21ಕ್ಕೆ ಮಂಗಳೂರಲ್ಲಿ ಬ್ರಾಹ್ಮಣ ಜಾಗೃತಿ ಸಮ್ಮೇಳನ
ಕ.ಪ್ರ. ವಾರ್ತೆ ಮಂಗಳೂರು ಏ.17
ಶಿವಳ್ಳಿ, ಹವ್ಯಕ, ಕೋಟ, ಸ್ಥಾನಿಕ ಕೋಟೇಶ್ವರ, ಚಿತ್ಪಾವನ, ಕರ್ಹಾಡ, ದೇಶಸ್ಥರ 'ಬ್ರಾಹ್ಮಣ ಜಾಗೃತಿ ಸಮ್ಮೇಳನ' ಏ.21ರಂದು ನಗರದ ಸಂಘನಿಕೇತನದಲ್ಲಿ ಖ್ಯಾತ ಆಹಾರೋದ್ಯಮಿ, ಅಂಕಣಕಾರ ಡಾ.ಪಿ.ಸದಾನಂದ ಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣರ ಒಕ್ಕೂಟ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾಹಿತಿ ನೀಡಿ, ಸಂವೇದನೆ, ಸಂಘಟನೆ, ಸಂವರ್ಧನೆ, ಸಂರಕ್ಷಣೆ ಉದ್ದೇಶದಡಿ ಸಮ್ಮೇಳನ ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ನಡೆಯಲಿದೆ. ಬೆಳಗ್ಗೆ 6ರಿಂದ ಹೋಮ, ಹವನಾದಿಗಳು ಪ್ರಾರಂಭವಾಗಲಿದ್ದು, 8ಕ್ಕೆ ಮೆರವಣಿಗೆ, 9ರಿಂದ ಸಮ್ಮೇಳನ ಉದ್ಘಾಟನೆಯಾಗುತ್ತದೆ. ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ, ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಸ್ವಾಮೀಜಿ, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪಾಲ್ಗೊಳ್ಳುವರು ಎಂದರು.
ಬೆಳಗ್ಗೆ 11ರಿಂದ ಪ್ರಸ್ತುತ ಜ್ವಲಂತ ಸಮಸ್ಯೆಗಳ ವಿಚಾರವಾಗಿ ತಜ್ಞರಿಂದ ಮತ್ತು ಸ್ವಾಮೀಜಿಯವರಿಂದ ಚಿಂತನ ಮತ್ತು ಮಾರ್ಗದರ್ಶನ ನಡೆಯಲಿದೆ. ಮಧ್ಯಾಹ್ನ 1ರಿಂದ ಪುರಾಣ ವಾಚನ, ಚೂರ್ಣಿಕಾ, ಮಾಲಿಕಾ ಮಂಗಳಾರತಿ, 2.30ರಿಂದ ಚಿಂತನ, ಮಾರ್ಗದರ್ಶನ, ಸಮಾಜದ ಸಾಧಕ ಗಣ್ಯರಿಗೆ ಸಾಧನಾ ಪುರಸ್ಕಾರ, ಸಂಜೆ 4ಕ್ಕೆ ಸಮಾರೋಪ, 6ರಿಂದ ನಾದ, ತಾಳ, ಲಯ, ನೃತ್ಯ, ಯಕ್ಷಗಾನ ವೈಭವ ಜರುಗಲಿದೆ ಎಂದರು.
ಸಮ್ಮೇಳನದಲ್ಲಿ ವಸ್ತು ಪ್ರದರ್ಶನ ಮಳಿಗೆ, ಉದ್ಯೋಗ ಮಾಹಿತಿ ಪುಸ್ತಕ, ವಿವಾಹ ವೇದಿಕೆ, ಧಾರ್ಮಿಕ ಗ್ರಂಥ ಮಳಿಗೆ, ಮಯ್ಯಾಸ್ ಆಹಾರೋತ್ಪನ್ನ ಮಳಿಗೆಗಳು ಇರಲಿದೆ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಪಿ.ಸದಾನಂದ ಮಯ್ಯ
ಬ್ರಾಹ್ಮಣ ಜಾಗೃತಿ ಸಮ್ಮೇಳನಾಧ್ಯಕ್ಷ ಡಾ.ಪಿ.ಸದಾನಂದ ಮಯ್ಯ ಅವರು ಬೆಂಗಳೂರಿನ ಮಯ್ಯಾಸ್ ಬಿವರೇಜ್ಸ್ ಮತ್ತು ಫುಡ್ ಪ್ರೈ.ಲಿ.ನ ಮಾಲೀಕರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಇವರನ್ನು ತುಮಕೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಜೀರ್ಣೋದ್ಧಾರದಲ್ಲಿ, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಬ್ರಾಹ್ಮಣ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಭಾರ್ಗವ ಪ್ರಶಾಂತ, ನರಸಿಂಹ, ಕನ್ನಡ ರಾಜ್ಯೋತ್ಸವ, ಆರ್ಯಭಟ, ಕೆಂಪೇಗೌಡ ಮೊದಲಾದ ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಡಾ.ಮಯ್ಯ ಅವರು ಆಹಾರ ವಿಜ್ಞಾನ ತಂತ್ರಜ್ಞಾನ ಕೇಂದ್ರ ಸ್ಥಾಪಿಸಿ ಪಾಕಶಾಸ್ತ್ರದಲ್ಲಿ ಒಂದು ಆಂದೋಲನವನ್ನೇ ಆರಂಭಿಸಿದ್ದಾರೆ. ಸಾಟಿಯಿಲ್ಲದ ಸಾಧನೆಯಿಂದ ಉದಾತ್ತ ಧ್ಯೇಯ ಧೋರಣೆಯಿಂದ ಶಿಸ್ತುಬದ್ಧ ಜೀವನ ಶೈಲಿಯಿಂದ ಪ್ರಸಿದ್ಧರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

