ದಕ್ಷಿಣ ಕನ್ನಡ

'ಸಾಲ್ಯಾನ್‌ಗೆ ಕಾಂಗ್ರೆಸ್ ದ್ರೋಹ ಮಾಡಿಲ್ಲ'

Published On :

ಕಾಪು: ಕಾಂಗ್ರೆಸ್ ಪಕ್ಷ ತಾಯಿಯಿದ್ದಂತೆ. ಅದು ಲಕ್ಷಾಂತರ ಮಂದಿ ಕಾರ್ಯಕರ್ತರನ್ನು, ನಾಯಕರನ್ನು ಬೆಳೆಸಿದೆ... ಅಂತಹವರಲ್ಲೊಬ್ಬರು ವಸಂತ ಸಾಲ್ಯಾನರು. ವಸಂತ ಸಾಲ್ಯಾನರಿಗೆ ಕಾಂಗ್ರೆಸ್ ಪಕ್ಷ ಯಾವತ್ತೂ ದ್ರೋಹ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.
ಭಾನುವಾರ ಕಾಪು ರಾಜೀವ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸಂತ ಸಾಲ್ಯಾನರಿಗೆ 7 ಬಾರಿ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ 5 ಬಾರಿ ಶಾಸಕರಾಗಿ 2 ಬಾರಿ ಮಂತ್ರಿಯೂ ಆಗಿದ್ದಾರೆ. ಆದರೂ, ಅವರು ತಾಯಿಯ ಸಮಾನವಾದ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದು, ಅವರ ಅಧಿಕಾರದಾಹವನ್ನು ತೋರಿಸುತ್ತದೆ ಎಂದು ಆರೋಪಿಸಿದರು. ಸಾಲ್ಯಾನರು ಚುನಾವಣೆಯ ಮೊದಲು ತನ್ನದು ತಪ್ಪಾಯಿತೆಂದು ಒಪ್ಪಿಕೊಂಡು ಮತ್ತೆ ಮಾತೃ ಪಕ್ಷಕ್ಕೆ ಬಂದರೆ ಖಂಡಿತಾ ಸ್ವಾಗತ ಇದೆ. ಆದರೆ, ಚುನಾವಣೆಯ ನಂತರ ಬಂದರೇ ಇಲ್ಲಾ ಖಂಡಿತಾ ಬಾಗಿಲು ತೆರೆಯುವುದಿಲ್ಲ ಎಂದೂ ಪೂಜಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಪು ಕ್ಷೇತ್ರದ ಅಭ್ಯರ್ಥಿ ವಿನಯಕುಮಾರ್ ಸೊರಕೆ, ಪಕ್ಷದ ನಾಯಕರಾದ ನವೀನ್‌ಚಂದ್ರ ಶೆಟ್ಟಿ, ವೈ. ಸುಧೀರ್ ಕುಮಾರ್, ಜಯ ಶೆಟ್ಟಿ, ಶಿವಾಜಿ ಸುವರ್ಣ, ಬಿ.ಎ. ಮೊಯ್ದೀನ್ ಮತ್ತಿತರರು ಇದ್ದರು.

ಮುಕ್ತ ಮತದಾನದಿಂದ ಪ್ರಜಾಪ್ರಭುತ್ವ ಬಲಿಷ್ಠ
ಚುನಾವಣೆ ಬಹಿಷ್ಕಾರ ಎಂಬುದು ಮೂರ್ಖತನದ ಪರಮಾವಧಿ. ಮತದಾನ ಮಾಡಿ, ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿ, ನಂತರ ಅವನಿಂದ ನಮ್ಮ ಕೆಲಸವನ್ನು ನಾವು ಮಾಡಿಸಿಕೊಳ್ಳಬೇಕು. ಏಕೆಂದರೆ ಆಯ್ಕೆಯಾದವನು ತಮ್ಮ ಪ್ರತಿನಿಧಿ ಮಾತ್ರವಲ್ಲ, ಸೇವಕ ಕೂಡಾ. ಪ್ರಜಾಪ್ರಭುವು ತನ್ನ ಪ್ರತಿನಿಧಿಯಿಂದ ಕೆಲಸ ಮಾಡಿಸಿಕೊಳ್ಳದಿದ್ದಲ್ಲಿ, ಅವರೇ ಪ್ರಭುವಾಗಿ ಪಾಳೆಯಗಾರಿಕೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾನೆ, ಪ್ರಸ್ತುತ ಅದೇ ಪರಿಸ್ಥಿತಿ ನಿರ್ಮಾಣ ಆಗಿದೆ. ಐದು ವರ್ಷಕ್ಕೊಮ್ಮೆ ತನ್ನ ಪ್ರತಿನಿಧಿಯನ್ನು ಆರಿಸುವ ಅಧಿಕಾರವನ್ನು ಪ್ರಜಾಪ್ರಭು ಸರಿಯಾಗಿ ಬಳಸದಿದ್ದರೆ, ಓಟನ್ನು ನೋಟಿಗೆ ಹೆಂಡಕ್ಕೆ ಮಾರಿದರೆ ಆಯ್ಕೆಯಾದವರು ದೇಶವನ್ನು ಲೂಟಿ ಮಾಡುತ್ತಾರೆ. ದೇಶದ ಖಜಾನೆಯನ್ನೇ ಕೊಳ್ಳೆ ಹೊಡೆಯುತ್ತಾರೆ. ಆದ್ದರಿಂದ ಪ್ರಜಾಪ್ರಭು ಒಂದು ಬಾರಿ ತನ್ನ ಔದಾಸೀನ್ಯದ, ಒತ್ತಾಯದ, ಒತ್ತಡದ ಪೊರೆಯಿಂದ ಹೊರಬಂದು ತನ್ನ ಅಮೂಲ್ಯ ಮತವನ್ನು ಯೋಗ್ಯನಿಗೆ ಹಾಕಬೇಕು, ಆಗ ಪರಿಸ್ಥಿತಿಯಲ್ಲಿ ಬದಲಾವಣೆಯಾಗುತ್ತದೆ. ಮುಕ್ತ ಮತದಾನದಿಂದ ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ.
ಕೆ. ದಾಮೋದರ ಐತಾಳ, ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.