ರಾಹುಲ್ ಮಾತು ಉಳಿಸಿ, ಸುನಿಲ್ ಗೆಲ್ಲಿಸಿ: ಡೀವಿ
ಕಾರ್ಕಳ: ಕಾಂಗ್ರೆಸ್‌ನ ಯುವನಾಯಕ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಬಂದಿದ್ದಾಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಚಾರ ಮಾಡುತ್ತಾ 'ಯುವಕರ ಕೈಗೆ ಅಧಿಕಾರ ಕೊಡಿ' ಎಂದು ಮತದಾರರನ್ನು ವಿನಂತಿಸಿದ್ದಾರೆ. ರಾಹುಲ್ ಮಾತನ್ನು ಪಾಲಿಸುವುದು ಕಾಂಗ್ರೆಸಿಗರಿಗೆ ಆದ್ಯ ಕರ್ತವ್ಯವಾಗಿದ್ದು, ಕಾರ್ಕಳ ಕ್ಷೇತ್ರದ ಕಾರ್ಯಕರ್ತರೆಲ್ಲರೂ ವೃದ್ಧಾಪ್ಯದ ಅಂಚಿನಲ್ಲಿರುವ ಗೋಪಾಲ ಭಂಡಾರಿಯವರ ಬದಲಿಗೆ ನವಯುವಕ ಸುನಿಲ್ ಕುಮಾರ್‌ಗೆ ಮತನೀಡಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕರೆ ನೀಡಿದ್ದಾರೆ.
ಅವರು ಕಾರ್ಕಳ ಹೊರವಲಯದ ಹಿರ್ಗಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು. ಕೇಂದ್ರದ ಕಾಂಗ್ರೆಸ್ ಸರ್ಕಾರದಡಿ ಆಹಾರ ವಸ್ತುಗಳು, ಪೆಟ್ರೋಲಿಯಂ ಉತ್ಪನ್ನಗಳ ಸಹಿತ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡವರಿಗಾಗುತ್ತಿರುವ ತೊಂದರೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸದಾನಂದ ಗೌಡ, 'ಕಾಂಗ್ರೆಸ್ ಕಾ ಹಾಥ್ ಅಮ್ ಆದ್ಮಿ ಕೆ ಸಾಥ್' ಎಂಬ ಕಾಂಗ್ರೆಸ್‌ನ ಘೋಷಣೆಯನ್ನು ಲೇವಡಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಸುನಿಲ್‌ಕುಮಾರ್ ಮಾತನಾಡಿ ಕಾರ್ಕಳದ ಅಭಿವೃದ್ಧಿಗೆ ಬಿಜೆಪಿಯ ಕೊಡುಗೆ ಮಹತ್ತರವಾದುದು ಎಂದರಲ್ಲದೆ ತನ್ನ ಮೂರೂವರೆ ವರ್ಷಗಳ ಶಾಸಕತ್ವದ ಅವಧಿಯಲ್ಲಿ ಮಾಡಿದ ಸಾಧನೆಗಳು ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ತನ್ನ ಪ್ರಯತ್ನದಿಂದ ಕಾರ್ಕಳಕ್ಕೆ ಲಭಿಸಿದ ವಿವಿಧ ಅನುದಾನ, ಪ್ರಯೋಜನಗಳನ್ನು ಮತದಾರರಿಗೆ ವಿವರಿಸಿದರು.
ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆ: ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತರಾದ ಹಿರ್ಗಾನ ಗ್ರಾಮದ ಪಾಲಿಜೆ ಆನಂದ ಶೆಟ್ಟಿಯವರು ವಿ. ಸುನಿಲ್ ಕುಮಾರ್‌ರವರ ಶಾಸಕತ್ವದ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕಾರ್ಕಳ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕೆಂಬ ಇಚ್ಛೆಯೊಂದಿಗೆ ತನ್ನ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಹಿರಿಯರಾದ ಬೋಳ ಪ್ರಭಾಕರ ಕಾಮತ್ ಪಕ್ಷದ ಧ್ವಜ ನೀಡಿ ಸೇರ್ಪಡೆಗೊಳಿಸಿದರು. ಎ.ಪಿ.ಎಂ.ಸಿ. ಸದಸ್ಯ ಬಾಲಕೃಷ್ಣ ಹೆಗ್ಡೆ, ನಿಟ್ಟೆ ಗ್ರಾ.ಪಂ. ಅಧ್ಯಕ್ಷ ನವೀನ್ ನಾಯಕ್, ಸದಸ್ಯರಾದ ಸುಭಾಷ್ ಹೆಗ್ಡೆ, ದಿವಾಕರ ಬಂಗೇರ ಹಾಗೂ ಪಕ್ಷದ ಪ್ರಮುಖರಾದ ರಾಮಚಂದ್ರ ಆಚಾರ್ಯ, ರಾಜೇಶ್ ಮೂಲ್ಯ, ಆನಂದ ನಾಯಕ್, ಸುರೇಶ್ ಆಚಾರ್ಯ, ಹರೀಶ್ ಶೆಟ್ಟಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

