ದಕ್ಷಿಣ ಕನ್ನಡ

ಧರ್ಮಸ್ಥಳ: ನಾಳೆ ಸಾಮೂಹಿಕ ವಿವಾಹ

Published On :

ಬೆಳ್ತಂಗಡಿ: ರಾಜ್ಯದ ಹಲವಾರು ಸಂಘ ಸಂಸ್ಥೆಗಳಿಗೆ ಪ್ರೇರಣೆ ನೀಡಿದ ಧರ್ಮಸ್ಥಳದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಗುರುವಾರಕ್ಕೆ 42 ವರ್ಷ.
1972ರಲ್ಲಿ 88 ಜೋಡಿಗಳು ಹಸೆಮಣೆ ಏರಿದ್ದವು. ಅಂದಿನಿಂದ 2012ರವರೆಗೆ ನಡೆದ 41 ವಿವಾಹ ಸಮಾರಂಭದಲ್ಲಿ ಒಟ್ಟು 11,000ಕ್ಕೂ ಹೆಚ್ಚು ಜೋಡಿಗಳು ದಾಂಪತ್ಯ ಜೀವನ ಪ್ರಾರಂಭಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು: ಧರ್ಮಜಾಗೃತಿಯೊಂದಿಗೆ ಸಾಮಾಜಿಕ ಮಾರ್ಗದರ್ಶನವನ್ನು ಕಾಲಕಾಲಕ್ಕೆ ಸಂದರ್ಭೋಚಿತವಾಗಿ ನೀಡುತ್ತಿರಬೇಕೆಂಬ ಪರಿಕಲ್ಪನೆಯಿಂದ ಹುಟ್ಟಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೀಗ ಕ್ಷೇತ್ರದ ಒಂದು ಪರಂಪರೆಯ ಭಾಗವಾಗಿಯೇ ಬೆಳೆದು ಬಂದಿದೆ.
ಆಯಾ ಜಾತಿ, ಮತ, ಪಂಥಗಳಿಗನುಸಾರವಾಗಿ ವಿವಾಹದ ಧಾರ್ಮಿಕ ವಿಧಾನಗಳಿಗೆ ಯಾವುದೇ ಚ್ಯುತಿ ಬಾರದಂತೆ ಸಮಾರಂಭ ನಡೆಸಲಾಗುತ್ತದೆ. ದುಂದುವೆಚ್ಚವನ್ನು ಕಡಿತಗೊಳಿಸವುದು ಉದ್ದೇಶ ಈ ಸಾಮೂಹಿಕ ವಿವಾಹದ ಹಿಂದೆ ಇದೆ.
ಎಲ್ಲರೂ ಒಟ್ಟಾಗಿ ಯಾವುದೇ ಭೇದ ಭಾವವಿಲ್ಲದೆ ಸಂತಸಚಿತ್ತರಾಗಿ ದಿವ್ಯ ಸನ್ನಿಧಿಯಲ್ಲಿ ಸಹಬಾಂಧವರಂತೆ ಕೂಡಿ ನಡೆಯುವುದರಿಂದಾಗಿ ಪರಸ್ಪರ ಸಹಿಷ್ಣುತಾ ಭಾವನೆಯೂ ಉದ್ದೀಪವಾಗುತ್ತದೆ ಎಂಬ ಉದ್ದೇಶ ಇದರ ಹಿಂದೆ ಇದೆ. ಇದು ಯಶಸ್ವಿಯೂ ಆಗಿದೆ
ವಿವಾಹ ಕಾಲದಲ್ಲಿ ವಧೂವರರು ಸಾಮೂಹಿಕವಾಗಿ ಕೈಗೊಳ್ಳುವ ಪ್ರಮಾಣ ವಚನವು ಸರಳವೂ, ಸುಂದರವೂ ಆದ ಜೀವನಕ್ಕೆ ಪ್ರೋತ್ಸಾಹ ನೀಡುವುದು. ಕ್ಷುಲ್ಲುಕ ಕಾರಣಗಳಿಂದಾಗಿ ಪವಿತ್ರ ಸಂಬಂಧವು ಕದಡದಂತೆ ಮಾಡುವಲ್ಲಿಯೂ ಯಶಸ್ವಿಯಾಗಿದೆ.
ಈ ಎಲ್ಲಾ ಯಶಸ್ವಿ ಕಲ್ಪನೆ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರದ್ದು. ಇದರಿಂದ ಸ್ಫೂರ್ತಿ ಪಡೆದು ಹಲವಾರು ಸಂಘ ಸಂಸ್ಥೆಗಳು ಸಾಮೂಹಿಕ ವಿವಾಹವನ್ನು ವರ್ಷಕ್ಕೊಮ್ಮೆ ನಡೆಸುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.