ನೆಗೆ ಮತ ನೀಡುವಂತೆ ಕೋರುತ್ತಿದ್ದಾರೆ.
ಪ್ರತಿ ಮನೆ ಭೇಟಿ ವೇಳೆ ಕುಂದುಕೊರತೆ ಆಲಿಸುತ್ತಾರಲ್ಲದೆ, ಮತದಾರರ ಪಟ್ಟಿಗೆ ಸೇರ್ಪಡೆಯಾದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಬಿಜೆಪಿ ಚಿನ್ನೆಗೆ ತಪ್ಪದೆ ಮತ ನೀಡಿ ಎನ್ನುತ್ತಾರೆ. ಎರಡನೇ ಸುತ್ತಿನ ಭೇಟಿಯಲ್ಲಿ ಅಭ್ಯರ್ಥಿ ಬಗ್ಗೆ ಮತ ಕೇಳುವುದಾಗಿ ಕಾರ್ಯಕರ್ತರು ಹೇಳುತ್ತಾರೆ. ಈ ರೀತಿ ಮನೆ ಮನೆ ಭೇಟಿ ಸಾಗುತ್ತಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು.
ಚುನಾವಣೆ ಘೋಷಣೆಗೆ ಸಂದರ್ಭ ಸ್ಥಳೀಯಾಡಳಿತ ಚುನಾವಣೆ ಮುಕ್ತಾಯವಾದ್ದರಿಂದ ನಗರ ಪ್ರದೇಶದಲ್ಲಿ ಪ್ರಚಾರಕ್ಕೆ ರಾಜಕೀಯ ಪಕ್ಷಗಳಿಗೆ ಕಷ್ಟಪಡಬೇಕಾದ್ದಿಲ್ಲ. ಹೇಗೂ ಸ್ಥಳೀಯ ಸಂಸ್ಥೆ ಚುನಾವಣೆಗೆ ಮನೆ ಮನೆ ಪ್ರಚಾರ ಕೈಗೊಳ್ಳಲಾಗಿದೆ.
ಇನ್ನು ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ಬಳಿಕ ತೆರಳಿದರೆ ಸಾಕು ಎಂಬ ಅಭಿಪ್ರಾಯದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

