ಮದ್ಯ ಅಕ್ರಮ ಮಾರಾಟ: ಆರೋಪಿ ಸೆರೆ
ಬೈಂದೂರು: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬನನ್ನು ಪೋಲೀಸರು ಬಂಧಿಸಿದ ಪ್ರಕರಣ ಇಲ್ಲಿನ ಯಳಜಿತ್ ಗ್ರಾಮದಲ್ಲಿ ಭಾನುವಾರ ನಡೆದಿದೆ. ಆರೋಪಿ ರಾಜೇಂದ್ರ ಕೊಠಾರಿ ಎಂಬವರು ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನಂತೆ ಪೊಲೀಸರು ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ ಮತ್ತು ಆತನ ಬಳಿಯಿದ್ದ ಸುಮಾರು ರು. 8875 ಮೌಲ್ಯದ 198 ಬಾಟಲು ಮದ್ಯವನ್ನು ಮತ್ತು ರು. 575 ನಗದು ಹಣ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಜುಗಾರಿ ಆಡುತ್ತಿದ್ದ 6 ಮಂದಿ ಬಂಧನ
ಹೆಬ್ರಿ: ಇಲ್ಲಿನ ಶಿವಪುರ ಗ್ರಾಮದ ಎಲಗೋಳಿಯ ಸಾರ್ವಜನಿಕ ಸ್ಥಳದ ಹಾಡಿಯಲ್ಲಿ ಜುಗಾರಿ ಆಟ ಆಡುತ್ತಿದ್ದ 6 ಆರೋಪಿಗಳನ್ನು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಆರೋಪಿಗಳಾದ ಶ್ಯಾಮರಾಮ ಅಚಾರಿ, ಕೃಷ್ಣಯ್ಯ ಆಚಾರಿ, ಸುರೇಶ್ ಶೆಟ್ಟಿ, ಶಂಕರ ಮಡಿವಾಳ, ಪ್ರವೀಣ ಶೆಟ್ಟಿ, ಮಂದಾರ ಶೆಟ್ಟಿ ಇವರು ಶನಿವಾರ ರಾತ್ರಿ ಸುಮಾರು 11.15ರ ಹೊತ್ತಿಗೆ ಜೂಜಾಟ ಆಡುತ್ತಿದ್ದರೆಂಬ ಖಚಿತ ಮಾಹಿತಿ ಪಡೆದ ಪೋಲಿಸರು ದಾಳಿ ನಡೆಸಿ ರು. 1380 ನಗದು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಾನಸಿಕ ಖಿನ್ನತೆ: ವೃದ್ಧೆ ನೇಣಿಗೆ ಶರಣು
ಮಲ್ಪೆ: ಇಲ್ಲಿನ ಪಡುತೋನ್ಸೆ ಗ್ರಾಮದ ಕೆಮ್ಮಣ್ಣಿನಲ್ಲಿ ಮಾನಸಿಕ ಖಿನ್ನತೆಗೊಳಗಾದ ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಮೃತರು ಲೀಲಾವತಿ ಪೂಜಾರ್ತಿ(71) ಅವರು ಅಡುಗೆ ಮನೆಯ ಡೈನಿಂಗ್ ಟೇಬಲ್ ಹತ್ತಿ ಫ್ಯಾನಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ಕಾಲದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಪ್ರಕಾಶ್ ಸುವರ್ಣ ಎಂಬವರು ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಾಹನ ಡಿಕ್ಕಿ: ಅಪರಿಚಿತ ವ್ಯಕ್ತಿ ಸಾವು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಕುಳಾಯಿ ಬಾರ್ ಎದುರು ಭಾನುವಾರ ವಾಹನ ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ಸಾವಿಗೀಡಾಗಿದ್ದಾನೆ. ಈತನ ಗುರುತು ಪತ್ತೆಯಾಗಿಲ್ಲ. ಈತ ಗುಜರಿ ವ್ಯಾಪಾರಿ ಎನ್ನಲಾಗಿದೆ. ರಸ್ತೆ ದಾಟುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾಜಾಸ್ತಾನದ ಯುವಕ ನಾಪತ್ತೆ
ಮಂಗಳೂರು: ನಗರದ ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕ ದೋಲಾರಾಮ(18) ಏ.19ರಿಂದ ನಾಪತ್ತೆಯಾದ ಘಟನೆ ವರದಿಯಾಗಿದೆ. ರಾಜಸ್ತಾನದ ಅರುಣ ಗ್ರಾಮ ನಿವಾಸಿಯಾದ ಈತ ಅಂಗಡಿ ಕೆಲಸಕ್ಕೆ ಮಂಗಳೂರಿಗೆ ಬಂದಿದ್ದ ಎಂದು ಕಾಪ್ರಿಗುಡ್ಡ ನಿವಾಸಿ ಸುರೇಶ್ ಬಂದರು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

