ಫಾಲ್ಘಾಟ್ ರೇಲ್ವೆ ವಿಭಾಗ ಶೇ.32 ಪ್ರಗತಿ ದಾಖಲು
ಮಂಗಳೂರು: ನೈಋತ್ಯ ರೇಲ್ವೆಯ ಫಾಲ್ಘಾಟ್ ವಿಭಾಗ 2012-13ನೇ ಸಾಲಿನಲ್ಲಿ ರು. 878.46 ಕೋಟಿ ಆದಾಯ ಹೊಂದಿ ಶೇ.32 ಪ್ರಗತಿ ದಾಖಲಿಸಿದೆ. ಮೇಲ್, ಎಕ್ಸ್ಪ್ರೆಸ್, ಪ್ಯಾಸೆಂಜರ್ ರೈಲು ಸಂಚಾರದಿಂದ ಶೇ.95ರ ಬದಲು ಶೇ.96 ಗುರಿ ಮೀರಿದ ಆದಾಯ ದಾಖಲಿಸಿದೆ.
ಫಾಲ್ಘಾಟ್ನ ಕಲಾಮಂದಿರದಲ್ಲಿ ಮಂಗಳವಾರ ನಡೆದ 58ನೇ ರೇಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ವಿಭಾಗೀಯ ವ್ಯವಸ್ಥಾಪಕ ಪೀಯೂಶ್ ಅಗರ್ವಾಲ್ ಇದನ್ನು ತಿಳಿಸಿದರು.
ಪ್ರಸ್ತುತ ಈ ವಿಭಾಗದಲ್ಲಿ 759 ವಿಶೇಷ ರೈಲುಗಳು ಮತ್ತು 23 ಹೆಚ್ಚುವರಿ ಕೋಚ್ಗಳು ಸಂಚರಿಸುತ್ತಿವೆ. ಕಳೆದ ಸಾಲಿನಲ್ಲಿ 7,068 ಮಿಲಿಯನ್ ಟನ್ ಸರಕು ಸಾಗಾಟ ಮಾಡಿದ್ದು, ಶೇ.32.26 ಸಾಧನೆ ದಾಖಲಿಸಿ, ಶೇ.19.45 ಗುರಿ ಮೀರಿದ ಸಾಧನೆ ಮಾಡಿದೆ. ಮಾ.31ರಂದು 720 ವ್ಯಾಗನ್ಗಳ ಸರಕು ಸಾಗಾಟ ನಡೆಸಲಾಗಿದೆ ಎಂದರು.
ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಕಣ್ಣೂರುಗಳಲ್ಲಿ ಜೆಟ್ ಕ್ಲೀನರ್ ಮುಖೇನ ನಿಲ್ದಾಣದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಗುತ್ತಿದೆ. 6 ನಿಲ್ದಾಣಗಳ ಫ್ಲ್ಯಾಟ್ ಫಾರಂ ಮೇಲ್ದರ್ಜೆಗೆ, 4 ನಿಲ್ದಾಣಗಳ ಸಾಮರ್ಥ್ಯ ವೃದ್ಧಿಗೊಳಿಸಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಫಾಲ್ಘಾಟ್ಗಳಲ್ಲಿ ಪಾದಚಾರಿ ಮೇಲ್ಸೇತುವೆ ರಚಿಸಲಾಗಿದೆ ಎಂದರು.
ಮಂಗಳೂರು ಜಂಕ್ಷನ್-ನೇತ್ರಾವತಿ ಮಧ್ಯೆ ದ್ವಿಹಳಿ ಕಾಮಗಾರಿ ನಡೆದಿದ್ದು, ತೊಕೂರು-ಪಣಂಬೂರು ಮಧ್ಯೆ ಬೈಪಾಸ್ ಲೈನ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲಕ್ಕೆ ಮೊದಲು ಭೂಕುಸಿತ ಕಡೆ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದರು. ಉತ್ತಮ ನಿರ್ವಹಣೆ ತೋರಿಸಿದ ಪಾಲಕ್ಕಾಡ್ ವಿಭಾಗ ಮತ್ತು ಕೋಝಿಕ್ಕೋಡ್ ವಿಭಾಗಕ್ಕೆ ನಗದು ಪುರಸ್ಕಾರ ನೀಡಲಾಯಿತು.
ಟ್ಯಾಂಕರ್ ದುರಂತ: ಸೂಕ್ತ ಪರಿಹಾರ ಬೇಡಿಕೆ
ಮಂಗಳೂರು: ಉಪ್ಪಿನಂಗಡಿಯ ಪೆರ್ನೆಯಲ್ಲಿ ಸಂಭವಿಸಿದ ಅನಿಲ ಟ್ಯಾಂಕರ್ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ದುರಂತದಲ್ಲಿ 10 ಮಂದಿ ಸಾವಿಗೀಡಾಗಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಆದರೂ ಸರ್ಕಾರ ದುರಂತವನ್ನು ಗಂಭೀರವಾಗಿ ಪರಿಗಣಿಸಿಲ್ಲ. ದುರಂತದಲ್ಲಿ ಆಸ್ತಿಪಾಸ್ತಿ ಕಳಕೊಂಡವರಿಗೆ ಪರಿಹಾರ ನೀಡಬೇಕು, ಪುನರ್ವಸತಿ ಕಲ್ಪಿಸಬೇಕು. ಟ್ಯಾಂಕರ್ಗಳಿಗೆ ವೇಗ ಮಿತಿ ಅಳವಡಿಸಬೇಕು. ಅನಿಲ ಸಾಗಾಟಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

