ಮೇ ಅಂತ್ಯಕ್ಕೆ ಗಡುವು: ಕಾಮಗಾರಿ ಮುಕ್ತಾಯ ಅಸಾಧ್ಯ
ಮಂಗಳೂರು: ಸಂಪಾಜೆ-ಮಾಣಿ ರಾಜ್ಯ ಹೆದ್ದಾರಿ ಕಾಮಗಾರಿ 2012 ಜುಲೈಗೆ ಮುಗಿಯಬೇಕಿತ್ತು. ಎರಡನೇ ಬಾರಿ ಅವಧಿ ವಿಸ್ತರಿಸಿ 2013 ಮೇ ಗಡುವು ವಿಧಿಸಲಾಗಿದೆ. ಇಷ್ಟಾದರೂ ಗುತ್ತಿಗೆದಾರ ಸಂಸ್ಥೆ ಕೆಎಂಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಲಕ್ಷಣ ಕಂಡುಬರುತ್ತಿಲ್ಲ. ಈ ಮಧ್ಯೆ ಮತ್ತೆ ಗುತ್ತಿಗೆ ಅವಧಿ ವಿಸ್ತರಿಸುವುದಿಲ್ಲ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್ಡಿಸಿಎಲ್)ಪಟ್ಟು ಹಿಡಿದಿದೆ. ಹಾಗಾಗಿ ಈ ಬಾರಿ ಮಳೆಗಾಲದಲ್ಲಿ ಹೆದ್ದಾರಿ ಅಧ್ವಾನವನ್ನು ಅನಿವಾರ್ಯವಾಗಿ ವಾಹನಗಳು ಸಹಿಸಿಕೊಳ್ಳಬೇಕಾಗಿದೆ.
72 ಕಿ.ಮೀ ದೂರದ ಸಂಪಾಜೆ-ಮಾಣಿ ಹೆದ್ದಾರಿ ಕಾಮಗಾರಿ ವೆಚ್ಚ ರು. 176.62 ಕೋಟಿ. 2012 ಅಕ್ಟೋಬರ್ ಮೊದಲು ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ಕೆಆರ್ಡಿಸಿಎಲ್ ಸೂಚಿಸಿತ್ತು. ಆದರೆ ಗುತ್ತಿಗೆದಾರ ಸಂಸ್ಥೆಯ ಉದಾಸೀನ ಮತ್ತು ಬೇಜವಾಬ್ದಾರಿಯಿಂದ ಈ ಪ್ರಕ್ರಿಯೆ ವಿಳಂಬವಾಗಿತ್ತು.
ಕಾವು ಮಾಡ್ನೂರು-ಕುಂಬ್ರದ ಶೇಖಮಲೆ ಮಧ್ಯೆ 37 ಕಿ.ಮೀ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಸುಳ್ಯದ ಮರ್ಕಂಜದಲ್ಲಿ ರಸ್ತೆಬದಿ ಕಲ್ಲುಕೋರೆ ಕಾಮಗಾರಿ ಸ್ಥಗಿತಗೊಂಡು ಹೆದ್ದಾರಿ ಕಾಮಗಾರಿ ಕುಂಠಿತಕ್ಕೆ ಕಾರಣವಾಗಿದೆ. ಮಾಣಿ-ಕಾವು ವರೆಗೆ ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸುವ ಶಾಸ್ತ್ರ ಆಗಲಿದೆ. ಕಾವಿನಿಂದ ಸಂಪಾಜೆ ವರೆಗೆ ಮಳೆಗಾಲ ನಂತರ ಕಾಮಗಾರಿ ಶುರುವಾಗಬೇಕು. ಮಳೆಗಾಲ ಹತ್ತಿರ ಬರುತ್ತಿದ್ದರೂ ಎಲ್ಲಿಯೂ ಸರಿಯಾಗಿ ರಸ್ತೆ ಬದಿ ಚರಂಡಿ ಕಾಮಗಾರಿ ಕೈಗೆತ್ತಿಕೊಂಡಿಲ್ಲ.
ಸಮಜಾಯಿಸಿ ಕೊಡ್ತಾರೆ: ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದೆ. ಸಾಧ್ಯವಾದಷ್ಟು ಕಡೆ ತಿರುವುಗಳನ್ನು ನೇರಗೊಳಿಸಲಾಗುತ್ತಿದೆ. ಯೋಜನಾ ವರದಿ ಪ್ರಕಾರವೇ ಕಾಮಗಾರಿ ನಡೆಯುತ್ತಿದೆ ಎನ್ನುವುದು ಕಾಮಗಾರಿ ಉಸ್ತುವಾರಿ ಸಂಸ್ಥೆಯ ಸಮಜಾಯಿಸಿ.
2013 ಮೇ ಕೊನೆಯೊಳಗೆ ಕಾಮಗಾರಿ ಮುಕ್ತಾಯಗೊಳಿಸುವಂತೆ ಕೆಎಂಸಿ ಗುತ್ತಿಗೆ ಸಂಸ್ಥೆಗೆ ತಾಕೀತು ಮಾಡಲಾಗಿದೆ. ಮುಂದೆ ಅವಧಿ ವಿಸ್ತರಿಸುವುದಿಲ್ಲ ಎಂದು ಹೇಳಿದ್ದೇವೆ. ಅಲ್ಲಿವರೆಗೆ ಎಷ್ಟು ಕಾಮಗಾರಿ ಮಾಡುತ್ತಾರೆ ಎಂದು ನೋಡಬೇಕು. ತಿರುವುಗಳನ್ನು ಅವೈಜ್ಞಾನಿಕವಾಗಿ ಮಾಡಿದರೂ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ರಸ್ತೆ ಸೇರುವಲ್ಲಿ ಜಂಕ್ಷನ್ಗಳನ್ನು ಅಭಿವೃದ್ಧಿಪಡಿಸಲು ಬಾಕಿ ಇದೆ. ವಾಸ್ತವದಲ್ಲಿ ಮೇ ಅಂತ್ಯಕ್ಕೆ ಸಂಪಾಜೆ-ಮಾಣಿ ಹೆದ್ದಾರಿ ಕಾಮಗಾರಿ ಪೂರ್ತಿಯಾಗದು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಕೆಆರ್ಡಿಸಿಎಲ್ ಅಧಿಕಾರಿ.
ಈ ಪ್ರಶ್ನೆಗಳಿಗೆ ಉತ್ತರ ಏನು?:
- ಮೂಲಸೌಕರ್ಯ ಅಭಿವೃದ್ಧಿ ಸಲುವಾಗಿ ದೊಡ್ಡ ಪ್ರಮಾಣದ ಕಾಮಗಾರಿ ಕೈಗೆತ್ತಿಕೊಳ್ಳುವಾಗ ವಿವರವಾದ ಯೋಜನಾ ವರದಿ(ಡಿಪಿಆರ್)ಯನ್ನು ಸಾಕಷ್ಟು ಅನುಭವ ಇರುವ ಸಂಸ್ಥೆಗಳಿಂದ ಪಡೆಯಲಾಗುತ್ತದೆ.
ರಸ್ತೆ ಕಾಮಗಾರಿಯನ್ನು ಗಮನಿಸಿದರೆ ಯೋಜನಾ ವರದಿ ದೋಷಪೂರಿತ/ಅವೈಜ್ಞಾನಿಕವಾಗಿ ಇರುವ ಸಂಶಯ ವ್ಯಕ್ತಗೊಳ್ಳುತ್ತಿದೆ. ಡಿಪಿಆರ್ ಪ್ರಕಾರ ಕಾಮಗಾರಿ ನಡೆದಿಲ್ಲ ಎನ್ನುವುದು ಸಾರ್ವಜನಿಕರ ಅಂಬೋಣ.
- ಕೆಎಂಸಿ ಗುತ್ತಿಗೆ ಸಂಸ್ಥೆ ಸರಿಯಾಗಿ ಕಾಮಗಾರಿ ನಡೆಸದಿರುವಾಗ ಕಾಮಗಾರಿ ಉಸ್ತುವಾರಿ ನಡೆಸುತ್ತಿರುವ ಸಂಸ್ಥೆ ಅದನ್ನು ನೋಡಿಯೂ ಸುಮ್ಮನಿರುವುದು ಅಚ್ಚರಿಗೆ ಕಾರಣವಾಗಿದೆ. ಅಥವಾ ಈ ಸಂಸ್ಥೆಯ ಮಾತಿಗೆ ಗುತ್ತಿಗೆದಾರ ಸಂಸ್ಥೆ ಮನ್ನಣೆ ನೀಡುತ್ತಿಲ್ಲ ಎನ್ನಬೇಕಾಗುತ್ತದೆ.
- ಕಾಮಗಾರಿ ಅನುಷ್ಠಾನ ವೇಳೆ ಕೆಆರ್ಡಿಸಿಎಲ್ ಸಹಾಯಕ ಎಂಜಿನಿಯರ್ ಹಾಗೂ ವಿಭಾಗೀಯ ಎಂಜಿನಿಯರ್ರನ್ನು ಸರ್ಕಾರದ ಪರವಾಗಿ ನಿಯುಕ್ತಿಗೊಳಿಸಲಾಗುತ್ತದೆ. ಈ ಅಧಿಕಾರಿಗಳು ಕೂಡ ಗುತ್ತಿಗೆದಾರ ಸಂಸ್ಥೆಗೆ ಬೇಕಾಬಿಟ್ಟಿ ಕಾಮಗಾರಿಗೆ ಹೇಗೆ ಸಮ್ಮತಿಸಿದರು ಎಂದು ಪ್ರಶ್ನಿಸುವಂತಾಗಿದೆ.
- ಇಲಾಖೆಯ ಉನ್ನತ ಅಧಿಕಾರಿಗಳು ಕಾಮಗಾರಿ ಲೋಪದ ಬಗ್ಗೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದರೆ ನಿಗಮದ ಕಾರ್ಯಪಾಲಕ ಎಂಜಿನಿಯರ್ರು ಹಾಗೂ ಮುಖ್ಯ ಎಂಜಿನಿಯರ್ ಇದನ್ನು ಸರಿದಾರಿಗೆ ತರಬೇಕು.
ಇವರುಗಳ ಮೇಲೆ ನಿಯಂತ್ರಣವಿರಿಸಬೇಕಾದ ನಿಗಮದ ಆಡಳಿತ ನಿರ್ದೇಶಕರೂ ಕರ್ತವ್ಯ ಪಾಲನೆಯಲ್ಲಿ ವಿಫಲರಾದರೇ ಎಂದು ಕೇಳುವಂತಾಗಿದೆ.
- ಕಾಮಗಾರಿ ಲೋಪ, ಅನುಷ್ಠಾನದಲ್ಲಿ ನಿರ್ಲಕ್ಷ್ಯ ಇತ್ಯಾದಿ ಬಗ್ಗೆ ಕಾಮಗಾರಿಯ ಪರಾಮರ್ಶೆಗೆ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು.
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

