ಸುಳ್ಯ: ರಸ್ತೆ ಕಾಮಗಾರಿ ಬಹುತೇಕ ಸ್ಥಗಿತ
ದುರ್ಗಾಕುಮಾರ್ ನಾಯರ್ಕೆರೆ
ಸುಳ್ಯ: ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಅಗತ್ಯ ಕಾಮಗಾರಿಗಳೇ ಸ್ಥಗಿತಗೊಂಡಿದ್ದು ಒಂದು ಕಡೆಯಾದರೆ ಚುನಾವಣೆ ಬರುತ್ತದೆ ಎಂದ ಕೂಡಲೇ ಕಾಮಗಾರಿ ಆರಂಭಗೊಂಡದ್ದು ಮತ್ತೊಂದು ಕಡೆ... ಈಗ ನಡೆಯುತ್ತಿರುವ ಕಾಮಗಾರಿಗಳು ಚುನಾವಣೆಗೆ ಮೊದಲೇ ಮುಗಿಸಿಬಿಡಬೇಕೆಂಬ ಧಾವಂತದಿಂದ ವೇಗ ಪಡೆಯುತ್ತಿರುವುದು ಇನ್ನೊಂದು ಕಡೆ...
ಹೀಗೆ ಸುಳ್ಯದ ಹಲವು ಕಡೆ ನಡೆಯುತ್ತಿರುವ ಕಾಮಗಾರಿಗಳೊಂದಿಗೆ ಚುನಾವಣಾ ನೀತಿ ಸಂಹಿತೆ ತಳುಕು ಹಾಕಿಕೊಂಡಿದೆ.
ಕಾಮಗಾರಿ ರಾಜಕೀಯ: ಸುಳ್ಯದಿಂದ ಆಲೆಟ್ಟಿ, ಬಡ್ಡಡ್ಕ ಮಾರ್ಗವಾಗಿ ಕಲ್ಲಪ್ಪಳ್ಳಿ ಮೂಲಕ ಕೇರಳ ಸಂಪರ್ಕಿಸುವ ಅಂತರಾಜ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ನೀತಿ ಸಂಹಿತೆಯ ಕಾರಣದಿಂದ ನಿಂತಿದೆ. ಈ ಅಂತರಾಜ್ಯ ರಸ್ತೆ ಸುಮಾರು 20 ವರ್ಷಗಳಿಂದ ಸಮರ್ಪಕ ಮರುಡಾಂಬರೀಕರಣ ಕಂಡಿರಲಿಲ್ಲ. ರಸ್ತೆಯಲ್ಲಿ ಬೃಹತ್ ಪ್ರಮಾಣದ ಹೊಂಡ ಗುಂಡಿಗಳಿಂದಾಗಿ ಸಂಚಾರವೇ ತ್ರಾಸದಾಯಕವಾಗಿತ್ತು. ಊರವರು ಜನಪ್ರತಿನಿಧಿಗಳನ್ನು ಹಲವು ಬಾರಿ ಒತ್ತಾಯಿಸಿದರೂ, ಫಲಕಾರಿಯಾಗಿರಲಿಲ್ಲ.
ಕೆಲವು ತಿಂಗಳ ಹಿಂದಷ್ಟೇ ಈ ರಸ್ತೆಯನ್ನು ಅಗಲಗೊಳಿಸಿ ಪೂರ್ಣ ಮರುಡಾಂಬರಿಕರಣಗೊಳಿಸಲು ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ರು. 2 ಕೋಟಿ ಹಾಗೂ ಹೊಂಡ ಮುಚ್ಚಲು ಸಂಸದರ ನಿಧಿಯಿಂದ ರು. 20 ಲಕ್ಷ ಮಂಜೂರಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆ ನಡೆಯುವುದಕ್ಕೂ ಮೊದಲೇ ಕಾಮಗಾರಿಗೆ ಗುದ್ದಲಿಪೂಜೆ ನಡೆದು ಕಾಮಗಾರಿ ಆರಂಭಿಸಲಾಗಿತ್ತು.
ಟೆಂಡರ್ಗೂ ಮೊದಲೇ...: ಟೆಂಡರ್ ಹಾಕಿದವರು ಮೊಗೆರೋಡಿ ಕನ್ಸ್ಟ್ರಕ್ಷನ್ ಅವರು ಮಾತ್ರವಾದುದರಿಂದ ಮತ್ತು ರಸ್ತೆ ದುಸ್ಥಿತಿಯ ಬಗ್ಗೆ ಜನರಿಗಿರುವ ತೀವ್ರ ಅಸಮಾಧಾನ ಚುನಾವಣೆಯ ವೇಳೆ ಪ್ರತಿಕೂಲವಾಗಬಹುದೆಂಬ ಕಾರಣದಿಂದ ಶಾಸಕರು ಮತ್ತು ಬಿಜೆಪಿ ನಾಯಕರು ಮೊಗೆರೋಡಿ ಕನ್ಸ್ಟ್ರಕ್ಷನ್ನವರಲ್ಲಿ ಮಾತನಾಡಿ ಟೆಂಡರ್ ತೆರೆಯುವ, ಅಗ್ರಿಮೆಂಟ್ ಆಗುವ ಮತ್ತು ವರ್ಕ್ ಆರ್ಡರ್ ಆಗುವ ಮೊದಲೇ ಕಾಮಗಾರಿ ಆರಂಭಿಸಲು ಸೂಚಿಸಿದ್ದರು. ಅದರಂತೆ ಕಾಮಗಾರಿ ಆರಂಭಗೊಂಡಿದ್ದು, 20 ಲಕ್ಷದ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಕೂಡಾ ಆರಂಭವಾಗಿತ್ತು.
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆಯೇ ಚುನಾವಣಾ ಉದ್ದೇಶಕ್ಕಾಗಿ ನೀತಿಸಂಹಿತೆ ಉಲ್ಲಂಘಿಸಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ ಎಂದು ಸುಳ್ಯದ ಕಾಂಗ್ರೆಸ್ ನಾಯಕರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಇಲಾಖೆಯವರು ಕಾಮಗಾರಿ ಸ್ಥಗಿತಗೊಳಿಸಿದರು. ಇದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ರಾಜಕೀಯ ಸಮರಕ್ಕೂ ವೇದಿಕೆಯಾಯಿತು. ಸತ್ಯ ಪ್ರಮಾಣದ ಮಾತುಗಳೂ ಬಂದವು. ಇದೇ ಚುನಾವಣಾ ವಸ್ತುವೂ ಆಗುವ ಸಂಭವವಿತ್ತು.
ಆದರೆ, ಸ್ಥಳೀಯ ಕೆಲವು ಮುಖಂಡರ ಮಧ್ಯಸ್ಥಿಕೆಯಿಂದ ವಿವಾದ ತಣ್ಣಗಾಗಿ ಮತ್ತೆ ಕೆಲಸ ಶುರುವಾಯಿತು. ಎರಡು ದಿನ ಕಾಮಗಾರಿ ನಡೆಯುವಷ್ಟರಲ್ಲಿ ಮತ್ತೆ ಅಧಿಕಾರಿಗಳಿಗೆ ದೂರು ಹೋಯಿತು. ಹೀಗಾಗಿ ನೀತಿಸಂಹಿತೆಯ ಹೆಸರಲ್ಲಿ ಆಗಲೇಬೇಕಾದ ರಸ್ತೆ ಕಾಮಗಾರಿಯೊಂದು ಸ್ಥಗಿತಗೊಂಡಿದೆ. ಜನತೆ ಹಿಡಿಶಾಪ ಹಾಕುತ್ತಲೇ ಸಂಚರಿಸುತ್ತಿದ್ದಾರೆ.
ಕೊಲ್ಲಮೊಗ್ರ ರಸ್ತೆ..: ಇನ್ನೊಂದು ನಡುಗಲ್ಲು- ಕೊಲ್ಲಮೊಗ್ರ ರಸ್ತೆ ಕಾಮಗಾರಿಯ ಕತೆ. ಒಂದು ಕೋಟಿ ವೆಚ್ಚದಲ್ಲಿ ನಡುಗಲ್ಲು- ಕೊಲ್ಲಮೊಗ್ರ ರಸ್ತೆ ಕಾಮಗಾರಿಗೆ ಇತ್ತೀಚೆಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದ್ದರು. ಕೊಲ್ಲಮೊಗ್ರದಿಂದ ಕಾಮಗಾರಿ ಆರಂಭಗೊಂಡಿತು. ಚುನಾವಣೆಯ ದಿನ ನಿಗದಿಯಾಗಿ ನೀತಿ ಸಂಹಿತೆ ಜಾರಿಯಾದುದರಿಂದ ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ಕೆಲಸ ಆರಂಭಿಸಿರುವುದರಿಂದ ಈ ಕೆಲಸವೂ ನಿಂತಿತು. ಈ ವಿಚಾರದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ರಾಜಕೀಯ ಸಮರ ನಡೆದು ಸಾರ್ವಜನಿಕ ಸಭೆಯಲ್ಲಿ ಸಂಶಯ ನಿವಾರಿಸುವ ಮೂಲಕ ವಿವಾದ ತಣ್ಣಗಾಯಿತು.
ಕಾಮಗಾರಿಗೆ ವೇಗ: ಸುಳ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಅನೇಕ ರಸ್ತೆ ಕಾಮಗಾರಿಗಳು ಭರದಿಂದ ನಡೆಯುತ್ತಿದೆ. ಬಹು ಬೇಡಿಕೆಯಾದ ಜಾಲ್ಸೂರು- ಸುಬ್ರಹ್ಮಣ್ಯ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣ ಕಾಮಗಾರಿಯು ಈ ಮೊದಲೇ ಆರಂಭಗೊಂಡದ್ದರಿಂದ ಹಾಗೇ ಮುಂದುವರಿದಿದೆ. ವಿಶೇಷವೆಂದರೆ ಈ ಕಾಮಗಾರಿ ತೀವ್ರ ವೇಗವನ್ನೂ ಪಡೆದುಕೊಂಡಿದೆ.
ನೆನೆಗುದಿಗೆ ಬಿದ್ದಿದ್ದ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ- ಪುತ್ತೂರು ಭಾಗದ ಕಾಮಗಾರಿ ಮಾತ್ರ ಅದೇ ಆಮೆಗತಿಯಲ್ಲೇ ಮುಂದುವರಿಯುತ್ತಿದೆ.
ಉಳಿದಂತೆ ಚುನಾವಣೆ ನೀತಿಸಂಹಿತೆ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡ ಹೆಚ್ಚು ಉದಾಹರಣೆಗಳು ಇಲ್ಲವಾದರೂ, ಸಣ್ಣಪುಟ್ಟ ಸಮಸ್ಯೆಗಳಿರುವ ಕಡೆ ಮತದಾರರು ಮತದಾನ ಬಹಿಷ್ಕಾರದ ಕೂಗು ಹಾಕುತ್ತಿರುವುದರಿಂದ ಬೇರೆ ಬೇರೆ ಪಕ್ಷದವರು ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಮೊರೆ ಇಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

