ಶಕುಂತಳಾ ಶೆಟ್ಟಿ ಇಂದು ನಾಮಪತ್ರ ಸಲ್ಲಿಕೆ
ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಕುಂತಳಾ ಶೆಟ್ಟಿಯವರ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಪಕ್ಷದ ಚುನಾವಣಾ ಕಚೇರಿಯಲ್ಲಿ ಬಿರುಸಿನ ಚಟುವಟಿಕೆ ಕಂಡು ಬಂದಿದೆ.
ಮಂಗಳವಾರ ರಾತ್ರಿಯ ತನಕ ಕಚೇರಿಯಲ್ಲಿ ಕಾರ್ಯಕರ್ತರ ದಂಡು ಕಂಡು ಬಂದಿದ್ದು ಬುಧವಾರ ನಡೆಯಲಿರುವ ನಾಮಪತ್ರ ಸಲ್ಲಿಕೆಯ ಪೂರ್ವ ತಯಾರಿ ನಡೆಯುತ್ತಿತ್ತು.
ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ ಶಕುಂತಳಾ ಶೆಟ್ಟಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷರಾಗಿದ್ದ ಕಾವು ಹೇಮನಾಥ ಶೆಟ್ಟಿ ಹಾಗೂ ಮಾಜಿ ಶಾಸಕ ವಿನಯ ಕುಮಾರ್ ಸೊರಕೆಯವರ ಹೆಸರು ಕೇಳಿ ಬಂದಿತ್ತು. ಈ ನಡುವೆ ಕೊನೆಯ ಕ್ಷಣದಲ್ಲಿ ವಿನಯ ಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದ್ದು, ಅವರಿಗೆ ಟಿಕೆಟು ಖಚಿತ ಎಂದೇ ಪ್ರಚಾರವಾಗಿತ್ತು.
ಬಳಿಕ ಸೊರಕೆ ತನಗೆ ಕಾಪು ಕ್ಷೇತ್ರದಿಂದ ಟಿಕೆಟು ನೀಡುವಂತೆ ಹಾಗೂ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಅವರಿಗೆ ಅವಕಾಶ ಒದಗಿಸುವಂತೆ ಪಕ್ಷದ ನಾಯಕರಲ್ಲಿ ವಿನಂತಿಸಿದ್ದರು ಎಂದು ಪ್ರಚಾರವಾಗಿತ್ತು. ಇದಕ್ಕೆ ಕಾರಣವೂ ಸ್ಪಷ್ಟವಾಗಿತ್ತು. ಸೊರಕೆಯವರ ನೇತೃತ್ವದಲ್ಲಿಯೇ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಆದಾಗ್ಯೂ ಕಾಂಗ್ರೆಸ್ ಹೈಕಮಾಂಡ್ ಪುತ್ತೂರಿಗೆ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡದಿರುವ ಹಿನ್ನಲೆಯಲ್ಲಿ ಹಲವರ ಹೆಸರು ಕೇಳಿ ಬಂದಿತ್ತು. ಕೊನೆಗೂ ಶಕುಂತಳಾ ಶೆಟ್ಟಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಪುತ್ತೂರಿನಾದ್ಯಂತ ಕಾರ್ಯಕರ್ತರಲ್ಲಿ ಹುರುಪು ಹುಮ್ಮಸ್ಸು ಗರಿಗೆದರಿದೆ.
ದೇವಸ್ಥಾನ ಭೇಟಿ: ಮಂಗಳವಾರ ಸಂಜೆ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಶಕುಂತಳಾ ಶೆಟ್ಟಿ ಉಪ್ಪಿನಂಗಡಿಗೆ ತೆರಳಿ ಅಲ್ಲಿನ ದೇವಸ್ಥಾನಗಳಿಗೆ ಮತ್ತು ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ರಾತ್ರಿ ವೇಳೆ ಪುತ್ತೂರಿಗೆ ಆಗಮಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ಮಾಜಿ ಬ್ಲಾಕ್ ಅಧ್ಯಕ್ಷ ಸುಧಾಕರ ಶೆಟ್ಟಿ, ಪಕ್ಷದ ಹಿರಿಯರಾದ ಮಾಜಿ ಜಿ.ಪಂ. ಅಧ್ಯಕ್ಷ ಸಂಕಪ್ಪ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಪುತ್ತೂರಲ್ಲಿ ಜಿದ್ದಿನ ಆಟ ಶುರು
ಉಪ್ಪಿನಂಗಡಿ: ಬಹು ಕುತೂಹಲದ ಕ್ಷೇತ್ರವಾಗಿ ಪರಿಗಣಿತವಾಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಯ್ಕೆಯಾಗುವುದರೊಂದಿಗೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸ್ವಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಬೆಂಗಳೂರಿನ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಬಿ ಫಾರಂ ಪಡೆದುಕೊಂಡು ತವರು ಕ್ಷೇತ್ರದ ಉಪ್ಪಿನಂಗಡಿಗೆ ಮಂಗಳವಾರ ಸಂಜೆ ಆಗಮಿಸಿದ ಶಕುಂತಲಾ ಶೆಟ್ಟಿ ಅವರನ್ನು ಭಾರಿ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಜಯಕಾರದ ಘೋಷಣೆಯೊಂದಿಗೆ ಸ್ವಾಗತಿಸಿದರು.
ಬಳಿಕ ಉಪ್ಪಿನಂಗಡಿಯ ಶ್ರೀಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯ, ಲಕ್ಷ್ಮೀ ವೆಂಕಟರಮಣ- ಆಂಜನೇಯ ದೇವಾಲಯ ಹಾಗೂ ಕೇಂದ್ರ ಜುಮ್ಮಾ ಮಸೀದಿಗೆ ಭೇಟಿ ನೀಡಿ ದೇವರಲ್ಲಿ ಗೆಲವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ರಾಧಾಕೃಷ್ಣ ನಾಯ್ಕ್, ಜೋಹರಾ ನಿಸಾರ್ ಆಹಮ್ಮದ್, ಯು. ರಾಮ, ಚಂದ್ರಹಾಸ ಶೆಟ್ಟಿ, ದೇವಿದಾಸ್ ರೈ, ಅಶ್ರಫ್ ಬಸ್ತಿಕಾರ್, ಮುಸ್ತಾಫ ಕೆಂಪಿ, ಅಸ್ಕರಾಲಿ, ಪ್ರಭಾತ್ ಭಟ್, ನಝೀರ್ ಮಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

