ಸಿಎ ಬ್ಯಾಂಕ್ ವಳಾಲು ಶಾಖೆಯಲ್ಲಿ ಕಳವು ಯತ್ನ ವಿಫಲ
ಉಪ್ಪಿನಂಗಡಿ: ಬಹುಬಗೆಯ ವ್ಯವಹಾರ ನಡೆಸುತ್ತಿರುವ ಉಪ್ಪಿನಂಗಡಿ ಸಿಎ ಬ್ಯಾಂಕ್ನ ಬಜತ್ತೂರು ಗ್ರಾಮದ ವಳಾಲು ಶಾಖೆಯಲ್ಲಿ ಕಳ್ಳತನ ಯತ್ನ ವಿಫಲವಾಗಿದೆ.
ಬ್ಯಾಂಕ್ ಕಟ್ಟಡದ ಹಿಂಭಾಗದ ಕಿಟಕಿ ಕಿತ್ತು ಒಳನುಗ್ಗಿದ್ದ ಕಳ್ಳರು, ಲಾಕರ್ ಅಳವಡಿಸಿದ್ದ ಕಾಂಕ್ರಿಟ್ ಗೋಡೆ ಕೊರೆದು ಲಾಕರ್ ಕೊಠಡಿಯೊಳಗೆ ನುಗ್ಗಲು ಯತ್ನಿಸಿ ವಿಫಲರಾಗಿದ್ದಾರೆ. ಗೋಡೆಯ ನಿರ್ಮಾಣ ಸಮಯದಲ್ಲಿ ಅಳವಡಿಸಲಾದ ತಾಂತ್ರಿಕ ಗಟ್ಟಿತನದಿಂದಾಗಿ ಕಳ್ಳರ ಕಾರ್ಯ ವಿಫಲವಾಗಿದೆ.
ಗಟ್ಟಿ ಲಾಕರ್, ಗೋಡೆ: ಚಿನ್ನಾಭರಣ ಅಡಮಾನ ಇರಿಸಲಾಗುತ್ತಿರುವ ಈ ಶಾಖೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣಗಳಿರುವ ಸಾಧ್ಯತೆಯನ್ನು ಅಂದಾಜಿಸಿ ಈ ಕಳ್ಳತನ ಯತ್ನ ನಡೆದಿರುವ ಸಾಧ್ಯತೆ ಕಂಡುಬಂದಿದೆ. ಸಾಮಾನ್ಯವಾಗಿ ಬಾಗಿಲು ಮುರಿದು ಒಳ ನುಗ್ಗುವ ಕಳ್ಳರು ಇಲ್ಲಿ ಕಿಟಕಿಯನ್ನೇ ಬೇರ್ಪಡಿಸಿ ಒಳ ನುಗ್ಗಿರುವುದು ಕಳ್ಳತನದಲ್ಲಿ ಹೊಸತನವನ್ನು ಮೂಡಿಸಿದಂತಾಗಿದೆ.
ಬ್ಯಾಂಕ್ ಲಾಕರ್ ವ್ಯವಸ್ಥೆ ಅಭೇದ್ಯವಾಗಿದ್ದು, ಲಾಕರ್ನೊಳಗೊಂದು ಲಾಕರ್ ಅಳವಡಿಕೆ ಮಾಡಿದ್ದರಿಂದ ಸುಲಭವಾಗಿ ನಗದು ಸಹಿತ ಚಿನ್ನಾಭರಣ ದೋಚಬಹುದೆಂಬ ಕಳ್ಳರ ಅಂದಾಜು ತಲೆ ಕೆಳಗಾಗಿದೆ.
ಶನಿವಾರ ವ್ಯವಹಾರ ಮುಗಿಸಿದ ಬಳಿಕ ಬಾಗಿಲು ಹಾಕಿ ಹೋಗುವ ಸಿಬ್ಬಂದಿ ಸೋಮವಾರದೇ ಕಚೇರಿಗೆ ಆಗಮಿಸುವುದರಿಂದ ಸುಲಲಿತವಾಗಿ ಹಾಗೂ ಸುದೀರ್ಘ ಸಮಯದ ಕಾರ್ಯಾಚರಣೆ ನಡೆಸಲು ಕಳ್ಳರು ಶನಿವಾರ ರಾತ್ರಿಯಿಂದಲೇ ಚಾಲನೆ ನೀಡಿರುವ ಶಂಕೆ ಮೂಡಿದೆ.
ವಳಾಲು ಶಾಖೆ ಸಿಬ್ಬಂದಿ ಜತ್ತಪ್ಪ ಸೋಮವಾರ ಮುಂಜಾನೆ ಕಚೇರಿಯ ಬಾಗಿಲು ತೆರೆದು ಪ್ರವೇಶಿಸಿದಾಗ ಕಳ್ಳತನ ಯತ್ನ ಅರಿವಿಗೆ ಬಂದಿತು. ತಕ್ಷಣ ಉಪ್ಪಿನಂಗಡಿ ಕೇಂದ್ರ ಕಚೇರಿಗೆ ಪೋನಾಯಿಸಿ ಅಧ್ಯಕ್ಷ ಭಾಸ್ಕರ ಆಚಾರ್ಯ ಅವರಿಗೆ ತಿಳಿಸಿ, ಉಪ್ಪಿನಂಗಡಿ ಪೊಲೀಸರ ಗಮನಕ್ಕೆ ತರಲಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಗೋಡೆ ಕೊರೆಯಲು ಬಳಸಿದ್ದ ಕೆಲ ಸಾಮಗ್ರಿಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು, ಆತುರಾತುರವಾಗಿ ಪರಾರಿಯಾಗಿರುವ ಸಾಧ್ಯತೆಯೂ ಕಂಡುಬಂದಿದೆ. ಘಟನೆ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ಸುರೇಶ್ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉಪ್ಪಿನಂಗಡಿ ಸಿಎ ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1990ರ ಘಟನೆ ಮರುಕಳಿಸುವ ಸಾಧ್ಯತೆ ಇತ್ತೇ?
ಉಪ್ಪಿನಂಗಡಿ ಸಿಎ ಬ್ಯಾಂಕಿನ ಕೇಂದ್ರ ಕಚೇರಿಗೆ 1990ರಲ್ಲಿ ನುಗ್ಗಿದ ಕಳ್ಳರು ಬ್ಯಾಂಕ್ ಲಾಕರ್ನಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ ದೋಚಿದ್ದರು. ಈ ಘಟನೆಗೆ ಸಂಬಂಧಿಸಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಲು ಮುಂದಾಗಿದ್ದರೂ ಕಾರ್ಯಾಚರಣೆಗೆ ಸಿಲುಕಿದ ಅದೆಷ್ಟೋ ಅಮಾಯಕರು ಪೊಲೀಸರ ಬಾಯಿ ಬಿಡಿಸುವ ಪ್ರಕ್ರಿಯೆಗೆ ಸಿಲುಕಿ ನಲುಗಿದ್ದರು. ಪೊಲೀಸರ ಅವಿರತ ಪ್ರಯತ್ನದ ಫಲವಾಗಿ ಇಬ್ಬರು ಕಳ್ಳರು ಪೊಲೀಸರ ವಶವಾಗಿ ಕಳವಾದ ಚಿನ್ನಾಭರಣ ಪತ್ತೆಯಾಗಿತ್ತು. ಪ್ರಕರಣ ಸಂಬಂಧಿಸಿ ಕಳವಿಗೆ ಸಹಕರಿಸಿದರೆಂಬ ಶಂಕೆಯ ಮೂವರು ಪೊಲೀಸರ ಕೈಗೆ ಸಿಗುವ ಭೀತಿಯಿಂದ ಆತ್ಮಹತ್ಯೆಗೆದಿದ್ದರು. ಅಂದಿನ ಘಟನೆ ಸೂತಕದ ಛಾಯೆಯಂತೆ ಪರಿಸರದ ಜನತೆಯನ್ನು ಕಾಡುತ್ತಿರುವಾಗಲೇ ಬ್ಯಾಂಕ್ನ ವಳಾಲು ಶಾಖೆಯಲ್ಲಿ ಅದೇ ರೀತಿಯ ಘಟನೆ ಸಂಭವಿಸಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

