ಮನೆ ದುರಸ್ತಿಗೆ ತಬ್ಬಲಿಗಳ ಪರದಾಟ
ಉಪ್ಪಿನಂಗಡಿ: ಅದೊಂದು ಮನೆಯಂತಹ ಕಟ್ಟಡ... ಆದರೂ, ಮನೆಯಲ್ಲ. ಅಲ್ಲಿ ಭವ್ಯ ಮತ್ತಾಕೆಯ ತಮ್ಮ ಪ್ರಮೋದ್ ಎಂಬ ಇಬ್ಬರು ಮಕ್ಕಳು ಮಾತ್ರ ವಾಸ್ತವ್ಯ. ತಂದೆ ತಾಯಿ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದರೆ ಪ್ರಾಥಮಿಕ ಶಾಲೆಗೆ ಹೋಗುತ್ತಿರುವ ಈ ಮಕ್ಕಳಿಗೆ ದೇವರೇ ಗತಿ.
ಸಹೃದಯಿ ಬಂಧುಗಳ ನೆರವಿನ ಫಲವಾಗಿ ಶಿಕ್ಷಣ ದೊರೆಯುತ್ತಿದೆ. ಆದರೆ, ಛಾವಣಿ ಪೂರ್ತಿ ಧರೆಗುಳಿದಿರುವ ಮನೆಯನ್ನು ದುರಸ್ತಿಗೊಳಪಡಿಸಲು ಎಲ್ಲಿಯೂ ಸಹಕಾರವಿಲ್ಲ. ದಿಕ್ಕೆಟ್ಟ ಭವ್ಯ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದು ಸಹಾಯ ಯಾಚಿಸುತ್ತಾಳೆ. ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಸೂಕ್ತ ಸ್ಪಂದನ ನೀಡಿ ಎಂದು ಸೂಚನೆ ರವಾನೆಯಾಗುತ್ತದೆ. ಜಿಲ್ಲಾಧಿಕಾರಿ ಕಚೇರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿ ಜಿಲ್ಲಾ ಪಂಚಾಯಿತಿಗೆ ಪತ್ರ ಕಳುಹಿಸುತ್ತದೆ.
ಪರಿಣಾಮ ಹಿರೆಬಂಡಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದ್ದಾರೆ. ಮನೆಯನ್ನು ನೀವೇ ದುರಸ್ತಿ ಪಡಿಸಿ ನಾವು ಬಳಿಕ ಹಣ ನೀಡುತ್ತೇವೆ ಎಂದು ತಿಳಿಸಿ ಹೋಗಿದ್ದಾರೆ. ನಂಬಿ ಆವರಿವರ ಕೈಯಿಂದ ಹಣವನ್ನು ಸಾಲವಾಗಿ ಪಡೆದು ಮನೆಯ ಛಾವಣಿ ದುರಸ್ತಿ ಪಡಿಸಿ ಹಣ ಕೇಳಿದರೆ, ಹಾಗೆಲ್ಲಾ ಹಣ ಸಿಗುವುದಿಲ್ಲ... ನೀವು ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ ಹಣ ಬಂದರೂ ಬರಬಹುದು ಎನ್ನುತ್ತದೆ ಪಂಚಾಯಿತಿ ಆಡಳಿತ.
ಯಾರು ಈ ಮಕ್ಕಳು?: ಪ್ರೇಮ ಮತ್ತು ರತ್ನಾಕರ ದಂಪತಿಯ ಇಬ್ಬರು ಮಕ್ಕಳು ಭವ್ಯ ಮತ್ತು ಪ್ರಮೋದ್. ಹಿರೇಬಂಡಾಡಿ ಗ್ರಾಮದ ನಂದಿನಿ ನಗರ ಭಜನಾ ಮಂದಿರದ ಮುಂಭಾಗದ ಮನೆಯಲ್ಲಿ ಇವರ ವಾಸ್ತವ್ಯ. ತಂದೆಯನ್ನು ಈ ಮೊದಲೇ ಕಳೆದುಕೊಂಡಿದ್ದ ಈ ಮಕ್ಕಳಿಬ್ಬರ ಏಕೈಕ ಆಧಾರವಾಗಿದ್ದ ತಾಯಿ ಪ್ರೇಮ ಅನಾರೋಗ್ಯ ಉಲ್ಬಣಿಸಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದರು. ನೋಡು ನೋಡುತ್ತಿದ್ದಂತೆಯೇ ಆನಾಥರಾದ ಮಕ್ಕಳ ಪೈಕಿ ಭವ್ಯ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರೆ, ಪ್ರಮೋದ್ ಪುತ್ತೂರಿನ ರಾಮಕೃಷ್ಣ ಆಶ್ರಮದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾನೆ.
ಆದರೆ, ಊರಿನ ತನ್ನ ಮನೆಯ ದುಸ್ಥಿತಿಯನ್ನು ನಿವಾರಿಸಲಾಗದೆ ಈ ಎಳೆಯ ಜೀವಗಳು ತಳಮಳಕ್ಕೆ ತುತ್ತಾಗಿದ್ದವು. ಕಟ್ಟಕಡೆಗೆ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ನಿರ್ಗತಿಕರಾಗಿರುವ ನಮ್ಮ ಮನೆಯನ್ನು ದುರಸ್ತಿಗೊಳಿಸಲು ಸರ್ಕಾರದ ಸಹಕಾರ ಯಾಚಿಸಿದರು. ಮುಖ್ಯಮಂತ್ರಿ ಕಚೇಯಿಂದ 2012ರ ನ. 17ರಂದು ಪತ್ರ ಸಂಖ್ಯೆ ಸಿಎಂ- 78388 ಆರ್ಇಪಿ- ಜಿಇಎನ್- 2012 ರಲ್ಲಿ ದ.ಕ ಜಿಲ್ಲಾಧಿಕಾರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಲಾಗಿತ್ತು.
ಈ ಬಗ್ಗೆ ದ.ಕ ಜಿಲ್ಲಾಧಿಕಾರಿಗಳ ಕಚೇರಿಯಿಂದ 2012ರ ಡಿ. 12 ರಂದು ಪತ್ರ ಸಂಖ್ಯೆ ಇಡಿಎಸ್ಎಂಎಸ್ಸಿ (2ಎ) ಸಿಆರ್ 89/2012 13 (ಡಿ 6) 93878 ರಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದು ಮುಖ್ಯಮಂತ್ರಿಯವರ ಕಚೇರಿಯಿಂದ ಬಂದ ಪತ್ರದನ್ವಯ ನಿರ್ಗತಿಕ ಮಕ್ಕಳ ಮನೆಯ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶ ನೀಡಲಾಗಿತ್ತು.
ಈ ಪ್ರಕ್ರಿಯೆಯ ಬೆನ್ನಲ್ಲೇ ಹಿರೆಬಂಡಾಡಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭವ್ಯಾಳ ಮನೆ ಪರಿಶೀಲಿಸಿ, ಮಕ್ಕಳಿಬ್ಬರು ಅಪ್ರಾಪ್ತ ವಯಸ್ಕರಾದ ಹಿನ್ನೆಲೆಯಲ್ಲಿ ಮನೆ ದುರಸ್ತಿಗೆ ಸಂಬಂಧಿಸಿ ಸರ್ಕಾರದ ಹಣವನ್ನು ಪಡೆಯಲು ಮಕ್ಕಳ ಸಂಬಂಧಿಯಾಗಿರುವ ಲೀಲಾವತಿಗೆ ಅಧಿಕಾರವನ್ನು ನೀಡಿದ ಪತ್ರವನ್ನೂ ಮಕ್ಕಳಿಂದ 2013ರ ಜ. 30ರಂದು ಪಡೆಯಲಾಗಿತ್ತು. ಮನೆ ದುರಸ್ತಿಗೆ ಹಣ ಮಂಜೂರಾಗಿರುವ ವಿಚಾರವನ್ನೂ ತಿಳಿಸಲಾಗಿತ್ತು. ಹಣ ಕೈ ಸೇರಬೇಕಾದರೆ ಮೊದಲು ಮನೆಯನ್ನು ದುರಸ್ತಿ ಪಡಿಸಿ, ಬಳಿಕ ಹಣ ಸಿಗುವುದೆಂದು ಪಂಚಾಯಿತಿ ಅಧಿಕಾರಿಗಳು ತಿಳಿಸಿದರು. ಬಂದ ಹಣ ಕೈ ತಪ್ಪುವುದು ಬೇಡ ಎಂಬ ಭಾವನೆಯಿಂದ ಹಣ ಬಂದ ಕೂಡಲೇ ಮರು ಪಾವತಿಸುತ್ತೇನೆ ಎಂದು ಭರವಸೆ ನೀಡಿ ಅವರಿವರಿಂದ ಹಣ ಪಡೆದು ಮನೆಯ ಛಾವಣಿ ದುರಸ್ತಿ ಪಡಿಸಿ ಹಣ ನೀಡಿ ಎಂದರೆ, ಪಂಚಾಯಿತಿ ಅಧಿಕಾರಿಗಳ ಮಾತಿನ ವರಸೆ ಬದಲಾಗಿತ್ತು. 'ಬಂದು ಕೇಳಿದಾಕ್ಷಣ ಹಣ ಕೊಡಲು ನಮ್ಮಲ್ಲಿಗೆ ಹಣ ಬಂದಿಲ್ಲ.
ನೀವು ಮನೆ ದುರಸ್ತಿ ಮಾಡಿರುವ ಬಗ್ಗೆ ಉಲ್ಲೇಖಿಸಿ, ಹಣದ ಸಹಾಯ ನೀಡಿ ಎಂದು ಅರ್ಜಿ ಸಲ್ಲಿಸಿದರೆ ನಿಮಗೆ ಹಣ ದೊರೆಯಬಹುದು' ಎಂದು ಆದೇಶಿಸಿದ್ದಾರೆ. ಮತ್ತೆ ಮತ್ತೆ ಪಂಚಾಯಿತಿ ಮೆಟ್ಟಿಲು ಏರಿದಾಗ ಬೈದು ಕಳುಹಿಸಿದ್ದಾರೆ.
ರಾಜ್ಯದ ದೊರೆಗೆ ಈ ತಬ್ಬಲಿ ಮಕ್ಕಳ ಕಣ್ಣೀರು ಸ್ಪಂದಿಸುವಂತೆ ಕಂಡರೆ... ತಬ್ಬಲಿ ಮಕ್ಕಳ ಮನೆ ದುರಸ್ತಿಗೆ ಸರ್ಕಾರದ ಅನುದಾನವನ್ನು ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಅನಿಸಿದರೆ, ಪಂಚಾಯಿತಿ ಆಡಳಿತಗಾರರಿಗೆ ಮಾತ್ರ ತಮ್ಮ ಕಿಸೆಯಿಂದ ಹೋಗುವ ಭಾವನೆ ಮೂಡಿರುವುದು ಯಾಕೆ...? ಮಂಜೂರಾದ ಹಣವನ್ನು ನೀಡಲು ವಿಳಂಬಿಸುವುದು ನ್ಯಾಯವೇ...?
-ಉಲುಕ್ ಉಪ್ಪಿನಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

