ಅನುಭವ ಮೀರಿದ ಜ್ಞಾನ ಇಲ್ಲ: ಡಾ.ಮಾಧವ ಪೆರಾಜೆ
ಕಾಂತಾವರ: ಅನುಭವ ಮೀರಿದ ಜ್ಞಾನವಿಲ್ಲ. ವೇದಗಳು ಪರಮ ಧರ್ಮರಹಸ್ಯವಾದರೂ ಅವುಗಳು ಕೂಡ ಪ್ರಮಾಣವಲ್ಲ ಮತ್ತು ಕೇವಲ ಓದುವುದರಿಂದ ಜ್ಞಾನ ಪ್ರಾಪ್ತವಾಗುವುದಿಲ್ಲ ಎಂದು ಬಲವಾಗಿ ನಂಬಿದವರು ಭಾರತೀಯರು ಎಂದು ಸಂಶೋಧಕ, ಉಪನ್ಯಾಸಕ ಡಾ. ಮಾಧವ ಪೆರಾಜೆ ಹೇಳಿದರು.
ಕಾಂತಾವರು ಅಲ್ಲಮಪ್ರಭು ಪೀಠದ ತಿಂಗಳ ಸಾಹಿತ್ಯ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮದಲ್ಲಿ 'ಭಾರತೀಯರ ದೃಷ್ಟಿಕೋನದಲ್ಲಿ ಪಠ್ಯ- ಒಂದು ಜಿಜ್ಞಾಸೆ' ವಿಷಯ ಕುರಿತು ಅವರು ಮಾತನಾಡಿದರು.
ಜ್ಞಾನವು ಪವಿತ್ರ ಗ್ರಂಥದಲ್ಲಿದ್ದು, ಅದೇ ಮುಖ್ಯ ಪಠ್ಯವಾಗಿದೆ. ಈ ಪಠ್ಯದಿಂದಾಚೆಗೆ ಯಾವುದೂ ಇಲ್ಲ ಎಂದು ಪರಿಭಾವಿಸುವ ಪಾಶ್ಚಿಮಾತ್ಯರ ಚಿಂತನೆಯ ಫಲವಾಗಿಯೇ ಒಂದು ದೇವರು, ಒಂದು ಗ್ರಂಥ, ಒಂದು ಮತ ಎಂಬ ಪರಿಕಲ್ಪನೆ ಬೆಳೆಯಿತು ಎಂದು ತಿಳಿಸಿದರು.
ಎಲ್ಲೆಲ್ಲೂ ಧಾರ್ಮಿಕತೆಯಿದೆಯೇ ಅಲ್ಲೆಲ್ಲಾ ಈ ನಂಬಿಕೆ ಬೆಳೆದು ಬಂದಿದೆ. ಆದರೆ, ಭಾರತೀಯರಲ್ಲಿ ಪಠ್ಯದ ಪರಿಕಲ್ಪನೆಯೇ ವಿಭಿನ್ನವಾದದ್ದು. ನಮ್ಮಲ್ಲಿ ವೇದ, ರಾಮಾಯಣ, ಮಹಾಭಾರತ, ಗೀತೆ, ಪುರಾಣಗಳಿದ್ದರೂ ಯಾವುದೂ ಕೂಡ ಪಾಶ್ಚಾತ್ಯರಂತೆ ಧಾರ್ಮಿಕ ಪಠ್ಯವಾಗಿಲ್ಲ. ನಮ್ಮ ಅಂತರಂಗಕ್ಕೆ ಅನುಭವಕ್ಕೆ ದಕ್ಕುವಂಥದ್ದೇ ನಿಜವಾದ ಜ್ಞಾನವಾಗಿದ್ದು, ವೇದ, ಶಾಸ್ತ್ರ, ಪುರಾಣಗಳೇ ಇರಲಿ ಜೀವ ವಿರೋಧಿ ಆಗಬಾರದೆಂಬುದು ಶ್ರೀಕೃಷ್ಣನ ಇಂಗಿತವೂ ಆಗಿತ್ತು ಎಂದರು.
ಭಾರತೀಯರಿಗೆ ಪಾಶ್ಚಾತ್ಯ ರೀತಿಯ ಪಠ್ಯದ ಕಲ್ಪನೆಯೇ ಇಲ್ಲ. ನಮ್ಮದು ವೈವಿಧ್ಯಮಯ ಸಂಸ್ಕೃತಿಯಾದುದರಿಂದ ನಮಗೆ ಪಠ್ಯ ಒಂದು ನೆಪಕ್ಕಾಗಿ ಮಾತ್ರ. ಅದು ಸಮಗ್ರವಾಗುವುದಿಲ್ಲ. ಅಗತ್ಯ ಬಿದ್ದಾಗ ಅಂತಹ ಎಲ್ಲಾ ಪಠ್ಯಗಳು ನಿರಾಕರಿಸುವುದೇ ಜ್ಞಾನದ ಉಗಮವೂ ಹೌದು ಎನ್ನುವ ಪರಿಕಲ್ಪನೆ ನಮ್ಮದು. ಇದಕ್ಕಾಗಿ ನಾವು ಕೀಳರಿಮೆ ಹೊಂದಬೇಕಾಗಿಲ್ಲ. ನಮ್ಮ ಈ ಕಲ್ಪನೆಯೇ ವಿಶಿಷ್ಟವಾದದ್ದು ಮತ್ತು ಶ್ರೇಷ್ಠವಾದದ್ದು ಎಂದರು. ಚಂದ್ರಕುಮಾರ್ ಪಡಿವಾಳ್, ಡಾ.ನಾ. ಮೊಗಸಾಲೆ, ಸದಾನಂದ ನಾರಾವಿ ಇದ್ದರು. ಕಲ್ಲೂರ ನಾಗೇಶ್ ನಿರ್ವಹಿಸಿದರು. ಡಾ. ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಯಶೋಧರ್ ಪಿ. ಕರ್ಕೇರಾ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

