ದಕ್ಷಿಣ ಕನ್ನಡ

ಇಂದು 'ಯಕ್ಷಕುಸುಮ' ಪುಸ್ತಕ ಬಿಡುಗಡೆ

Published On :

ಮಂಗಳೂರು: ಕಲ್ಕೂರ ಪ್ರತಿಷ್ಠಾನ ಮತ್ತು ಸರಯೂ ಬಾಲ ಯಕ್ಷವೃಂದ ವತಿಯಿಂದ ಆ. 11 ರಂದು ಸಂಜೆ 5.30ಕ್ಕೆ ಪುರಭವನದಲ್ಲಿ 'ಯಕ್ಷಕುಸುಮ' ಪುಸ್ತಕ ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಪುಸ್ತಕ ಬಿಡುಗಡೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಯಕ್ಷಗಾನ ಕಲಾವಿದ ನವನೀತ ಶೆಟ್ಟಿ, ಉದ್ಯಮಿ ಹರೀಶ್ ಕಲ್ಬಾವಿ, ಶ್ರೀ ಕೃಷ್ಣ ಸಭಾ ಅಧ್ಯಕ್ಷ ಕೆ.ಎಸ್. ಕಲ್ಲೂರಾಯ, ಮಹಾನಗರ ಸಹಸಂಘ ಚಾಲಕ ಡಾ. ಸತೀಶ್ ರಾವ್ ಪಾಲ್ಗೊಳ್ಳುವರು ಎಂದು ಸರಯೂ ಬಾಲ ಯಕ್ಷವೃಂದ ಅಧ್ಯಕ್ಷ ರವಿ ಅಲೆವೂರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಯಕ್ಷ ಕುಸುವ ಪುಸ್ತಕ 400 ಪುಟಗಳಿಂದ ಕೂಡಿದ್ದು, ರು. 199 ಬೆಲೆ ಹೊಂದಿದೆ. ಮಕ್ಕಳಿಗೆ ಯಕ್ಷಗಾನದ ಅರಿವು ಮೂಡಿಸಲು 500 ಪುಸ್ತಕಗಳನ್ನು ಶಾಲಾ-ಕಾಲೇಜುಗಳಲ್ಲಿ ವಿತರಿಸಲಾಗುತ್ತಿದೆ. ಯಕ್ಷ ಕುಸುಮ ಹತ್ತು ಪ್ರಸಂಗಗಳ ಅರ್ಥಸಹಿತವಾದ ಹೊತ್ತಿಗೆಯಾಗಿದೆ ಎಂದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಪುಂಡು ವೇಷಧಾರಿ ಅಶಕ್ತ ಕಲಾವಿದ ಉದಯನಾವಡ ಮಧೂರು ಅವರನ್ನು ರು. 10ಸಾವಿರ ಗೌರವ ನಿಧಿ ನೀಡಿ ಗೌರವಿಸಲಾಗುವುದು. ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ವತಿಯಿಂದ ಮಧ್ಯಾಹ್ನ 3ಕ್ಕೆ ಪಂಚವಟಿ ಹಾಗೂ ಸಂಜೆ 7ಕ್ಕೆ ಸರಯೂ ಬಾಲ ಯಕ್ಷವೃಂದದ ವತಿಯಿಂದ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ನಡೆಯಲಿದೆ ಎಂದರು.
ನಾಳೆ ಶಾಲೆಗಳಲ್ಲಿ ಆಟಿಡೊಂಜಿ ಕೂಟ, ಪ್ರಶಸ್ತಿ ಪ್ರದಾನ
ಬಂಟ್ವಾಳ: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೂಚನೆಯಂತೆ ಈ ವರ್ಷ ಬಂಟ್ವಾಳ ತಾಲೂಕಿನ ಎಲ್ಲ ಶಾಲೆಗಳಲ್ಲಿ ನಡೆಯುವ ಆಟಿಡೊಂಜಿ ಕೂಟದ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಆ.12ರಂದು ಮೂಡುಪಡುಕೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ದೊರೆಯಲಿದೆ. ಆಲದಪದವು ಅಕ್ಷರ ಪ್ರತಿಷ್ಠಾನ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಸ್ಥಳೀಯ ಸಂಘಟನೆಗಳು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯ ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸುವರು. ಜಿಪಂ ಸದಸ್ಯೆ ಗಿರಿಜಾ, ತಾಪಂ ಸದಸ್ಯರಾದ ರಮೇಶ್ ಪೂಜಾರಿ ಕುಡುಮೇರು, ವಿನಯ ನಾಯಕ್, ಪಿಲಾತಬೆಟ್ಟು ಪಂಚಾಯಿತಿ ಅಧ್ಯಕ್ಷೆ ಭಾರತಿ ಶೆಟ್ಟಿ, ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಭಾಗವಹಿಸುವರು. ಇದೇ ಸಂದರ್ಭ ಆಲದಪದವು ಅಕ್ಷರ ಪ್ರತಿಷ್ಠಾನ ಕೊಡಮಾಡುವ 10ನೇ ವರ್ಷದ ತುಳುನಾಡ ತುಳು ಶ್ರೀ ಪ್ರಶಸ್ತಿಯನ್ನು ತುಳು ಸಾಹಿತಿ ಜಯಂತಿ ಎಸ್. ಬಂಗೇರ ಅವರಿಗೆ ಪ್ರದಾನ ಮಾಡಲಾಗುವುದು.
ದಲಿತ ಮುಖಂಡವಿರುದ್ಧ ಸುಳ್ಳು 'ಬಿ' ವರದಿ: ಪ್ರತಿಭಟನೆ ಎಚ್ಚರಿಕೆ
ಪುತ್ತೂರು: ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಮುಖಂಡ ಎಂ. ಕೂಸಪ್ಪ ಅವರಿಗೆ ಇತ್ತೀಚೆಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿ, ದೂರು ನೀಡಿದ ವಿಚಾರದಲ್ಲಿ ಸಂಪ್ಯ ಠಾಣೆಯಲ್ಲಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವ ಬದಲಾಗಿ ದೂರುದಾರ ಕೂಸಪ್ಪ ಅವರ ವಿರುದ್ಧವೇ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಲು ಮುಂದಾಗಿದ್ದಾರೆ ಎಂದು ದಸಂಸ ಕಡಬ ಹೋಬಳಿ ಸಂಚಾಲಕ ಆನಂದ ಮಿತ್ತಬೈಲು ಆರೋಪಿಸಿದ್ದಾರೆ. ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೀಗಾದಲ್ಲಿ ಠಾಣಾಧಿಕಾರಿಯ ವಿರುದ್ಧ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಅರ್ಜಿ ಆಹ್ವಾನ
ಮಂಗಳೂರು: ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ವತಿಯಿಂದ 2013-14ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದ.ಕ., ಉಡುಪಿ ಜಿಲ್ಲೆಯ ವೈದ್ಯಕೀಯ, ತಾಂತ್ರಿಕ ಎಂಜಿನಿಯರಿಂಗ್, ತಾಂತ್ರಿಕ ಡಿಪ್ಲೋಮ, ಸ್ನಾತಕೋತ್ತರ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿಶ್ವಕರ್ಮ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಶೇ. 75 ಫಲಿತಾಂಶ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ 9916528368 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಳ್ತಂಗಡಿ ಶಿಕ್ಷಕರಿಂದ ಪ್ರಸ್ತಾವನೆ ಆಹ್ವಾನ
ಬೆಳ್ತಂಗಡಿ: ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು 2012-13ನೇ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆ ಹಾಗೂ ಇತರ ಶೈಕ್ಷಣಿಕ ಪೂರಕವಾದ ಸಾಧನೆಗಳನ್ನು ಮಾಡಿರುವ ಅರ್ಹ ಶಿಕ್ಷಕರಿಂದ ಪ್ರಸ್ತಾವನೆ ಆಹ್ವಾನಿಸಲಾಗಿದೆ.
 ಪ್ರಸ್ತಾವನೆಯನ್ನು ಆ. 13ರ ಒಳಗೆ ಮೂರು ಪ್ರತಿಯೊಂದಿಗೆ ಸಲ್ಲಿಸಬೇಕು.
 ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಇವರನ್ನು ಸಂಪರ್ಕಿಸಬೇಕಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುಮಂಗಲ ಪಿ. ಕುಚ್ನಾಡ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಕಡಿಮೆ ಮಳೆ
ಮಂಗಳೂರು: ನಗರದಲ್ಲಿ ಶನಿವಾರ ಬೆಳಗ್ಗಿನ ಹೊತ್ತು ಮಳೆ ಸುರಿದ್ದಿದ್ದು, ದಿನವಿಡೀ ಬಿಸಿಲು ಕಾಣಿಸಿತ್ತು.
ಶನಿವಾರ ಬೆಳಗ್ಗಿನವರೆಗೆ ಜಿಲ್ಲೆಯ ಕಡಬದಲ್ಲಿ 28.2 ಮಿ.ಮೀ ಅಧಿಕ ಮಳೆ ಸುರಿದಿದೆ.
ಮಳೆ ವಿವರ: ಸುಳ್ಯ- 24.2 ಮಿ.ಮೀ., ಬೆಳ್ತಂಗಡಿ- 22.4 ಮಿ.ಮೀ., ಪುತ್ತೂರು- 17.3 ಮಿ.ಮೀ., ಮೂಡುಬಿದಿರೆ- 12.2 ಮಿ.ಮೀ., ಬಂಟ್ವಾಳ- 9.4 ಮಿ.ಮೀ., ಮಂಗಳೂರು- 7.9 ಮಿ.ಮೀ. ಮಳೆ ದಾಖಲಾಗಿದೆ.
ಎತ್ತಿನಹೊಳೆ ಯೋಜನೆ ಕೈಬಿಡಿ: ಆಗ್ರಹ
ಮಂಗಳೂರು: ಜಿಲ್ಲೆಯ ಹಿತದೃಷ್ಟಿಯಿಂದ ಕರಾವಳಿಯ ಜೀವನದಿ ನೇತ್ರಾವತಿಗೆ ತೊಂದರೆ ಮಾಡುವ ಎತ್ತಿನಹೊಳೆ ಯೋಜನೆಯನ್ನು ಕರಾವಳಿ ಚಿತ್ರಚಾವಡಿ ಸಂಘ ವಿರೋಧಿಸಿದೆ.
 ಪ್ರಕೃತಿಯ ರಮ್ಯ ನೋಟ ಚಿತ್ರಿಸುವ ಕಲಾವಿದರ ಸ್ಪೂರ್ತಿಯಾಗಿರುವ ಪಶ್ಚಿಮಘಟ್ಟಗಳ ಸಾಲನ್ನು ಕೊರೆದು ನೇತ್ರಾವತಿ ನದಿ ಹರಿವನ್ನು ತಿರುಗಿಸುವ ಯೋಜನೆಯಿಂದ ಜಿಲ್ಲೆಯ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ.  ಪರಿಸರ ವಿನಾಶಕ ಯೋಜನೆಗಳು ಜಿಲ್ಲೆಯ ನೆಮ್ಮದಿ ಕೆಡಿಸುತ್ತಿದ್ದು, ಈ ಯೋಜನೆಯನ್ನು ತಡೆಹಿಡಿಯುವಂತೆ ಅರಣ್ಯ ಸಚಿವ ಬಿ. ರಮಾನಾಥ ರೈ ಮತ್ತು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವಿಷ್ಣು ಶೇವಗೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಳಲಂಬೆಯಲ್ಲಿ ಸಾಮೂಹಿಕ ಆಶ್ಲೇಷ ಬಲಿ
ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 11 ರಂದು ನಾಗರ ಪಂಚಮಿ, ಸಾಮೂಹಿಕ ಆಶ್ಲೇಷ ಬಲಿ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ಆಶ್ಲೇಷ ಬಲಿ ಪೂಜೆ ಮಾಡಿಸುವ ಅವಕಾಶ ಇದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಸುಬ್ರಹ್ಮಣ್ಯ: ಇಂದು ನಾಗರ ಪಂಚಮಿ
ಸುಬ್ರಹ್ಮಣ್ಯ: ನಾಡಿನಾದ್ಯಂತ ಭಾನುವಾರ ನಾಗರ ಪಂಚಮಿ ಆಚರಣೆ ನಡೆಯಲಿದ್ದು, ನಾಗನ ನೆಲೆವೀಡು ಕುಕ್ಕೆ ಸುಬ್ರಹ್ಮಣ್ಯದಲ್ಲೂ ಈ ದಿನ ನಾಗರ ಪಂಚಮಿ ನಡೆಯಲಿದೆ. ಪ್ರತಿವರ್ಷ ಶ್ರೀ ದೇವಳದಲ್ಲಿ ನಾಗರ ಪಂಚಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ದೇವಳದ ಹೊರಗಡೆ ಇರುವ ನಾಗ ಪ್ರತಿಷ್ಠಾ ಮಂಟಪದ ನಾಗನ ಕಲ್ಲುಗಳಿಗೆ ಅರ್ಚಕರ ಮೂಲಕ ನೂರಾರು ಭಕ್ತಾದಿಗಳು ಹಾಲೆರೆದು ಆರಾಧಿಸಲಾಗುತ್ತದೆ. ಅಲ್ಲದೆ ನಾಗಬನಗಳಲ್ಲಿ ಕೂಡ ನಾಗದೇವರಿಗೆ ಹಾಲೆರೆದು ಪೂಜಿಸಲಾಗುತ್ತದೆ.
ಇಂದು, 13ರಂದು ವಿದ್ಯುತ್ ವ್ಯತ್ಯಯ
ಪುತ್ತೂರು: ನೆಟ್ಲ ಮುಡ್ನೂರು- ಪುತ್ತೂರು ಲೈನ್‌ನಲ್ಲಿ ಗೋಪುರ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ.11 ಮತ್ತು 13ರಂದು ಬೆಳಗ್ಗಿನಿಂದ ಸಂಜೆತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. ಪುತ್ತೂರು ವಿಭಾಗದ ಕುಂಬ್ರ, ನೆಲ್ಯಾಡಿ, ಕಡಬ, ಸವಣೂರು, ಸುಳ್ಯ ಮತ್ತು ಬೆಳ್ಳಾರೆ ಉಪಕೇಂದ್ರದಿಂದ ಸರಬರಾಜುಗೊಳ್ಳುವ ಎಲ್ಲ ಪ್ರದೇಶಗಳಿಗೆ ಕಾಮಗಾರಿಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನ ಪುತ್ತೂರು ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಡ್ರಾಯಿಂಗ್ ಗ್ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಸಾಧನೆ: ಶರ್ವಾನ್‌ಗೆ ಸನ್ಮಾನ
ಉಪ್ಪಿನಂಗಡಿ: 2012- 13ನೇ ಸಾಲಿನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಡ್ರಾಯಿಂಗ್ ಗ್ಲೋವರ್ ಗ್ರೇಡ್ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ಶಾಲೆಯ ಹಳೆ ವಿದ್ಯಾರ್ಥಿ ಮಹಮ್ಮದ್ ಶರ್ವಾನ್ ಕೆ.ಕೆ. ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದಿದ್ದು, ದ.ಕ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಅವರನ್ನು ಸನ್ಮಾನಿಸಿ ಗೌರವಿಸಿದೆ. ಪ್ರಸ್ತುತ ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು ಕೈಲ ನಿವಾಸಿ ಕಾಸಿಂ ಮತ್ತು ಕೆ.ಕೆ. ರುಕ್ಯ ದಂಪತಿ ಪುತ್ರ. ಈ ಪರೀಕ್ಷೆಯಲ್ಲಿ ಇಂದ್ರಪ್ರಸ್ಥ ವಿದ್ಯಾಲಯ ಶೇ.100 ಫಲಿತಾಂಶ ಪಡೆದಿದೆ. ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಹದಿನೇಳು ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, ಹದಿನೇಳು ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಆರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇಂದು ಕಾಳಿಂಗ ನಾವುಡ ಪ್ರಶಸ್ತಿ ಪ್ರದಾನ
ಹಂಗಾರಕಟ್ಟೆ: ಯಕ್ಷಗಾನ ಕಲಾಕೇಂದ್ರ ವತಿಯಿಂದ, ಬೆಂಗಳೂರಿನ ಕಲಾ ಕದಂಬ ಸಹಯೋಗದಲ್ಲಿ ಯಕ್ಷವರ್ಷ ಕಾರ್ಯಕ್ರಮ ಮತ್ತು ಕಾಳಿಂಗ ನಾವುಡ ಪ್ರಶಸ್ತಿ ಪ್ರದಾನ ಸಮಾರಂಭ ಗುಂಡ್ಮಿಯಲ್ಲಿರುವ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ಆ.11ರಂದು ನಡೆಯಲಿದೆ. ಅಂದು ಸಂಜೆ ಗಂಟೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಶಾಸಕ ಪ್ರಮೋದ್ ಮಧ್ವರಾಜ್, ಪ್ರದೀಪ್ ಕುಮಾರ್ ಕಲ್ಕೂರ, ಆನಂದ ಸಿ. ಕುಂದರ್, ಜಿ.ಎಲ್. ಹೆಗಡೆ ಮತ್ತು ಶ್ರೀಪತಿ ಹೆಗಡೆ ಉಪಸ್ಥಿತರಿರುತ್ತಾರೆ ಎಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.
20ರಿಂದ ಚೆನ್ನೈ-ಮಂಗಳೂರು ರೈಲು ರದ್ದು
ಮಂಗಳೂರು: ಕೇರಳ ಪೊಲ್ಲಾಚ್ಚಿ-ಪೊದನೂರು ಮಧ್ಯೆ ಹಳಿ ಪರಿವರ್ತನೆ ಕಾಮಗಾರಿ ಹಿನ್ನಲೆಯಲ್ಲಿ ಕೆಲವು ರೈಲು ಸಂಚಾರ ವಿಳಂಬದ ಬಗ್ಗೆ ಪ್ರಕಟಣೆ ನೀಡಿದ್ದ ರೇಲ್ವೆ ಇಲಾಖೆ ಈಗ ಅದೇ ರೈಲು ಸಂಚಾರ ರದ್ದುಪಡಿಸಿರುವುದಾಗಿ ಮತ್ತೊಂದು ಹೇಳಿಕೆ ನೀಡಿದೆ. ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ರೈಲನ್ನು ಆ.20ರಿಂದ 25ರವರೆಗೆ ರದ್ದುಪಡಿಸಲಾಗಿದೆ. ಇದಲ್ಲದೆ ಕೇರಳದೊಳಗೆ ಸಂಚರಿಸುವ 9 ರೈಲು ಸಂಚಾರವನ್ನು ವಿವಿಧ ಸಮಯದಲ್ಲಿ ರದ್ದುಪಡಿಸಲಾಗಿದೆ. ಚೆನ್ನೈ ಎಗ್ಮೋರ್-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಕೊಯಂಬತ್ತೂರ್ ಜಂಕ್ಷನ್‌ನಿಂದ ಆ.11ರಿಂದ 15ರ ವರೆಗೆ 60ರಿಂದ 70 ನಿಮಿಷ ವಿಳಂಬವಾಗಿ ಹೊರಡಲಿದೆ. ಜಮ್ಮುತಾವಿ-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಕೊಯಂಬತ್ತೂರ್ ಜಂಕ್ಷನ್‌ನಿಂದ ಆ.15ರಂದು 105 ನಿಮಿಷ ವಿಳಂಬ, ಎರ್ನಾಕುಲಂ ಜಂಕ್ಷನ್-ಬೆಂಗಳೂರು ಸಿಟಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಆ.16ರಂದು 45 ನಿಮಿಷ ತಡವಾಗಿ ಮಧುಕ್ಕರೈ ನಿಲ್ದಾಣದಿಂದ ಹೊರಡಲಿದೆ ಎಂದು ಫಾಲ್ಘಾಟ್ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.