ನೀರಿನ ಪೈಪ್ ದುರಸ್ತಿ ಆಗ್ರಹ: ಪ್ರತಿಭಟನೆ
ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ವೇಳೆ ನೀರಿನ ಪೈಪ್ ಒಡೆದ್ದು, ಇದನ್ನು ಸರಿಪಡಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಭಕ್ತಕೋಡಿ ಎಂಬಲ್ಲಿ ನಡೆಯಿತು.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಸರ್ವೆ, ಭಕ್ತಕೋಡಿ ಪರಿಸರದ ಸಾರ್ವಜನಿಕರು ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಲೋಕೋಯೋಗಿ ಇಲಾಖೆಯ ವಿರುದ್ಧ ಭಕ್ತಕೋಡಿಯಲ್ಲಿ ಸೋಮವಾರ ಒಂದು ಗಂಟೆಗಳ ಕಾಲ ರಸ್ತೆ ತಡೆ ನಿರ್ಮಿಸಿ, ಪ್ರತಿಭಟನೆ ನಡೆಸಿದರು.
ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಒಡೆದು ಹೋದ ನೀರಿನ ಪೈಪನ್ನು ದುರಸ್ತಿ ಮಾಡದ ಕಾರಣ ಮುಂಡೂರು ಗ್ರಾಮದ ಸರ್ವೆ, ಭಕ್ತಕೋಡಿ ನಿವಾಸಿಗಳಿಗೆ ಕಳೆದ 5 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸಮಸ್ಯೆಯ ಕುರಿತು ದೂರು ನೀಡಿದರೂ ಸಂಬಂಧಪಟ್ಟ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ನಿರ್ಲಕ್ಷ್ಯ ತೋರಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದ್ದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ ಪ್ರತಿಭಟನಾಕಾರರು ಒಡೆದು ಹಾಕಲಾದ ಪೈಪನ್ನು ಸರಿಪಡಿಸಿ ನೀರಿನ ಸಮಸ್ಯೆಯನ್ನು ನಿವಾರಿಸದಿದ್ದಲ್ಲಿ ರಸ್ತೆಯಲ್ಲೇ ಮಲಗುವುದಾಗಿ ಎಚ್ಚರಿಕೆ ನೀಡಿದರು.
ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಮಗೆ ಪಂಚಾಯಿತಿ ನೀರಿನ ವ್ಯವಸ್ಥೆ ಇಲ್ಲವಾದ್ದರಿಂದ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರಿನ ಪೈಪು ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಮಾಡಿಕೊಡಬೇಕು. ಅಲ್ಲಿಯ ತನಕ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರು ನಾಳೆಯೇ ಒಡೆದು ಹೋಗಿರುವ ಪೈಪನ್ನು ದುರಸ್ತಿಗೊಳಿಸಿ ಕೊಡುವುದಾಗಿ ಭರವಸೆ ನೀಡಿದರು. ಈ ಭರವಸೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಮುಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯೋಗಿನಿ, ಮಾಜಿ ಅಧ್ಯಕ್ಷ ಎಸ್.ಡಿ. ವಸಂತ, ತಾಲೂಕು ಪಂಚಾಯಿತಿ ಸದಸ್ಯೆ ಸುಮತಿ ಸರ್ವೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಕುಮಾರ್ ಸೊರಕೆ, ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎಂ. ಶರೀಫ್, ಮಾಜಿ ಸದಸ್ಯ ರಾಮಚಂದ್ರ ಸೊರಕೆ, ಸ್ಥಳೀಯ ಪ್ರಮುಖರಾದ ಶಿವನಾಥ ರೈ ಮೇಗಿನಗುತ್ತು, ಯತೀಶ್ ರೈ, ಶಾಫಿ ಸೊರಕೆ, ಅಶೋಕ್ ನಾಯ್ಕ ಸೊರಕೆ, ವಸಂತ ಬಿ.ಎಸ್., ಭಾಸ್ಕರ ಬಂಗಾಡಿ, ಸುಬ್ರಹ್ಮಣ್ಯ ಕರುಂಬಾರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

