ದಕ್ಷಿಣ ಕನ್ನಡ

ಅಡಕೆಗೆ ವೈಜ್ಞಾನಿಕ ಪರಿಹಾರ ನೀಡಿ: ಮಲ್ಲಿಕಾರ್ಜುನ

Published On :

ಪುತ್ತೂರು: ಅಡಕೆಗೆ ಕೊಳೆರೋಗ ಹಾಗೂ ಹಳದಿ ಎಲೆ ರೋಗ ಬಾಧೆಯಿಂದ ತತ್ತರಿಸಿರುವ ಜಿಲ್ಲೆಯ ರೈತರ ಸಮಸ್ಯೆಯನ್ನು ಸರ್ಕಾರ ಅರ್ಥೈಸಿಕೊಂಡು ಸರಿಯಾದ ಸಮೀಕ್ಷೆ ನಡೆಸಿ ವೈಜ್ಞಾನಿಕ ಪರಿಹಾರ ಒದಗಿಸಬೇಕು. ಇಲ್ಲದಿದ್ದಲ್ಲಿ ಸಂಘಟನೆ ಮೂಲಕ ರಾಜ್ಯಾದ್ಯಂತ ಬೃಹತ್ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಕ ವೈ.ಬಿ. ಮಲ್ಲಿಕಾರ್ಜುನ ಎಚ್ಚರಿಸಿದರು.
 ಅವರು ಜಿಲ್ಲೆಯಲ್ಲಿನ ಅತಿವೃಷ್ಟಿಯಿಂದ ಅಡಕೆ ಬೆಳೆಗೆ ಉಂಟಾದ ಕೊಳೆರೋಗ ಹಾಗೂ ಹಳದಿ ಎಲೆ ರೋಗ ಭಾದೆಯಿಂದ ನಷ್ಟಕ್ಕೊಳಗಾದ ಕೃಷಿಕರ ಎಲ್ಲ ಕೃಷಿ ಸಾಲ ಮನ್ನಾ, ರೈತರಿಗೆ ವಿಶೇಷ ಪ್ಯಾಕೇಜ್ ಹಾಗೂ ಡಾ. ಗೋರಖ್ ಸಿಂಗ್ ವರದಿ ಸಮರ್ಪಕ ಜಾರಿಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ನಡೆದ ಹಕ್ಕೊತ್ತಾಯ ಚಳವಳಿಯಲ್ಲಿ ಮಾತನಾಡಿದರು.
 ಅಡಕೆ ಮರವೊಂದರ ನಷ್ಟಕ್ಕೆ ರು. 2 ಸಾವಿರ ಪರಿಹಾರ ನೀಡಬೇಕು ಎಂಬುದು ನಿಯಮವಾಗಿದ್ದರೂ ಸರ್ಕಾರ ಒಬ್ಬ ರೈತನಿಗೆ ರು. 200 ಅಥವಾ ರು. 300 ಕೊಟ್ಟು ಕೈತೊಳೆದುಕೊಳ್ಳುತ್ತದೆ. ವೈಜ್ಞಾನಿಕ ರೀತಿಯ ಪರಿಹಾರ ಪಡೆಯುವುದು ರೈತರ ಹಕ್ಕು ಎಂದ ಅವರು ರೈತರ ಸಂಕಷ್ಟದಿಂದಾಗಿ ಆರ್ಥಿಕ ವ್ಯವಸ್ಥೆಯೇ ದಿವಾಳಿಯಾಗುವ ಅಪಾಯವಿದೆ. ಜಿಲ್ಲೆಯ ಸಂಸದರು ಈ ಬಗ್ಗೆ ಕೇಂದ್ರ ಸರ್ಕಾರದ ಮುಂದೆ ಒತ್ತಡ ಹಾಕುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
 ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎನ್. ಮಂಜುನಾಥ ಗೌಡ ಮಾತನಾಡಿ, ಸಮಸ್ಯೆ ಹೇಳಲು ಬಂದ ರೈತರನ್ನು ಗೇಟು ಹಾಕಿ ತಡೆಯುವ ಕೆಲಸವನ್ನು ಪುತ್ತೂರು ಉಪಭಾಗಾಧಿಕಾರಿಗಳು ಪೊಲೀಸರ ಮೂಲಕ ನಡೆಸಿದ್ದಾರೆ. ಇದೊಂದು ಗುಲಾಮಗಿರಿಯ ಸಂಕೇತ ಎಂದು ಆಕ್ರೋಶ ವ್ಯಕ್ತಪಡಿಸಿದರು.  
 ಪ್ರತಿಭಟನಾಕಾರರು ಉಪವಿಭಾಗಾಧಿಕಾರಿಗಳ ಕಚೇರಿಯ ಆವರಣದ ಒಳಗೆ ಪ್ರವೇಶಿಸದಂತೆ ಕಚೇರಿಯ ಗೇಟ್ ಹಾಕಿ ತಡೆಯಲು ಯತ್ನಿಸಿದ ಪೊಲೀಸರ ಕ್ರಮದ ವಿರುದ್ಧ ಆಕ್ರೋಶಗೊಂಡ ರೈತರು ನಾವು ದರೋಡೆಕೋರರಲ್ಲ. ನಮ್ಮ ಸಮಸ್ಯೆಗಳನ್ನು ಅಧಿಕಾರಿಗೆ ಮುಟ್ಟಿಸಲು ಬಂದರೆ ಹೆದರಿ ಗೇಟ್ ಹಾಕಿಸಿ ಒಳಗೆ ಕುಳಿತುಕೊಳ್ಳುವ ಮೂಲಕ ರೈತರಿಗೆ ಅವಮಾನ ಮಾಡಿದಂತಾಗಿದೆ ಎಂದರು.   
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಬಿ. ಶ್ರೀಧರ್ ಶೆಟ್ಟಿ ಮಾತನಾಡಿದರು.
ಶಾಸಕಿ ಭರವಸೆ: ಸ್ಥಳಕ್ಕಾಗಮಿಸಿದ ಶಾಸಕಿ ಶಕುಂತಳಾ ಶೆಟ್ಟಿ ಅವರು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ರೇಖಾ ಅವರನ್ನು ಕರೆಸಿಕೊಂಡು ಪ್ರತಿಭಟನಾಕಾರರ ಸಮ್ಮುಖದಲ್ಲಿ ಮಾತುಕತೆ ನಡೆಸಿದರು. ಈಗಾಗಲೇ ಸರ್ಕಾರದ ಗಮನಕ್ಕೆ ಇಲ್ಲಿನ ರೈತರ ಸಮಸ್ಯೆಯನ್ನು ತಂದಿದ್ದೇನೆ ಎಂದ ಅವರು ಶೀಘ್ರದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ಸಭೆ ಕರೆಯಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಅಡಕೆ ಬೆಳೆಗಾರರ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಈ ವರದಿಯನ್ನು ಮುಂದಿಟ್ಟು ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚೆ ಮಾಡುವುದಾಗಿ ತಿಳಿಸಿದರು.
 ಪುತ್ತೂರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಕೃಷಿಕರು ವಿಭಾಗಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಕೊಳೆರೋಗ ಬಾಧಿತ ಅಡಕೆಯನ್ನು ಸುರಿದು ಆಕ್ರೋಶ ಪ್ರದರ್ಶಿಸಿದರು. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಎಚ್. ಪ್ರಸನ್ನ ರೈತ ಸಂಘ ನೀಡಿದ ಮನವಿಯನ್ನು ಸ್ವೀಕರಿಸಿ ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು. ಮನವಿಯನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ ವಾಚಿಸಿದರು. ರೈತ ಸಂಘ ಹಸಿರು ಸೇನೆಯ ಮುಖಂಡರಾದ ಜಿ.ಪಂ. ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಧರ್ಣಪ್ಪ ಗೌಡ ಇಡ್ಯಾಡಿ, ಅಬ್ದುಲ್ ರಹಿಮಾನ್ ಹಾಜಿ ಅರ್ತಕೆರೆ, ವಾಸುದೇವ ಗೌಡ ಇಡ್ಯಾಡಿ, ಧನಕೀರ್ತಿ ಬಲಿಪ, ಹಸೈನಾರ್ ಕಡಂಬು, ಕುಶಾಲಪ್ಪ ಗೌಡ, ಸುದರ್ಶನ ಕಂಪ, ನೂರಾರು ಮಂದಿ ರೈತರು ಭಾಗವಹಿಸಿದ್ದರು.

ವಾರದೊಳಗೆ ಸಮೀಕ್ಷೆ: ಎ.ಸಿ. ಎಚ್.ಪ್ರಸನ್ನ
ರೈತರ ಸಮಸ್ಯೆಗಳು ನಮ್ಮ ಅರಿವಿಗೂ ಬಂದಿದೆ. ರಾಜ್ಯ ಸರಕಾರದ ಅಧಿಕಾರಿ ಭರತ್‌ಲಾಲ್ ಮೀನಾ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ವಾರದೊಳಗೆ ಅಡಿಕೆ ರೈತರ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವ ಜವಾಬ್ದಾರಿಯನ್ನು ಕಂದಾಯ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆಗೆ ನೀಡಿದ್ದಾರೆ.
  ಜಲ್ಲಾಧಿಕಾರಿಯವರ ಆದೇಶದಂತೆ ಸಮೀಕ್ಷೆ ಪೂರ್ಣಗೊಳಸಿ ಜಂಟಿ ಸರ್ವೇ ವರದಿಯನ್ನು ಈ ವಾರದ ಅಂತ್ಯದೊಳಗೆ ಸರ್ಕಾರಕ್ಕೆ  ನೀಡುವುದಾಗಿ ಸಹಾಯಕ ಆಯುಕ್ತ ಎಚ್. ಪ್ರಸನ್ನ ರೈತರಿಗೆ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.