ದಕ್ಷಿಣ ಕನ್ನಡ

ಕಡಲಿಗೆ ಇಳಿಯಲು ಸಮುದ್ರದೇವ ಸಂಪ್ರೀತಿ

Published On :

ಮಂಗಳೂರು: 40 ದಿನಗಳ ರಜೆ ಕಳೆದು ಮೀನುಗಾರಿಕೆ ಋತು ಆರಂಭಗೊಡಿದ್ದರೂ ಮೊಗವೀರ ಮೀನುಗಾರರು ಕಡಲಿಗೆ ಇಳಿಯುವುದು ಸಮುದ್ರ ಪೂಜೆ ಬಳಿಕವೇ. ಸಮುದ್ರ ಕಿನಾರೆಯಲ್ಲಿ ಗಂಗಾಮಾತೆ ಸೇರಿದಂತೆ ವಿವಿಧ ದೇವರುಗಳಿಗೆ ಪೂಜೆ ನೆರವೇರಿಸಿದ ಬಳಿಕ ಮತ್ಸ್ಯಸಂಪತ್ತು ಅನುಗ್ರಹಿಸುವಂತೆ ಸಮುದ್ರದೇವನನ್ನು ಪ್ರಾರ್ಥಿಸಿ ಯಾಂತ್ರೀಕೃತ ಮೀನುಗಾರಿಕೆ ಪ್ರಾರಂಭಿಸುತ್ತಾರೆ.
 ಈ ಬಾರಿ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಸಮುದ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಿ, ಹೂ, ಹಣ್ಣುಕಾಯಿ ಅರ್ಪಿಸಿದರು. ಕದ್ರಿ ಶ್ರೀಕ್ಷೇತ್ರ ಸುವರ್ಣ ಕದಳೀ ಮಠದ ಪೀಠಾಧಿಪತಿ ಶ್ರೀಸಂಧ್ಯಾನಾಥಜಿ ನೇತೃತ್ವದಲ್ಲಿ ಸಮುದ್ರ ಪೂಜೆ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಮಂಗಳವಾರ ನಡೆಯಿತು. ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಇದನ್ನು ಆಯೋಜಿಸಿತ್ತು.
 ಬೆಳಗ್ಗೆ ಬೊಕ್ಕಪಟ್ಣ ಚರ್ಚ್‌ಗೇಟ್‌ನಿಂದ ಮೆರವಣಿಗೆ ಹೊರಟು ಬೋಳೂರುಕಟ್ಟೆ, ಬೋಳೂರು ಗ್ರಾಮ ಚಾವಡಿಯಿಂದ ಗುರುಪುರ ಹೊಳೆದಾಟಿ ತಣ್ಣೀರುಬಾವಿ ಸಮುದ್ರ ಕಿನಾರೆಗೆ ಆಗಮಿಸಿತು. ಅಲ್ಲಿನ ಕಟ್ಟೆಯಲ್ಲಿ ಪ್ರತಿ ಮೊಗವೀರ ಮನೆಗಳಿಂದ ತಂದ ಹಾಲು, ತೆಂಗಿನಕಾಯಿ, ಹೂವುಗಳನ್ನು ದೇವರಿಗೆ ಅರ್ಪಿಸಲಾಯಿತು. ನೈವೇದ್ಯ ಬಳಿಕ ಮಂಗಳಾರತಿ ನೆರವೇರಿತು. ಈ ಸಂದರ್ಭ ಸಚಿವ ಬಾಬುರಾವ್ ಚಿಂಚನ್‌ಸೂರ್, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ, ಸಂಯುಕ್ತ ಸಭಾ ಅಧ್ಯಕ್ಷ ಮಾಧವ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಸುವರ್ಣ, ಉಪಾಧ್ಯಕ್ಷ ದಿವಾಕರ ಅಂಚನ್, ಕೋಶಾಧಿಕಾರಿ ದಯಾನಂದ ಪುತ್ರನ್, ಏಳು ಗ್ರಾಮದ ಪ್ರತಿನಿಧಿ ರತ್ನಾಕರ ಪುತ್ರನ್ ಮತ್ತಿತರರಿದ್ದರು.
ಸಾಮೂಹಿಕ ಸಮುದ್ರ ಪೂಜೆ: ಬ್ಯಾಂಡ್ ವಾಲಗ, ಹುಲಿ ವೇಷ ರಂಗು, ಇಕ್ಕೆಲಗಳಲ್ಲಿ ಕಲಶ ಕನ್ನಿಕೆಯರ ಮಧ್ಯೆ ಸಮುದ್ರ ತೀರಕ್ಕೆ ಮೆರವಣಿಗೆ ಸಾಗಿತು. ಅಲ್ಲಿ ಸಂಯುಕ್ತ ಸಭಾದ ಗುರಿಕಾರರು ಸಮುದ್ರದೇವನ ಪ್ರಾರ್ಥಿಸಿ, ಈ ಋತುವಿನಲ್ಲಿ ಹೇರಳ ಮತ್ಸ್ಯಸಂಪತ್ತು ಕರುಣಿಸು ಎಂದು ಬೇಡಿಕೊಂಡರು. ಸಮುದ್ರ ಅಲೆಯ ಅಬ್ಬರ ನಡುವೆ ಸಚಿವರು, ಸ್ವಾಮೀಜಿ, ಗಣ್ಯರು ಸಮುದ್ರಕ್ಕೆ ಹೂ, ತೆಂಗಿನಕಾಯಿ ಅರ್ಪಿಸಿ ಹಾಲು ಅಭಿಷೇಕ ನೆರವೇರಿಸಿದರು.
ಹೊಸ ಬಂದರು ಪ್ರಸ್ತಾಪ: ಕಾರವಾರದಲ್ಲಿ ರು. 500 ಕೋಟಿ ವೆಚ್ಚದಲ್ಲಿ ಹೊಸ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಬಂದರು, ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದರು.
ಸಮುದ್ರ ಪೂಜೆ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಮೊಗವೀರ ಸಮಾಜದ ಅಭಿವೃದ್ಧಿ ಸರ್ಕಾರ ಬದ್ಧವಾಗಿದ್ದು, ಮೀನುಗಾರರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅಪಾರ ಮತ್ಸ್ಯ ಸಂಪತ್ತು ಜತೆಗೆ ಮೀನುಗಾರರ ಬದುಕು ಹಸನಾಗಬೇಕು. ತನ್ನ ಅಧಿಕಾರ ಅವಧಿಯಲ್ಲಿ ಮೀನುಗಾರರ ಬೇಡಿಕೆ ಈಡೇರಿಕೆಗೆ ಪ್ರಯತ್ನಿಸುವುದಾಗಿ ಹೇಳಿದರು.
 ಮೇರಿಟೈಮ್ ಬೋರ್ಡ್ ಸ್ಥಾಪನೆ ಬಗ್ಗೆ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಜತೆ ಮಾತುಕತೆ ನಡೆಸಲಾಗಿದೆ. ಈಗ ಪ್ರಸ್ತಾವನೆ ಕೇಂದ್ರ ಗೃಹ ಸಚಿವರ ಬಳಿ ಇದೆ ಎಂದರು. ಮಂಗಳೂರಿನಲ್ಲಿ ಮೀನುಗಾರಿಕೆಗೆ ನೆರವಾಗಲು ಶಾಶ್ವತ ಡ್ರಜ್ಜಿಂಗ್ ಯಂತ್ರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
 ಶಾಸಕ ಜೆ.ಆರ್. ಲೋಬೋ ಮಾತನಾಡಿ, ಕುಳಾಯಿ ಮತ್ತು ಹಂಗಾರಕಟ್ಟೆಗೆ ಹೊಸ ಮೀನುಗಾರಿಕೆ ಬಂದರು ಮಂಜೂರು ಮಾಡಿರುದನ್ನು ಸ್ವಾಗತಿಸಿದರು. ಇಲ್ಲಿನ ಅಳಿವೆಬಾಗಿಲು ಹೂಳೆತ್ತಬೇಕು. ಈ ಹಿಂದೆ ಶಾಶ್ವತ ಕಟ್ಟರ್ ಡ್ರಜ್ಜಿಂಗ್ ಇತ್ತು, ಬಂದರು ಇಲಾಖೆ ಸ್ವಾಧೀನಕ್ಕೆ ಬಂದ ಬಳಿಕ ಸ್ವಂತ ಡ್ರೆಜ್ಜರ್ ಇಲ್ಲ. ಸ್ವಂತ ಡ್ರೆಜ್ಜರ್ ಶೀಘ್ರ ಒದಗಿಸಬೇಕು ಎಂದರು.
ಮೇರಿಟೈಮ್ ಬೋರ್ಡ್ ಸ್ಥಾಪನೆ ಬಗ್ಗೆ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಜತೆ ಮಾತುಕತೆ ನಡೆಸಲಾಗಿದೆ. ಈಗ ಪ್ರಸ್ತಾವನೆ ಕೇಂದ್ರ ಗೃಹ ಸಚಿವರ ಬಳಿ ಇದೆ. ಮಂಗಳೂರಿನಲ್ಲಿ ಮೀನುಗಾರಿಕೆಗೆ ನೆರವಾಗಲು ಶಾಶ್ವತ ಡ್ರಜ್ಜಿಂಗ್ ಯಂತ್ರ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
- ಬಾಬುರಾವ್ ಚಿಂಚನಸೂರ್, ಬಂದರು ಮತ್ತು ಒಳನಾಡು
ಜಲಸಾರಿಗೆ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.