ಹೂಳೆತ್ತಿದರೂ ಅಳಿವೆಬಾಗಿಲು ಭೀತಿ!
ಮಂಗಳೂರು: ಮಳೆಗಾಲದ 45 ದಿನ ರಜೆ ಮುಗಿದು ಬೋಟುಗಳು ಮೀನುಗಾರಿಕೆಗೆ ತೆರಳಲು ಆ.10ರಂದು ಕಡಲಿಗೆ ಇಳಿಯುವ ಸಿದ್ಧತೆಯಲ್ಲಿವೆ. ಹಳೆ ಬಂದರಿನ ಅಳಿವೆಬಾಗಿಲಲ್ಲಿ ಡ್ರೆಜ್ಜಿಂಗ್ ಮಾಡಿದರೂ, ಮೀನುಗಾರಿಕಾ ಬೋಟುಗಳು ಭೀತಿಯಿಂದಲೇ ಸಮುದ್ರ ಪ್ರವೇಶಿಸಬೇಕಾಗಿದೆ. ಮೀನುಗಾರರ ಬೇಡಿಕೆಯಂತೆ ಡ್ರೆಜ್ಜಿಂಗ್(ಹೂಳೆತ್ತುವಿಕೆ) ನಡೆಸದಿರುವುದೇ ಇದಕ್ಕೆ ಕಾರಣ.
ಮುಂಬೈನ ಸೀ ಈಗಲ್ ಕಂಪನಿ ಡ್ರೆಜ್ಜಿಂಗ್ ಗುತ್ತಿಗೆ ಪಡೆದಿದ್ದು, 2012 ಅಕ್ಟೋಬರ್ನಲ್ಲಿ ಅಳಿವೆಬಾಗಿಲಲ್ಲಿ ಡ್ರೆಜ್ಜಿಂಗ್ ಪ್ರಾರಂಭಿಸಿ 6 ತಿಂಗಳಲ್ಲಿ 2013 ಏಪ್ರೀಲ್ಗೆ ಮುಗಿಸಿದೆ. ಆದರೆ ಕರಾರಿನಂತೆ ಡ್ರೆಜ್ಜಿಂಗ್ ನಡೆಸದ್ದರಿಂದ ಬಂದರು ಇಲಾಖೆ ಹಣ ಪಾವತಿಸಿಲ್ಲ ಮಾತ್ರವಲ್ಲ ಮತ್ತೆ ಸರಿಯಾಗಿ ಡ್ರೆಜ್ಜಿಂಗ್ ನಡೆಸುವಂತೆ ಮೂಗುದಾರ ಹಾಕಿದೆ.
ಅರ್ಧಂಬರ್ಧ ಡ್ರೆಜ್ಜಿಂಗ್: ಬಂದರು ಇಲಾಖೆ ರು. 4.60 ಕೋಟಿಗೆ ಟೆಂಡರ್ ನೀಡುವಾಗ ಉಪಯುಕ್ತ ಯಂತ್ರ ಉಪಯೋಗಿಸಿ ಡ್ರೆಜ್ಜಿಂಗ್ ನಡೆಸುವಂತೆ ಕರಾರು ಮಾಡಿತ್ತು. ಕಂಪನಿ ಬಾರ್ಜ್ಮೌಂಟೆಡ್ ಬಾಕ್ ಹೂಪರ್ ಡ್ರೆಜ್ಜರ್ನ್ನು ಬಳಸಿತ್ತು. ಇದರಲ್ಲಿ ಡ್ರೆಜ್ಜಿಂಗ್ ಸರಿಯಾಗಿ ಆಗುವುದಿಲ್ಲ. ಆದ್ದರಿಂದ ಕಟ್ಟರ್ ಸೆಕ್ಷನ್ ಡ್ರೆಜ್ಜರ್ ಬಳಸುವಂತೆ ಮೀನುಗಾರ ಸಂಘಟನೆಗಳು ಆಗ್ರಹಿಸಿದವು. ಆದರೂ ಹಠಬಿಡದ ಕಂಪನಿ ಹೂಪರ್ ಡ್ರೆಜ್ಜರ್ನ್ನೇ ಬಳಸಿ ಡ್ರೆಜ್ಜಿಂಗ್ ನಡೆಸಿತ್ತು. ಈ ಮಾದರಿಯ ಡ್ರೆಜ್ಜಿಂಗ್ನಲ್ಲಿ ಮೀನುಗಾರಿಕಾ ಬೋಟ್ಗಳು ನದಿಯಿಂದ ಸಮುದ್ರ ಪ್ರವೇಶಿಸಿಸುವಾಗ ಬೇಕಾಬಿಟ್ಟಿ ಕೊರೆದ ಅಳಿವೆಬಾಗಿಲಿನ ಪಾರ್ಶ್ವ ಭಾಗ ಸ್ಪರ್ಶಿಸಿ ಬೋಟ್ಗಳು ಅಪಾಯಕ್ಕೀಡಾಗುವ ಸಾಧ್ಯತೆ ಇದೆ ಎನ್ನುವುದು ಮೀನುಗಾರ ಸಂಘಟನೆಗಳ ಆರೋಪ. ಇದಕ್ಕೆ ಸೊಪ್ಪುಹಾಕದೆ ಕಂಪನಿ ಹೂಪರ್ನ್ನು ಬಳಸಿ ಅರ್ಧಂಬರ್ಧ ಡ್ರೆಜ್ಜಿಂಗ್ ನಡೆಸಿ ಹಣಕ್ಕೆ ಕೈಒಡ್ಡಿತ್ತು.
ಮೀನುಗಾರ ಸಂಘಟನೆಗಳ ಪ್ರಬಲ ವಿರೋಧದಿಂದ ಬಂದರು ಅಧಿಕಾರಿಗಳು ನಯಾಪೈಸೆ ಪಾವತಿಸಿಲ್ಲ. ಕರಾರಿನಂತೆ ಕಟ್ಟರ್ ಸೆಕ್ಷನ್ ಡ್ರೆಜ್ಜರ್ ಬಳಸಿ ಪೂರ್ತಿ ಡ್ರೆಜ್ಜಿಂಗ್ ಮಾಡುವಂತೆ ಬಂದರು ಇಲಾಖೆ ಮತ್ತೊಮ್ಮೆ ಕಂಪನಿಗೆ ಸೂಚಿಸಿತು. ಇದರಿಂದ ಮಳೆಗಾಲ ಬಳಿಕ ಮತ್ತೆ ಕಟ್ಟರ್ ಸೆಕ್ಷನ್ ಡ್ರೆಜ್ಜರ್ ಬಳಸಿ ಹೂಳೆತ್ತಲಿದೆ.
ಬಂದರು ಅಧಿಕಾರಿಗಳ ಪ್ರಕಾರ, ಈಗ ನಡೆಸಿರುವ ಡ್ರೆಜ್ಜಿಂಗ್ ಶೇ.75 ಸುರಕ್ಷಿತ. ಆದರೆ ಕರಾರಿನಂತೆ -3 ಮೀಟರ್ ಆಳದವರೆಗೆ ಸಮಾನಂತರದಲ್ಲಿ ಡ್ರೆಜ್ಜಿಂಗ್ ಮಾಡಿಲ್ಲ. ಡ್ರೆಜ್ಜಿಂಗ್ಗೆ ಹೂಪರ್ ಡ್ರೆಜ್ಜರ್ ಬಳಸಿರುವುದರಿಂದ ಚೂಪಾದ ಭಾಗಗಳು ಬೋಟ್ಗಳಿಗೆ ಸ್ಪರ್ಶಿಸಿದರೆ ಅಪಾಯ ತಪ್ಪಿದ್ದಲ್ಲ. ಒಂದೇ ರೀತಿಯಲ್ಲಿ ಸವರಿದರೆ ಬೋಟುಗಳು ಸರಾಗವಾಗಿ ಅಳಿವೆಬಾಗಿಲು ದಾಟಬಹುದು. ಇದಕ್ಕೆ ಕಟ್ಟರ್ ಸೆಕ್ಷನ್ ಡ್ರೆಜ್ಜಿಂಗ್ ಅನಿರ್ವಾಯ ಎನ್ನುತ್ತಾರೆ. ಅಕ್ಟೋಬರ್ನಲ್ಲಿ ಕಂಪನಿ ಮರು ಡ್ರೆಜ್ಜಿಂಗ್ ಕೈಗೊಳ್ಳಲಿದೆ. ಅಲ್ಲಿವರೆಗೆ ಕಂಪನಿಗೆ ಹಣಪಾವತಿ ಸಾಧ್ಯವಿಲ್ಲ ಎನ್ನುತ್ತಾರೆ.
ಸರ್ವೆಯಲ್ಲೂ ಎಡವಟ್ಟು: 2011 ಜೂನ್ಗೆ ಅಳಿವೆಬಾಗಿಲಲ್ಲಿ ಮೀನುಗಾರಿಕಾ ಬೋಟ್ ಜಲಸಮಾಧಿಯಾಗಿ 6 ಮಂದಿ ಮೃತಪಟ್ಟಾಗ ಎಚ್ಚೆತ್ತ ಬಂದರು ಇಲಾಖೆ ನವೆಂಬರ್ನಲ್ಲಿ ಡ್ರೆಜ್ಜಿಂಗ್ ನಡೆಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಆಗ ಸೀ ಈಗಲ್ ಕಂಪನಿ ಮಂಗಳೂರು ಮಾತ್ರಲ್ಲದೆ ಉಡುಪಿ, ಕುಂದಾಪುರ, ಭಟ್ಕಳ, ಕಾರವಾರ ಸೇರಿದಂತೆ ಕರಾವಳಿಯ 6 ಬಂದರುಗಳ ಡ್ರೆಜ್ಜಿಂಗ್ ನಡೆಸಲು ಟೆಂಡರ್ ಹಾಕಿತ್ತು. ಡ್ರೆಜ್ಜಿಂಗ್ಗೆ ಮುನ್ನ ಹೂಳೆತ್ತಲು ನಡೆಸಬೇಕಾದ ಪ್ರದೇಶದ ಸರ್ವೆ ನಡೆಸುವಂತೆ ಕೇಂದ್ರ ನಿರ್ದೇಶನ ನೀಡಿತ್ತು. ಅದರಂತೆ ಕಂಪನಿ ಸರ್ವೆ ನಡೆಸಿತಾದರೂ ಕರಾರಿನಂತೆ ನಡೆಸದ ಕಾರಣ ಬಂದರು ಇಲಾಖೆ ಸರ್ವೆ ವರದಿಯನ್ನು ತಿರಸ್ಕರಿಸಿತು. ಇದರಿಂದ ಹೂಳೆತ್ತುವ ಕಾರ್ಯ ಮತ್ತೆ ಮುಂದಕ್ಕೆ ಹೋಯಿತು. ಕೊನೆಗೂ ಸಣ್ಣ ಬಂದರುಗಳ ಸರ್ವೆ ಸಂಘಟನೆ(ಎಂಪಿಎಸ್ಒ)ನೇತೃತ್ವದಲ್ಲಿ ಸ್ವತಃ ಬಂದರು ಇಲಾಖೆ ಮೀನುಗಾರರ ಸಹಯೋಗದಲ್ಲಿ 2012 ಮೇನಲ್ಲಿ ಸರ್ವೆ ಪೂರ್ಣಗೊಳಿಸಿತು.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

