ಟ್ಯಾಂಕರ್ ದುರಂತ: ಮೃತರ ಸಂಖ್ಯೆ 9ಕ್ಕೇರಿಕೆ
ಕ.ಪ್ರ. ವಾರ್ತೆ ಉಪ್ಪಿನಂಗಡಿ ಏ.12
ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಟ್ಯಾಂಕರ್ ಅಪಘಾತದಿಂದ ಉಂಟಾದ ಅಗ್ನಿ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿಮಲಾ (26) ಗುರುವಾರ ರಾತ್ರಿ ಮೃತಪಟ್ಟಿದ್ದು, ಘಟನೆಯಲ್ಲಿ ಮೃತಪಟ್ಟವರು ಸಂಖ್ಯೆ 9ಕ್ಕೇರಿದೆ.
ಪೆರ್ನೆಯ ಬಡ ಕೂಲಿ ಕಾರ್ಮಿಕ ಅಣ್ಣು ನಾಯ್ಕ್ ಎಂಬವರ ಮಗಳು ವಿಮಲಾ ಪೆರ್ನೆಯ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು. ತಾಯಿ, ಸೋದರನನ್ನು ಕಳೆದುಕೊಂಡು ತಂದೆ, ತಂಗಿಯೊಂದಿಗೆ ಜೀವನ ನಡೆಸುತ್ತ ಕುಟುಂಬಕ್ಕೆ ಆಧಾರವಾಗಿದ್ದ ಇವರ ಸಾವು ಅವರ ಕುಟುಂಬಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ.
ಮಾನವೀಯತೆ ಮೆರೆದ ಜನರು: ದುರಂತದಿಂದ ಸಂತ್ರಸ್ತರಾದ ಮಂದಿಗೆ ಸ್ಪಂದಿಸಲು ರಚಿಸಲಾದ ನಾಗರಿಕ ಸ್ಪಂದನ ಸಮಿತಿ ಉದ್ಯಮಿ ಅಶೋಕ್ ರೈ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಗ್ರಾಮಸ್ಥರಿಗೆ ಧನ ಸಹಾಯ ಮಾಡಿತು. ಗಾಯಾಳುಗಳ, ಮೃತರ ಕುಟುಂಬಗಳಿಗೆ ತಲಾ 10 ಸಾವಿರ ನಗದು ವಿತರಿಸಿದರು. ಸಭೆಯಲ್ಲಿ ತೈಲ ಕಂಪೆನಿಗಳ ಮತ್ತು ಸರ್ಕಾರದ ವಿಳಂಬಿತ ಸ್ಪಂದನಕ್ಕೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ಕಂದಾಯ ಇಲಾಖೆ ಸ್ಪಂದನ: ದುರ್ಘಟನೆಯಲ್ಲಿ ಸಂತ್ರಸ್ತರಾದ ಮಂದಿಗೆ ಮನೆಯನ್ನು ನಿರ್ಮಿಸಲು ಕಂದಾಯ ಇಲಾಖೆಯು ನಿವೇಶನವನ್ನು ಗಡಿ ಗುರುತು ಮಾಡಿಕೊಡುವ ಕಾರ್ಯವನ್ನು ಉಪ ತಹಸೀಲ್ದಾರ್ ನೇತೃತ್ವದಲ್ಲಿ ಮಾಡಲಾಯಿತು. ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ಪರಿಹಾರವನ್ನು, ಗಾಯಾಳು ಕುಟುಂಬಗಳಿಗೆ ತಲಾ 50 ಸಾವಿರ ತುರ್ತು ಪರಿಹಾರದ ಚೆಕ್ ವಿತರಿಸಲಾಯಿತು.
ಇದೇ ವೇಳೆ ಇಂಡಿಯನ್ ರೆಡ್ಕ್ರಾಸ್ ಸಂಸ್ಥೆಯಿಂದ ರಾಜೀವ್ ಶೆಟ್ಟಿ ಬಸ್ರೂರು ನೇತೃತ್ವದಲ್ಲಿ ನಿರ್ಗತಿಕರಾದ ಕುಟುಂಬಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

