ದಕ್ಷಿಣ ಕನ್ನಡ

ಚಿಣ್ಣರಿಗೆ ಚಿತ್ರ ಪುಸ್ತಕ, ಬಣ್ಣ ಪೆನ್ಸಿಲ್ ಉಚಿತ

Published On :

ಮಂಗಳೂರು: ರಾಜ್ಯದಲ್ಲಿ ಒಂದನೇ ತರಗತಿಯಿಂದ ಮೂರನೇ ತರಗತಿ ವರೆಗಿನ ಪುಟಾಣಿಗಳು ಈ ವರ್ಷದಿಂದ ಡ್ರಾಯಿಂಗ್ ಪುಸ್ತಕದಲ್ಲಿ ಬಣ್ಣದ ಪೆನ್ಸಿಲ್ (ಕ್ರೆಯೋನ್)ನಲ್ಲಿ ಬಗೆಬಗೆಯ ಚಿತ್ತಾರ ಮೂಡಿಸಲಿದ್ದಾರೆ. ಇದುವರೆಗೆ ರಟ್ಟು ಅಥವಾ ಸ್ಲೇಟ್ ಬಳಪ ಬಳಸಿ ಚಿತ್ರ ಬಿಡಿಸಬೇಕಾಗುತ್ತಿತ್ತು.
ಸರ್ವ ಶಿಕ್ಷಣ ಅಭಿಯಾನ ಯೋಜನೆಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ಡ್ರಾಯಿಂಗ್ ಪುಸ್ತಕ ಮತ್ತು ಕ್ರೆಯೋನ್ ಕೊಡಲಾಗುತ್ತಿದೆ. 'ನಲಿ-ಕಲಿ' ಕಾರ್ಯಕ್ರಮದಲ್ಲಿ ಇದನ್ನು ಪೂರೈಕೆ ಮಾಡುತ್ತಾರೆ.
ಪ್ರತಿ ಸರ್ಕಾರಿ ಶಾಲೆಯ ಪ್ರತಿ ಮಗುವಿಗೆ ಡ್ರಾಯಿಂಗ್ ಪುಸ್ತಕ ಮತ್ತು ಕ್ರೆಯೋನ್ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಡ್ರಾಯಿಂಗ್ ಪುಸ್ತಕ ಹಂಚಿಕೆಯಾಗಿದ್ದು, ಈ ವಾರದಲ್ಲಿ ಕ್ರೆಯೋನ್ ಕೂಡ ಬರಲಿದೆ. ಡ್ರಾಯಿಂಗ್ ಪಿರಿಯಡ್ ಅಲ್ಲದೆ ಪರಿಸರ ಅಧ್ಯಯನದಲ್ಲೂ ಚಿಣ್ಣರು ಬಣ್ಣದ ಪೆನ್ಸಿಲ್ ಬಳಸಿ ತಮ್ಮ ಸಾಮರ್ಥ್ಯ ತೋರಿಸಲಿದ್ದಾರೆ.
ಚಿಣ್ಣರೇ ಕಂಡದ್ದು ಬಿಡಿಸೋದು: ಈ ಬಾರಿಯಿಂದ ತರಗತಿ ಟೀಚರ್ ಡ್ರಾಯಿಂಗ್ ಕಲಿಸುವುದಕ್ಕೆ ಬದಲಾಗಿ ಚಿಣ್ಣರೇ ತಾವು ಕಂಡದ್ದನ್ನು ಚಿತ್ರಿಸುವುದಕ್ಕೆ ಒತ್ತು ನೀಡುವಂತೆ ಸೂಚಿಸಲಾಗಿದೆ. ಶಾಲಾವಧಿಯಲ್ಲಿ ಪ್ರತಿದಿನ ಡ್ರಾಯಿಂಗ್ ತರಗತಿ ಇದ್ದು, ಇತರೆ ಚಟುವಟಿಕೆಯಲ್ಲೂ ಡ್ರಾಯಿಂಗ್‌ನ್ನು ಹಾಸುಹೊಕ್ಕಾಗಿ ಸೇರಿಸಲಾಗುತ್ತದೆ.
ಚಿತ್ರಕಲೆ ಬಗ್ಗೆ ಮಗುವಿನಲ್ಲಿರುವ ಸುಪ್ತಪ್ರತಿಭೆ ಅನಾವರಣಗೊಳಿಸುವುದಕ್ಕೆ ಇಲ್ಲಿ ಅವಕಾಶವಿದೆ.
ಕಳೆದ ವರ್ಷ ಜಾರಿಯಾದ 'ನಲಿ-ಕಲಿ' ಕಾರ್ಯಕ್ರಮದಲ್ಲಿ ಭೂಗೋಳದ ಕಿಟ್ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಈ ವರ್ಷ ಡ್ರಾಯಿಂಗ್, ಕ್ರೆಯೋನ್ ಕೊಡಲಾಗಿದೆ.
ಇದುವರೆಗೆ  ಕೆಲವು ಶಾಲೆಗಳಲ್ಲಿ ಕಲಿಕಾ ಚಪ್ಪರ ರಚಿಸಿ ಕೈಗೆಟಕುವ ತಂತಿ ಮೇಲೆ ಚಿಣ್ಣರು ರಟ್ಟಿನಲ್ಲಿ ಬಿಡಿಸಿದ ಚಿತ್ರಗಳನ್ನು ತೂಗುಹಾಕುತ್ತಿದ್ದರು.
ಗ್ರಾಮೀಣ ಪ್ರದೇಶಗಳಲ್ಲಿ ಚಿಣ್ಣರು ಸ್ಲೇಟಿನಲ್ಲೇ ಬಳಪ ಬಳಸಿ ಚಿತ್ರ ಗೀಚುತ್ತಿದ್ದರು. ಈಗ ಡ್ರಾಯಿಂಗ್ ಪುಸ್ತಕ ನೀಡಿರುವುದರಿಂದ ಇದಕ್ಕೆಲ್ಲ ಪೂರ್ಣವಿರಾಮ ಬಿದ್ದಿದೆ.
ಕಲಿಕೋಪಕರಣಕ್ಕೆ ಹಣ ಇಲ್ಲ: ಇದೇ ವೇಳೆ ಸರ್ವ ಶಿಕ್ಷಣ ಅಭಿಯಾನದಡಿ ಕಲಿಕೋಪಕರಣ ತಯಾರಿಸಲು ಶಿಕ್ಷಕರಿಗೆ ನೀಡುತ್ತಿದ್ದ ವಾರ್ಷಿಕ ರು. 500 ಅನುದಾನವನ್ನು ಈ ಬಾರಿಯಿಂದ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಪ್ರತಿ ವರ್ಷ ಶಾಲಾನುದಾನವಾಗಿ ಪ್ರತಿ ಶಾಲೆಗಳಿಗೆ ರು. 12 ಸಾವಿರ ನೀಡುತ್ತಿದ್ದು ಅದರಲ್ಲಿ ಕಲಿಕೋಪಕರಣ ಖರೀದಿಸಬಹುದು. ಇದಲ್ಲದೆ ಶಾಲೆ ನಿರ್ವಹಣೆ ವೆಚ್ಚದಲ್ಲೂ ಕಲಿಕೋಪಕರಣ ಖರೀದಿಗೆ ಅವಕಾಶವಿದೆ.   

 ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.