ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ: 9 ಮಂದಿಗೆ ಗಾಯ
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ರಸ್ತೆ ಪಕ್ಕಕ್ಕೆ ಉರುಳಿದ ಪರಿಣಾಮ ಚಾಲಕ ಸೇರಿದಂತೆ 9 ಮಂದಿ ಗಾಯಗೊಂಡ ಘಟನೆ ಬಂಟ್ವಾಳ ಎಸ್ವಿಎಸ್ ಕಾಲೇಜು ಸಮೀಪ ನಡೆದಿದೆ. ಗಾಯಗೊಂಡವರನ್ನು ರಿಕ್ಷಾ ಚಾಲಕ ಇಸ್ಮಾಯಿಲ್, ಪ್ರಯಾಣಿಕರಾದ ಖತೀಜಮ್ಮ, ಇದಿನಬ್ಬ, ಯಾಸಿದ್, ನಝೀಮ್, ಸಂಶುದ್ದೀನ್, ಮಕ್ಕಳಾದ ನಶ್ರತ್, ಅನಿಶಾ, ಶಾಹಿದ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಬಂಟ್ವಾಳದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಚಾಲಕ ಇಸ್ಮಾಯಿಲ್ ಹಾಗೂ ವೃದ್ಧಪ್ರಯಾಣಿಕೆ ಖತೀಜಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ರಿಕ್ಷಾ ಕುಪ್ಪೆ ಪದವು ಕಡೆಯಿಂದ ಬಂಟ್ವಾಳಕ್ಕೆ ಬರುತ್ತಿದ್ದ ವೇಳೆ ಬಂಟ್ವಾಳ ಎಸ್ವಿಎಸ್ ಕಾಲೇಜು ಸನಿಹದ ತಿರುವಿನಲ್ಲಿ ಈ ಘಟನೆ ನಡೆದಿದೆ. ಘಟನೆಯ ತೀವ್ರತೆಗೆ ರಸ್ತೆಯ ಬಲಭಾಗಕ್ಕೆ ಬಂದಿರುವ ರಿಕ್ಷಾ ರಸ್ತೆಯಂಚಿನಲ್ಲಿ ಪಲ್ಟಿ ಹೊಡೆದು ಬಿದ್ದಿತ್ತು. ಇಳಿಜಾರು ತಿರುವಿನಲ್ಲಿ ಚಾಲಕ ಅತಿವೇಗದಿಂದ ರಿಕ್ಷಾ ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ತೀವ್ರತೆಗೆ ರಿಕ್ಷಾ ನಜ್ಜುಗುಜ್ಜಾಗಿದ್ದು, ಸ್ವಲ್ಪ ಮುಂದಕ್ಕೆ ಚಲಿಸುತ್ತಿದ್ದರೂ ಭಾರೀ ಕಂದಕಕ್ಕೆ ಬಿದ್ದು ಇನ್ನಷ್ಟು ದೊಡ್ಡ ಅನಾಹುತ ನಡೆಯುತ್ತಿತ್ತು.
ಅದೃಷ್ಟವಶಾತ್ ಮಗುಚಿಬಿದ್ದ ರಿಕ್ಷಾ ರಸ್ತೆ ಪಕ್ಕಕ್ಕೆ ಸರಿದು ನಿಂತಿತ್ತು. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ: ಬಂಟ್ವಾಳ ಎಸ್ವಿಎಸ್ ಕಾಲೇಜು ಸಮೀಪ ಈ ಅವಘಡ ನಡೆದಿದ್ದು, ಮಾನವೀಯತೆ ಮೆರೆದ ವಿದ್ಯಾರ್ಥಿಗಳ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಬಸ್ ಚಾಲಕಗೆ ತಂಡ ಹಲ್ಲೆ
ಬಂಟ್ವಾಳ: ಸೈಡ್ ಕೊಡುವ ವಿಚಾರದಲ್ಲಿ ತಂಡವೊಂದು ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಂಕೆಯಲ್ಲಿ ನಡೆದಿದೆ. ಬಿ.ಸಿ.ರೋಡು- ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ ಚಾಲಕ, ಪುತ್ತೂರು ನಿವಾಸಿ ರಾಮಚಂದ್ರ ಗಾಯಗೊಂಡಿದ್ದಾರೆ. ಗುರುವಾರ ಸಂಜೆ ಮುಡಿಪುನಿಂದ ಬಸ್ಸು ಬಿ.ಸಿ.ರೋಡಿಗೆ ಬರುತ್ತಿದ್ದ ವೇಳೆ ಬೇಂಕೆ ಎಂಬಲ್ಲಿ 3 ಬೈಕ್ಗಳಲ್ಲಿ ಬಂದ ತಂಡ ಬಸ್ಸನ್ನು ಅಡ್ಡಗಟ್ಟಿದ್ದು, ಪ್ರಯಾಣಿಕರ ಎದುರಿನಲ್ಲಿಯೇ ಚಾಲಕ ರಾಮಚಂದ್ರ ಮೇಲೆ ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ. ಮುಡಿಪು ಸಮೀಪ ಬಸ್ಸು, ಬೈಕ್ಗೆ ಸೈಡ್ ಕೊಡದಿರುವುದೇ ಹಲ್ಲೆಗೆ ಕಾರಣ ಎನ್ನಲಾಗಿದ್ದು, ಹಲ್ಲೆ ಗೀಡಾಗಿರುವ ರಾಮಚಂದ್ರ ಬಿ.ಸಿ. ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ಇಲ್ಯಾಸ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಹಕ್ಕಿಗಳ ಮಾರಣ ಹೋಮ, ಅಪ್ಪಚ್ಚಿಯಾದ ಮೊಟ್ಟೆ, ಮರಿ
ಮಂಗಳೂರು: ಅಕ್ಷರಷಃ ಅದು ಹಕ್ಕಿಗಳ ಹೆಣಗಳೇ ತುಂಬಿರುವ ಕುರುಕ್ಷೇತ್ರವೇ ಆಗಿತ್ತು. ರಸ್ತೆ ತುಂಬಾ ಸತ್ತು ಬಿದ್ದ ಹಕ್ಕಿಗಳು, ಬಸ್ಗಳು ಸಾಗುವಾಗ ನುಚ್ಚು ನೂರಾಗುವ ಮೊಟ್ಟೆಗಳು, ಮರಿಗಳು...
ಇದು ನಗರದ ಹೊರ ವಲಯದ ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್ ಬಳಿಯ ಬೃಹತ್ ಆಲದ ಮರ ಕಡಿದುರುಳಿಸಿದ ಮೇಲೆ ಕಂಡು ಬಂದ ಹೃದಯ ವಿದ್ರಾವಕ ದೃಶ್ಯಗಳು.
ನೀರು ಕಾಗೆ, ಕಾಗೆ ಸೇರಿದಂತೆ ಸಾವಿರಾರು ಹಕ್ಕಿಗಳ ಆಶ್ರಯ ತಾಣ, ಮರಿ, ತತ್ತಿಗಳಿದ್ದ ಶತಮಾನದ ಇತಿಹಾಸ ಹೊಂದಿರುವ ಬೃಹತ್ ಆಲದ ಮರಕ್ಕೆ ಜನರು ಗರಗಸ ಇಡುತ್ತಿದ್ದಂತೆಯೇ ಹಕ್ಕಿಗಳು ಕರ್ಕಶವಾಗಿ ಕಿರುಚಿ ಹಾರಾಡತೊಡಗಿದವು, ಎಲ್ಲೆಡೆ ಹಕ್ಕಿಗಳ ಆಕ್ರಂದನ, ಮರದಿಂದ ದೊಪ ದೊಪನೆ ಉದುರುವ ತತ್ತಿಗಳು, ಮರಿಗಳು...
ಇದು ಹಾಲಿವುಡ್ ಸಿನಿಮಾ ಅವತಾರದಲ್ಲಿ ಬೃಹತ್ ಮರ ಬೀಳುವ ದೃಶ್ಯದಂತೆ ಕಂಡು ಬಂದವು.
ಬುಧವಾರ ಬೆಳಗ್ಗೆ ಗರಗಸ ಇಡುತ್ತಲೇ ಹಕ್ಕಿಗಳು ಪ್ರಾಣ ಭೀತಿಯಿಂದ ಹಾರಾಡತೊಡಗಿದವು. ಬದುಕಿ ಉಳಿದರೆ ಹೆಕ್ಕಿ ತಿಂದೇವು ಎಂದು ಆರಂಭದಲ್ಲಿ ಗೂಡಲ್ಲಿದ್ದ ಮರಿ, ಮೊಟ್ಟೆ ಬಿಟ್ಟು ಓಡಿ ಹೋದವು. ಎಲ್ಲರೂ ನೋಡುತ್ತಿರುವಂತೆಯೇ ಸಾವಿರಾರು, ಮೊಟ್ಟೆ, ನೂರಾರು ಮರಿಗಳು ರಸ್ತೆಯಲ್ಲಿ ಅಪ್ಪಚ್ಚಿಯಾಗಿ ಹೋದವು.
ಕೆಲವು ಪಕ್ಷಿಗಳು ಬಸ್ ಅಡಿಗೆ, ವಾಹನಗಳ ಅಡಿಗೆ ಬಿದ್ದು ಬೀಳುತ್ತಿದ್ದವು. ಮರಿಗಳನ್ನು ಕಳೆದುಕೊಂಡ ಹಕ್ಕಿಗಳು ಮತ್ತೆ ಮತ್ತೆ ವಾಪಸ್ ಬಂದು ಬಸ್ನಡಿಗೆ ಬೀಳುತ್ತಿರುವುದನ್ನು ನೋಡಿದಾಗ ಹಕ್ಕಿಗಳು ಮಾನವರ ಮೇಲೆ ಆಕ್ರೋಶದಿಂದ ಬಸ್ ಮೇಲೆ ದಾಳಿ ಮಾಡುವಂತೆ ಕಾಣುತ್ತಿತ್ತು. ಇನ್ನು ಕೆಲವೊಮ್ಮೆ ಮಕ್ಕಳು, ಮರಿಗಳನ್ನು ಕಳೆದುಕೊಂಡ ದುಃಖದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆಯೋ ಎಂಬಂತೆ ನೋಡುಗರಿಗೆ ಬಾಸವಾಗುತ್ತಿತ್ತು.
ಮೂನ್ನೂರು ಗ್ರಾಮ ಪಂಚಾಯ್ತಿಯ ವತಿಯು ಕುತ್ತಾರು ಜಂಕ್ಷನ್ ಅಭಿವೃದ್ಧಿ ವಿಸ್ತಾರಗೊಳಿಸಲು ಯೇನಪೋಯ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಹಯೋಗದಲ್ಲಿ ತೀರ್ಮಾನಿಸಲಾಗಿತ್ತು.
ಆದರಂತೆ ಕುತ್ತಾರು ಜಂಕ್ಷನ್ನಲ್ಲಿದ್ದ ಶತಮಾನಗಳ ಬೃಹತ್ ಆಲದಮರ ಉರುಳಿಸುವ ಕೆಲಸ ಬುಧವಾರ ಆರಂಭವಾಗಿದ್ದು, ಈ ಮಾರಣ ಹೋಮ ಗುರುವಾರವೂ ಮುಂದುವರಿದಿತ್ತು.
ಮರ ಕಡಿಯಲು ಇದು ಸಕಾಲ ಅಲ್ಲವೆಂದು ಸ್ಥಳೀಯ ಪಕ್ಷಿ ಪ್ರಿಯರು ತಿಳಿಸಿದ್ದರೂ ಕೆಡವಲಾಯಿತು. 'ಮರ ಕಡಿದವರ ಸಂತಾನಕ್ಕೆ ಹಕ್ಕಿಗಳ ಸಂತಾನದ ಶಾಪ ಖಂಡಿತಾ ತಟ್ಟಲಿದೆ' ಎಂದು ದಾರುಣ ದೃಶ್ಯವನ್ನು ನೋಡುತ್ತಿದ್ದವರು ಗೊಣಗುತ್ತಿದ್ದರು.
ಹಕ್ಕಿಗಳು ಎಲ್ಲೆಂದರಲ್ಲಿ ಹಿಪ್ಪೆ ಹಾಕುತ್ತಿದ್ದರಿಂದ ಯಾರೂ ಈ ಕಡೆ ಹೋಗಲು ಸಾಧ್ಯವಿಲ್ಲ. ಮರ ಕಡಿದ ಬಳಿಕ ರಗಳೆ ಹೋಯಿತು ಎಂದು ಹೇಳುವ ಜನರೂ ಸಾಕಷ್ಟು ಸಂಖ್ಯೆಯಲ್ಲಿದ್ದರು.
'ಎಲ್ಲ ಋುತುವಿನಲ್ಲಿಯೂ ಹಕ್ಕಿಗಳು ಸಂತತಿ ವೃದ್ಧಿಸುತ್ತಲೇ ಹೋಗುತ್ತಿದೆ. ಹಕ್ಕಿಗಳು ಮರ ಬಿಟ್ಟು ಹೋಗಬಹುದೆಂದು 6 ತಿಂಗಳಿಂದ ಕಾಯುತ್ತಿದ್ದೇವೆ. ಅವು ಹೋಗಲಿಲ್ಲ. ಪಂಚಾಯ್ತಿ ನಿರ್ಣಯ ಮಾಡಿದ್ದರಿಂದ 2 ತಿಂಗಳೊಳಗೆ ಜಂಕ್ಷನ್ ಅಭಿವೃದ್ಧಿ ಮಾಡಲೇಬೇಕು ಎಂಬ ಒತ್ತಡ ಬಂದಿತ್ತು' ಎಂದು ಪಂಚಾಯ್ತಿ ಅಧ್ಯಕ್ಷರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
'ಬಹುಶಃ ಮರ ಕಡಿಯುವವರಿಗೆ ಮರದಲ್ಲಿ ಅಷ್ಟು ಹಕ್ಕಿಗಳ ಸಂತತಿ ಇರುವುದು ಗಮನಕ್ಕೆ ಬಂದಿರಲಿಲ್ಲವೋ ಏನೋ' ಎಂದು ಆ ಪ್ರದೇಶದ ಶಾಸಕರೂ ಆಗಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಸಮಜಾಯಿಶಿ.
ಹೊಂಡಕ್ಕೆ ಬಿದ್ದ ಬಸ್; ರಸ್ತೆ ದುರಸ್ತಿಗೆ ಆಗ್ರಹ
ಮೂಲ್ಕಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸ್ಕಟ್ಟೆಯ ಬಳಿ ರಸ್ತೆ ಸಂಪೂರ್ಣ ಹೊಂಡಗಳಿಂದ ತುಂಬಿದ್ದು ಮಳೆ ನೀರು ನಿಂತು ಚರಂಡಿ ಮತ್ತು ರಸ್ತೆಯ ವ್ಯತ್ಯಾಸ ತಿಳಿಯದೆ ಬೆಳ್ಮಣ್ಣಿನಿಂದ ಕಿನ್ನಿಗೋಳಿಗೆ ಬರುವ ಖಾಸಗಿ ಬಸ್ಸೊಂದು ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆ ಬದಿಗೆ ಚಲಿಸಿ ಹೊಂಡಕ್ಕೆ ಬಿದ್ದಿದೆ. ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಎರಡು ದಿನಗಳ ಹಿಂದೆ ಜೋರು ಮಳೆ ಬಂದ ಸಂದರ್ಭನಿಟ್ಟೆಯ ಶಿಕ್ಷಣ ಸಂಸ್ಥೆಯ ಬಸ್ಸೊಂದು ರಸ್ತೆ ಬದಿಗೆ ಚಲಿಸಿ ಚರಂಡಿಯಲ್ಲಿ ಬಿದ್ದಿದ್ದು ಇಲ್ಲಿ ಹಲವಾರು ಅನಾಹುತ ನಡೆದರೂ ಐಕಳ ಗ್ರಾ.ಪಂ. ಇನ್ನೂ ಎಚ್ಚೆತ್ತಿಕೊಂಡಿಲ್ಲ. ಪತ್ರಿಕೆಯಲ್ಲಿ ವರದಿ ಬಂದರೂ ಹಾಗೂ ಗ್ರಾಮಸ್ಥರು ರಸ್ತೆ ದುರಸ್ತಿಗೆ ಒತ್ತಾಯಿಸಿದರೂ ಗಮನ ಹರಿಸುತ್ತಿಲ್ಲ. ಮಳೆಗಾಲದ ಸಂದರ್ಭ ಅನಾಹುತವಾಗುವುದು ಸಾಮಾನ್ಯವಾಗಿದ್ದು ಇನ್ನು ಪ್ರಾಣ ಹಾನಿಯಾದಾಗ ಮಾತ್ರ ಪಂಚಾಯಿತಿ ಎಚ್ಚೆತ್ತುಕೊಳ್ಳುವ ಸಾಧ್ಯತೆಯಿದೆ. ಕ್ಷೇತ್ರದ ಶಾಸಕ ಹಾಗೂ ಸಚಿವ ಕೆ. ಅಭಯಚಂದ್ರ ಜೈನ್ ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಲ್ಲೆ ಪ್ರಕರಣ: ಇತ್ತಂಡಗಳಿಂದ ದೂರು
ಉಪ್ಪಿನಂಗಡಿ: ಕೈಲ ಗ್ರಾಮದ ಗೋಕುಲನಗರ ಎಂಬಲ್ಲಿ ಸೈಡ್ ನೀಡಿಲ್ಲ ಎಂಬ ವಿಷಯದಲ್ಲಿ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ನಡೆಸಲಾಗಿದೆ ಎಂಬ ವಿಚಾರದಲ್ಲಿ ಎರಡೂ ಕಡೆಯಿಂದಲೂ ಪೊಲೀಸರಿಗೆ ದೂರು ಸಲ್ಲಿಕೆಯಾದ ಬಗ್ಗೆ ವರದಿಯಾಗಿದೆ. ಉಪ್ಪಿನಂಗಡಿ ಜೂನಿಯರ್ ಚೇಂಬರ್ ಮಾಜಿ ಅಧ್ಯಕ್ಷ, ರಾಮಕುಂಜ ಗ್ರಾಮ ಇರ್ಕ್ ನಿವಾಸಿ ಆನಂದ ಗೌಡ ಎಂಬವರಿಗೆ ಮತ್ತು ಕೈಲ ಗ್ರಾಮದ ಕಲಾಯಿ ನಿವಾಸಿ ರಮೇಶ ದಾಸಯ್ಯ ಎಂಬವರ ಮಧ್ಯೆ ವಾಹನದಲ್ಲಿ ಸಾಗುವಾಗ ಬದಿ ಬಿಟ್ಟುಕೊಡಲಿಲ್ಲ ಎಂಬ ವಿಚಾರವಾಗಿ ಕೈಯಿಲ ಗ್ರಾಮದ ಗೋಕುಲನಗರದಲ್ಲಿ ಮಾತಿನ ಚಕಮಕಿ ನಡೆದು ಹಲ್ಲೆ ನಡೆಸಲಾಗಿದೆ ಎಂದು ಉಭಯ ಕಡೆಯ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಲ್ಲೆಗೀಡಾದ ಇಬ್ಬರೂ ಪುತ್ತೂರಿನ ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲುಗೊಂಡಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ಇಬ್ಬರ ಮೇಲೂ ಪ್ರಕರಣ ದಾಖಲಾಗಿದೆ.
ಆಟೋರಿಕ್ಷಾ ಚರಂಡಿಗೆ: ಇಬ್ಬರಿಗೆ ಗಂಭೀರ ಗಾಯ
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋ ರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡು ಮೂವರು ಅಪಾಯದಿಂದ ಪಾರಾದ ಘಟನೆ ವಿಟ್ಲ- ಪುತ್ತೂರು ರಸ್ತೆಯ ಉರಿಮಜಲು ಎಂಬಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ.
ಗೋಳ್ತಮಜಲು ಗ್ರಾಮದ ಬಳ್ಳೆಕೋಡಿ ನಿವಾಸಿ ಸುಲೈಮಾನ್(55) ಹಾಗೂ ಅವರ ಪುತ್ರ ತಮೀಮ್(17) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ರಿಕ್ಷಾ ಚಾಲಕ ಮಾಣಿ ಸಮೀಪದ ಗಡಿಯಾರ ನಿವಾಸಿ ಇಕ್ಬಾಲ್ ಎಂಬವರು ಅಪಾಯದಿಂದ ಪಾರಾಗಿದ್ದು, ಉಳಿದವರ ವಿವರ ತಿಳಿದು ಬಂದಿಲ್ಲ.
ಗುರುವಾರ ಸಂಜೆ ಚಾಲಕ ಇಕ್ಬಾಲ್ ಎಂಬಾತ ಉರಿಮಜಲು ಎಂಬಲ್ಲಿರುವ ತನ್ನ ಸಂಬಂಧಿಕರ ಮನೆಗೆ ಈದುಲ್ ಫಿತರ್ ಹಬ್ಬದ ಪ್ರಯುಕ್ತ ತನ್ನ ಆಟೋ ರಿಕ್ಷಾದಲ್ಲಿ ವಿಟ್ಲ ಮಾರ್ಗವಾಗಿ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಿಕ್ಷಾ ಚಲಾಯಿಸಿಕೊಂಡು ತೆರಳುತ್ತಿದ್ದ ವೇಳೆ ಉರಿಮಜಲು ಅಪಾಯಕಾರಿ ತಿರುವಿನಲ್ಲಿ ಆತನ ನಿಯಂತ್ರಣ ಕಳೆದು ರಸ್ತೆ ಬದಿಯಲ್ಲಿದ್ದ ಚರಂಡಿಗೆ ರಿಕ್ಷಾ ಇಳಿದಿದ್ದು, ಬಳಿಕ ಅದು ಚರಂಡಿಯಲ್ಲಿಯೇ ಒಂದು ಪರ್ಲಾಂಗ್ನಷ್ಟು ದೂರ ರಿಕ್ಷಾ ಚಲಿಸಿ ಮಗುಚಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೇಯಲು ಬಿಟ್ಟ 5 ದನ ನಾಪತ್ತೆ
ವಿಟ್ಲ: ವೀರಕಂಬ ಗ್ರಾಮದ ಕಂಪದಬೈಲಿನ ಇಬ್ಬರು ಕೃಷಿಕರ ಮನೆಯಿಂದ ಸಮೀಪದ ಗುಡ್ಡೆಗೆ ಮೇಯಲು ಬಿಟ್ಟ ಐದು ದನಗಳು ನಾಪತ್ತೆಯಾಗಿವೆ. ಕಂಪದಬೈಲಿನ ಮಹಾಬಲ ಆಳ್ವ ಅವರ 2 ದನಗಳು ಮತ್ತು ಅವರ ಸಹೋದರ ರಘು ಆಳ್ವರ ಮೂರು ದನಗಳು ಹುಲ್ಲು ಮೇಯಲು ಹೋಗಿದ್ದು ವಾಪಸ್ ಬಾರದೆ ಇರುವುದರಿಂದ ಕಳವಾಗಿರಬಹುದು ಎನ್ನಲಾಗಿದೆ. ಅದರಲ್ಲಿ ಒಂದು ದನ ಹಾಲು ನೀಡುತಿತ್ತು. ದನ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.
ಲಾರಿ, ಮಿನಿಲಾರಿ ಡಿಕ್ಕಿ: ಒಬ್ಬನಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾ.ಹೆ. 75 ರಲ್ಲಿ ಗುರುವಾರ ಸಂಭವಿಸಿದ ಲಾರಿ ಮತ್ತು ಮಿನಿ ಲಾರಿಗಳ ನಡುವಣ ಡಿಕ್ಕಿ ಅಪಘಾತದಲ್ಲಿ ಮಿನಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಅಪಘಾತ ಪ್ರದೇಶವೆಂದೇ ಪರಿಗಣಿತವಾದ ನೀರಕಟ್ಟೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಮಿನಿ ಲಾರಿಯಲ್ಲಿದ್ದ ಚಾಲಕ ಕಿರಣ ಮಾರಣಾಂತಿಕವೆನಿಸಿದ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಗಾಯಾಳು ಕಿರಣ ಬೆಂಗಳೂರಿನ ಶ್ರೀನಗರ ನಿವಾಸಿ ಎಂದು ತಿಳಿದು ಬಂದಿದೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಟೋರಿಕ್ಷಾಗೆ ಟ್ಯಾಂಕರ್ ಡಿಕ್ಕಿ; ಮೂವರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಇಳಂತಿಲ ಗ್ರಾಮದ ನೇಜಿಗಾರು ಎಂಬಲ್ಲಿ ಪ್ರಯಾಣಿಕ ಸೇವೆ ಒದಗಿಸುತ್ತಿದ್ದ ಆಟೋರಿಕ್ಷಾಕ್ಕೆ ಟ್ಯಾಂಕರೊಂದು ಡಿಕ್ಕಿ ಹೊಡೆದು ರಿಕ್ಷಾದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಭವಿಸಿದೆ. ಪೆರ್ನೆ ನಿವಾಸಿ ತನಿಯಪ್ಪ ಮತ್ತವರ ಸಂಬಂಧಿಗಳಾದ ಲೀಲಾ, ಕವಿತಾ, ಕಲ್ಯಾಣಿ ಎಂಬವರೊಡಗೂಡಿ ಉಜಿರೆಯಲ್ಲಿನ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದಾಗ ಈ ದುರ್ಷಟನೆ ಸಂಭವಿಸಿದೆ. ನೇಜಿಗಾರು ತಿರುವಿನಲ್ಲಿ ಎದುರುಗಡೆಯಿಂದ ವೇಗವಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಾಗ ರಿಕ್ಷಾದಲ್ಲಿದ್ದ ತನಿಯಪ್ಪ , ಕಲ್ಯಾಣಿ, ಲೀಲಾ ಎಂಬ ಮೂವರು ಗಂಭೀರವಾಗಿ ಗಾಯಗೊಂಡರು. ಕವಿತಾ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ನೀರುಪಾಲಾದ ಮಹಿಳೆ ಮೃತದೇಹ ಪತ್ತೆ
ಹಿರಿಯಡ್ಕ: ಇಲ್ಲಿನ ಮಂಜೊಟ್ಟಿ ಗ್ರಾಮದಲ್ಲಿ ಕಾಣೆಯಾಗಿದ್ದ ಹಾವೇರಿ ಜಿಲ್ಲೆಯ ಅಪಿನಕೊಪ್ಪ ಗ್ರಾಮದಿಂದ ಬಂದ ವಲಸೆ ಕಾರ್ಮಿಕಳಾದ ಸುಮಿತ್ರಾ ಅವರ ಮೃತದೇಹ ಗುರುವಾರ ಪತ್ತೆಯಾಗಿದೆ. ಆಕೆ ಆ. 5ರಂದು ಸಂಜೆ ಆಕಸ್ಮಿಕವಾಗಿ ಕಾಲು ಜಾರಿ ಮಳೆ ನೀರು ಹರಿಯುತ್ತಿದ್ದ ತೋಡಿಗೆ ಬಿದ್ದು ಕಾಣೆಯಾಗಿದ್ದರು. ಇದೀಗ ಕುದಿ ಗ್ರಾಮದ ಮಿತ್ತೊಟ್ಟು ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ನಾಗಪ್ಪ ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಉಡುಪಿ: ಇಲ್ಲಿನ ಶಿರ್ವ ಪಂಜಿಮಾರು ಗ್ರಾಮದ ಅರಕಿನಹಿತ್ಲು ಎಂಬಲ್ಲಿಂದ ಯುವತಿಯೊಬ್ಬರು ಕಾಣೆಯಾದ ಘಟನೆ ಬುಧವಾರ ನಡೆದಿದೆ. ಕಾಣೆಯಾದವರು ಜ್ಯೋತಿ (30), ಈಕೆ ಸಂಪ ಎನ್ನುವವರ ಮಗಳು, ಮಾನಸಿಕ ಅಸ್ವಸ್ಥಳಾಗಿದ್ದು, ಬುಧವಾರ ಸಂಜೆ 7 ಗಂಟೆಗೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಸಂಪ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮೇಲೆ ಹಲ್ಲೆ
ಕುಂದಾಪುರ: ಇಲ್ಲಿನ ಪಾರಿಜಾತ ಜಂಕ್ಷನ್ ಬಳಿ ಕರ್ತವ್ಯನಿರತ ಕುಂದಾಪುರ ಠಾಣೆಯ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಪಿಸಿ ಮಂಜುನಾಥ ಅವರು ಸಮವಸ್ತ್ರದಲ್ಲಿ ಸಂಚಾರ ನಿಯಂತ್ರಣ ಮಾಡುತ್ತಿದ್ದಾಗ ವಯರ್ಲೆಸ್ ಮೂಲಕ ಶಾಸ್ತ್ರಿ ಪಾರ್ಕ್ ಕಡೆಯಿಂದ ಬೈಕ್ನಲ್ಲಿ 3 ಮಂದಿ ಬರುತ್ತಿರುವುದಾಗಿ ಬಂದ ಮಾಹಿತಿಯಂತೆ ಬೈಕನ್ನು ತಡೆಯಲು ಹೋದಾಗ ಬೈಕ್ ಸವಾರರು ಬೈಕನ್ನು ವೇಗವಾಗಿ ಚರ್ಚ್ ರಸ್ತೆ ಕಡೆಗೆ ಓಡಿಸಿದರು. ತಕ್ಷಣ ಮಂಜುನಾಥ ಅವರು ಬೇರೆಯವರ ಬೈಕ್ನಲ್ಲಿ ಆರೋಪಿಗಳನ್ನು ಹಿಂಬಾಲಿಸಿ ಆಂಜನೇಯ ಗ್ಯಾಸ್ ಸಂಸ್ಥೆಯ ಬಳಿ ತಡೆದು ನಿಲ್ಲಿಸಿದರು. ಆಗ ಬೈಕ್ನಿಂದ ಚೇತು ಯಾನೆ ಚೇತನ, ರಂಜಿತ ಯಾನೆ ಸೋಹನ ಮತ್ತು ನವೀನ ಎಂಬವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥ ಕುಂದಾಪುರ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ಮಣಿಪಾಲ: ಇಲ್ಲಿನ ಅಲೆವೂರು ಗ್ರಾಮದ ಪ್ರಗತಿ ನಗರದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರು ಶೇಖರ (45), ಅವರಿಗೆ ವಿಪರೀತ ಮದ್ಯಪಾನದ ಚಟ ಇದ್ದು, ನಿತ್ಯ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರು, ಇದರಿಂದ ಮನೆಯಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪತ್ನಿ ಮಲ್ಲಿಕಾ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಲೆಯತ್ನ: ಕೋಡಿಕಲ್ ಚಿಪ್ಪು ಕೃತ್ಯ?
ಮಂಗಳೂರು: ಕೂಳೂರು ರತ್ನ ಬಾರ್ ಸಮೀಪ ರಾಮಚಂದ್ರ ಎಂಬವರ ಮೇಲೆ ತಳವಾರ್ನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಕೋಡಿಕಲ್ ನಿವಾಸಿ ಚಿಪ್ಪು ಯಾನೆ ರಾಕೇಶ್ ಎಂಬಾತನ ಹೆಸರು ಕೇಳಿ ಬಂದಿದೆ. ಬುಲೆಟ್ ರಾಮ ಹಿಂದೊಮ್ಮೆ ರಾಕೇಶ್ಗೆ ಚೂರಿ ತೋರಿಸಿ ಬೆದರಿಸಿದ್ದರು. ಇದೇ ದ್ವೇಷದಲ್ಲಿ ರಾಕೇಶ್ ತಳವಾರ್ಗಳಿಂದ ಕಡಿದಿದ್ದಾನೆ. ಈ ಸಂದರ್ಭ ತಡೆಯಲು ಬಂದ ಭರತ್ ಯಾನೆ ಮುನ್ನ ಅವರಿಗೂ ಗಾಯಗಳಾಗಿದೆ. ಭರತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ರಾಮಚಂದ್ರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರಾಕೇಶ್ ವಿರುದ್ಧ ಬಜಿಲಕೇರಿ ಗುರು ಕೊಲೆ ಸಹಿತ ಹಲವು ಕ್ರಿಮಿನಲ್ ಪ್ರಕರಣಗಳಿವೆ.
ವಿಕ್ರಾಂತ್ ಶೆಟ್ಟಿ ಕೊಲೆ: ಐವರ ಸೆರೆ
ಮಂಗಳೂರು: ಸ್ಕೂಟರ್ನಲ್ಲಿ ತೆರಳುತ್ತಿದ್ದ ವಿಕ್ರಾಂತ್ ಶೆಟ್ಟಿಯನ್ನು ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ, ತಳವಾರ್ಗಳಿಂದ ಕಡಿದು ಕೊಂದ ಪ್ರಕರಣದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕಂದುಕ ಶರಣ್, ರಾಜೇಶ್, ಸಂಪತ್, ನವೀನ್, ಯಶವಂತ್ ಬಂಧಿತರು. 5 ವರ್ಷಗಳ ಹಿಂದೆ ಗೂಡ್ಶೆಡ್ಡೆ ಬಾರ್ನಲ್ಲಿ ಹಲ್ಲೆ ನಡೆಸುತ್ತಿದ್ದ ಶರಣ್ ಗ್ಯಾಂಗ್ಗೆ ಪ್ರತಿರೋಧ ತೋರಿದ ವಿಕ್ರಾಂತ್ ಶೆಟ್ಟಿ ವಾಪಸ್ ಹಲ್ಲೆ ನಡೆಸಿದ್ದ. ಕಂದುಕ ಶರಣ್ಗೆ ಹೊಡೆದು ಕಲ್ಲಿನಿಂದ ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ದ. ಇದಕ್ಕೆ ಪ್ರತೀಕಾರವಾಗಿ ಕೊಲೆ ನಡೆದಿದೆ ಎನ್ನಲಾಗಿದೆ. ನೇರವಾಗಿ ತಳವಾರ್ಗಳಿಂದ ಹಲ್ಲೆ ನಡೆಸಿದರೆ ಈ ಬಾರಿಯೂ ಪ್ರತಿರೋಧ ತೋರಿಯಾನು ಎಂಬ ಹೆದರಿಕೆಯಲ್ಲಿ ಸ್ಕಾರ್ಪಿಯೊ ವಾಹನ ಡಿಕ್ಕಿ ಹೊಡೆಸಿ ಆತ ಕೆಳಗೆ ಬಿದ್ದ ಬಳಿಕ ಅತನ ಮುಖಕ್ಕೆ ತಳವಾರ್ಗಳಿಂದ ಕಡಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

