ದಕ್ಷಿಣ ಕನ್ನಡ

ಕೊಯನಾಡು: ರಾಜ್ಯ ಹೆದ್ದಾರಿ ಮತ್ತಷ್ಟು ಕುಸಿತ

Published On :

ಸುಳ್ಯ:  ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಯನಾಡು ಬಳಿಯ ಗಾರೆಮುರಿ ಎಂಬಲ್ಲಿ ರಸ್ತೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಟ ಅನುಭವಿಸುತ್ತಿದ್ದಾರೆ.  ಮತ್ತೊಂದೆಡೆ ಮಂಗಳವಾರ ವೇಳೆಗೆ, ರಾಜ್ಯ ಹೆದ್ದಾರಿ ಮತ್ತಷ್ಟು ಕುಸಿತಗೊಂಡಿದ್ದು ನಡೆದು ಹೋಗಲೂ ಕಷ್ಟವಾಗುವಂತೆ ಮಾರ್ಗ ತುಂಡರಿಸಲ್ಪಟ್ಟಿದೆ.
ದ್ವಿಚಕ್ರ ವಾಹನ ಸಂಚಾರವೂ ಅಸಾಧ್ಯ: ಸೋಮವಾರ ಬೆಳಗ್ಗೆ ಇಲ್ಲಿ 200 ಮೀಟರ್‌ವರೆಗೆ ರಸ್ತೆಯು ಮೂರರಿಂದ ಐದು ಅಡಿಗಳಷ್ಟು ಬಿರುಕು ಬಿಟ್ಟ ಹಿನ್ನಲೆಯಲ್ಲಿ ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಹೋಗಲು ಸ್ಥಳಾವಕಾಶವಿತ್ತು. ಆದರೆ ಮುಂದುವರಿದ ಮಳೆಗೂ ರಸ್ತೆ ಮತ್ತಷ್ಟು ಕುಸಿದಿದ್ದು ದ್ವಿಚಕ್ರ ವಾಹನಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಎಲ್ಲ ವಾಹನಗಳನ್ನು ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಾದಚಾರಿಗಳಿಗೆ ನಡೆದು ಹೋಗಲೂ ಕಷ್ಟವಾಗುತ್ತಿದೆ. ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಮೈಸೂರಿಗೆ ತೆರಳಬೇಕಾದ ಮತ್ತು ಈ ದಾರಿಯಲ್ಲಿ ಮಂಗಳೂರಿಗೆ ಬೇಕಾದ ವಾಹನಗಳು ಹಾಸನ, ಸಕಲೇಶಪುರ ಮಾರ್ಗವಾಗಿ ಸಂಚರಿಸಬೇಕಾಗಿದೆ.
ಮಡಿಕೇರಿ-ಸುಳ್ಯ ನಡುವೆ ಸಂಚರಿಸುವವರಿಗೂ ಕಷ್ಟವಾಗಿದೆ. ಮಡಿಕೇರಿ-ಕೊಯನಾಡು, ಕೊಯನಾಡು- ಸುಳ್ಯ ಮಾರ್ಗದಲ್ಲಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು ರಸ್ತೆ ಸಂಪರ್ಕ ಕಡಿತದ ಬಗ್ಗೆ ಸರಿಯಾಗಿ ಮಾಹಿತಿ ದೊರೆಯದೆ ಕಷ್ಟ ಪಡುತ್ತಿದ್ದಾರೆ.  ಕಳೆದ ಬಾರಿ ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಸಂದರ್ಭ ರಸ್ತೆ ಬಂದ್ ಆಗಿದ್ದಾಗ ಸುಳ್ಯ- ಪಾಣತ್ತೂರು- ಕರಿಕೆ- ಭಾಗಮಂಡಲ ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಬಳಸಲಾಗಿತ್ತು. ಆದರೆ ಸುಳ್ಯ- ಆಲೆಟ್ಟಿ- ಬಡ್ಡಡ್ಕ- ಪಾಣತ್ತೂರು ರಸ್ತೆ ತೀರಾ ಹದಗೆಟ್ಟಿರುವುದರಿಂದ ಸಂಚಾರ ಕಷ್ಟವಾಗಿದೆ.
ಕಾರಣವೇನು...?
ಧಾರಾಕಾರ ಮಳೆ ಹಾಗೂ ಸಮೀಪದಲ್ಲೇ  ನದಿ ತುಂಬಿ ಹರಿಯುತ್ತಿರುವುದರಿಂದ ಕೊಯನಾಡು ರಸ್ತೆಯಲ್ಲಿ ಬಿರುಕು ಸಂಭವಿಸಿರಬಹುದೆಂದು ಹೇಳಲಾಗುತ್ತಿದೆ. ದಿನೇ ದಿನೇ ಕುಸಿತದ ಪ್ರಮಾಣ ಏರುತ್ತಿರುವುದರಿಂದ ಈ ಭಾಗದಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಮಂಗಳವಾರ ಕೆಆರ್‌ಡಿಸಿಎಲ್‌ನ ಪರಿಣತರು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸ್ಥಿತಿಗತಿ ಪರಿಶೀಲಿಸಿದ್ದಾರೆ. ಇವರು ನೀಡುವ ತಾಂತ್ರಿಕ ವರದಿ ಪ್ರಕಾರ ರಸ್ತೆ ಕಾಮಗಾರಿ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.