ದಕ್ಷಿಣ ಕನ್ನಡ

ಹಲವು ದಾಖಲೆಗಳ ಕದನ ಕಣ ಸುಳ್ಯ

Published On :

-ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಪ್ರಥಮ ಬಾರಿಗೆ ದಾಖಲೆ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣದಲ್ಲಿ ಉಳಿಯುವ ಮೂಲಕ ಚುನಾವಣಾ ಕಣಕ್ಕೆ ಹೊಸ ರಂಗು ಬಂದಿದೆ. ಹಲವು ಕಾರಣಗಳಿಂದ ಈ ಬಾರಿಯ ಕದನ ಕಣ ವಿಶೇಷತೆಯನ್ನೂ ಪಡೆದಿದೆ.
 ಕಣದಲ್ಲಿ ಈ ಬಾರಿ 9 ಅಭ್ಯರ್ಥಿಗಳು ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಎಸ್.ಅಂಗಾರ, ಕಾಂಗ್ರೆಸ್‌ನಿಂದ ಡಾ. ರಘು, ಜೆಡಿಎಸ್‌ನಿಂದ ನಂದರಾಜ್ ಸಂಕೇಶ, ಕೆಜೆಪಿಯಿಂದ ಚಂದ್ರಾವತಿ, ಎಸ್‌ಡಿಪಿಐನಿಂದ ಕೂಸಪ್ಪ ಹಾಗೂ ಪಕ್ಷೇತರರಾಗಿ ಕರುಣೇಶ್, ಕೆ.ಕುಶಲ, ಎ. ಅಂಗಾರ, ಕುಂಞರಾಮನ್ ಕಣದಲ್ಲಿದ್ದಾರೆ.
ಹೊಸ ದಾಖಲೆ: ಇಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳಿರುವುದು ಇದೇ ಪ್ರಥಮ. 1962ರ ಚುನಾವಣೆಯಲ್ಲಿ 4 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. 1967ರಲ್ಲಿ 3 ಮಂದಿ, 1972ರಲ್ಲಿ 4, 1978ರಲ್ಲಿ 5, 1983ರಲ್ಲಿ 4, 1985ರಲ್ಲಿ 4 ಮಂದಿ ಕಣದಲ್ಲಿದ್ದರು. 1989ರಲ್ಲಿ 4, 1994ರಲ್ಲಿ 4, 1999ರಲ್ಲಿ 3, 2004ರಲ್ಲಿ 3 ಹಾಗೂ 2008ರ ಚುನಾವಣೆಯಲ್ಲಿ 4 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಮೊದಲ ಮಹಿಳಾ ಅಭ್ಯರ್ಥಿ: ಸುಳ್ಯ ಕ್ಷೇತ್ರದ ಚುನಾವಣಾ ಕಣದಲ್ಲಿ ಮಹಿಳೆಯೊಬ್ಬರು ಸ್ಪರ್ಧಿಯಾಗಿರುವುದು ಕೂಡ ಇದು ಮೊದಲ ಬಾರಿ. ಕೆಜೆಪಿಯ ಚಂದ್ರಾವತಿ ಈ ದಾಖಲೆಗೆ ಪಾತ್ರರಾಗಿದ್ದಾರೆ.
ಒಂದೇ ಕುಟುಂಬದ ಇಬ್ಬರು ಕಣಕ್ಕೆ: ಚುನಾವಣಾ ಕಣದಲ್ಲಿ ಒಂದೇ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವುದು ಕೂಡ ಕಂಡುಬಂದಿದೆ. ಕೆ.ಕುಶಲ ಮತ್ತು ಅವರ ಸಹೋದರ ವಸಂತ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು, ವಸಂತ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಕುಶಲರ ಅಕ್ಕನ ಮಗಳು ಚಂದ್ರಾವತಿ. ಹೀಗಾಗಿ ಒಂದೇ ಕುಟುಂಬದ ಇಬ್ಬರು ಕಣದಲ್ಲಿದ್ದಾರೆ.
ಒಂದೇ ಹೆಸರಿನ ಇಬ್ಬರು: ಒಂದೇ ಹೆಸರಿನ ಇಬ್ಬರು ಅಭ್ಯರ್ಥಿ ಕಣದಲ್ಲಿರುವುದು ಮತ್ತೊಂದು ವಿಶೇಷ. ಬಿಜೆಪಿಯಿಂದ ಎಸ್. ಅಂಗಾರ, ಪಕ್ಷೇತರರಾಗಿ ಎ.ಅಂಗಾರ ಕಣದಲ್ಲಿದ್ದಾರೆ.
ಅಂಗಾರ ಆರನೇ ಬಾರಿ: ಎಸ್. ಅಂಗಾರ 6ನೇ ಬಾರಿ ಸ್ಪರ್ಧಾ ಕಣದಲ್ಲಿದ್ದರೆ, ಕೆ.ಕುಶಲ 5ನೇ ಬಾರಿ ಕಣದಲ್ಲಿದ್ದಾರೆ. ಕುಶಲ 3 ಬಾರಿ ಕಾಂಗ್ರೆಸ್‌ನಿಂದ, 1 ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಈ ಬಾರಿ ಪಕ್ಷೇತರರಾಗಿ ಕಣದಲ್ಲಿದ್ದಾರೆ. ಡಾ. ರಘು 3ನೇ ಬಾರಿ ಕಣದಲ್ಲಿದ್ದಾರೆ. ಸ್ಪರ್ಧಾ ಕಣದಲ್ಲಿರುವ ಮೂವರು ಸರ್ಕಾರಿ ಉದ್ಯೋಗಕ್ಕೆ ರಾಜಿನಾಮೆ ನೀಡಿ ರಾಜಕೀಯಕ್ಕೆ ಬಂದಿರುವವರು. ಡಾ. ರಘು ಸರಕಾರಿ ವೈದ್ಯಾಧಿಕಾರಿಯಾಗಿದ್ದು, ಅದಕ್ಕೆ ರಾಜಿನಾಮೆ ನೀಡಿ 10 ವರ್ಷಗಳ ಹಿಂದೆ ರಾಜಕೀಯ ಪ್ರವೇಶ ಮಾಡಿದ್ದರು.
     ನಂದರಾಜ್ ಸಂಕೇಶ್ ಅಂಚೆಪಾಲಕರಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ರಾಜಿನಾಮೆ ನೀಡಿದ್ದರು. ಗ್ರಾಮಕರಣಿಕರಾಗಿದ್ದ ಕುಶಲ ರಾಜಿನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿದ್ದರು. ಕುಂಞರಾಮನ್ ನಿವೃತ್ತ ಸರ್ಕಾರಿ ನೌಕರ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.