ಖಾತರಿ ಫಲಾನುಭವಿಗಳಿಗೆ ಸಣ್ಣ ರೈತ ದೃಢಪತ್ರ ವಿನಾಯ್ತಿ
ಮಂಗಳೂರು: ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗ) ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಜತೆಗೆ ಸಣ್ಣ ಅಥವಾ ಅತಿ ಸಣ್ಣ ರೈತರು ಎಂಬ ಬಗ್ಗೆ ಫಲಾನುಭವಿಗಳು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಕೊಡಬೇಕಿತ್ತು. ಆದರೆ ಖಾತರಿ ಯೋಜನೆಯನ್ನು ಪರಿಣಾಮಕಾರಿ ಮತ್ತು ತ್ವರಿತ ಅನುಷ್ಠಾನ ದಿಶೆಯಲ್ಲಿ ದ.ಕ. ಜಿಲ್ಲೆಯಲ್ಲಿ ಇದರಿಂದ ವಿನಾಯ್ತಿ ನೀಡಿದ್ದು, ಇದರ ಬದಲು ಪಿಡಿಒಗಳು ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯನ್ನು ಹೊಂದಲಿದ್ದಾರೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರೆಂದು ದೃಢಪತ್ರಕ್ಕೆ ರೈತರು ಕಚೇರಿಗೆ ಅಲೆದಾಡುವುದು ತಪ್ಪಲಿದೆ.
ಖಾತರಿ ವಿಳಂಬಕ್ಕೆ ತಡೆ: ಕಳೆದ ಎರಡು ವರ್ಷ ಖಾತರಿ ಯೋಜನೆ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಅನುಷ್ಠಾನಗೊಂಡಿತ್ತು. ಅಲ್ಲದೆ ನಿರೀಕ್ಷಿತ ರೀತಿಯಲ್ಲಿ ಪ್ರಗತಿ ದಾಖಲಿಸಿರಲಿಲ್ಲ. ಸುಳ್ಯ, ಪುತ್ತೂರು ಸೇರಿದಂತೆ ಕೆಲವು ತಾಲೂಕುಗಳಲ್ಲಿ ಪ್ರಗತಿಯಲ್ಲಿ ತೀರಾ ಹಿನ್ನಡೆ ಕಂಡಿತ್ತು. ಇದಕ್ಕೆ ಕಾರಣ ಪರಿಶೀಲಿಸಿದಾಗ ಫಲಾನುಭವಿಗಳು ತಾವು ಸಣ್ಣ ಮತ್ತು ಅತಿ ಸಣ್ಣ ರೈತರೆಂದು ದೃಢಪತ್ರ ತರಲು ಹರಸಾಹಸ ಪಡುತ್ತಿದ್ದರು. ಕಂದಾಯ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿ, ಬಳಿಕ ವಾರಗಟ್ಟಲೆ ಸರ್ಟಿಫಿಕೇಟ್ಗೆ ಕಾಯಬೇಕಾಗುತ್ತಿತ್ತು. ಇದರಿಂದ ಕ್ರಿಯಾಯೋಜನೆ ಅವಧಿ ಮುಕ್ತಾಯವಾಗಿ, ಮುಂದಿನ ವರ್ಷಕ್ಕೆ ಕಾಯಬೇಕಾಗುತ್ತಿತ್ತು.
ಉದ್ಯೋಗ ಚೀಟಿ ಹೊಂದಿರುವ ಫಲಾನುಭವಿಗಳು ಪಹಣಿಪತ್ರ ತೆಗೆದುಕೊಂಡು ಪಿಡಿಒ ಬಳಿಗೆ ತೆರಳಿದರೆ ಸಣ್ಣ ರೈತ ದೃಢಪತ್ರ ತರುವಂತೆ ವಾಪಸ್ ಕಳುಹಿಸುತ್ತಿದ್ದರು. ಪತ್ರ ತರುವಷ್ಟರಲ್ಲಿ ಕ್ರಿಯಾಯೋಜನೆ ಅವಧಿ ಮುಗಿದಿರುತ್ತಿತ್ತು. ದೃಢಪತ್ರ ಕಡ್ಡಾಯ ಮಾಡಬಾರದು, ಪಿಡಿಒ ಪಟ್ಟಿ ಹೊಂದಿರಬೇಕು ಎಂದು ಒಂಬುಡ್ಸ್ಮನ್ ಸೂಚಿಸಿದ್ದರೂ ಅದನ್ನು ಪಾಲಿಸುತ್ತಿರಲಿಲ್ಲ. ಅರ್ಜಿ ಸ್ವೀಕರಿಸಲು ನಿರಾಕರಿಸಿದೆ ದೂರು ನೀಡುವಂತೆ ಒಂಬುಡ್ಸ್ಮನ್ ಸೂಚಿಸಿದ್ದರೂ ರೈತರು ಅಷ್ಟಾಗಿ ಸ್ಪಂದಿಸುತ್ತಿರಲಿಲ್ಲ. ಆದರೆ ಇದರಿಂದ ಖಾತರಿ ಯೋಜನೆ ಅನುಷ್ಠಾನಕ್ಕೆ ಹೊಡೆತ ಬೀಳುತ್ತಿತ್ತು.
ಜಾಗೃತಿ ಸಮಿತಿ ನಿರ್ಣಯ: ಸಂಸದ ನಳಿನ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ 2011 ಅ.4ರಂದು ನಡೆದ ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಖಾತರಿ ಅನುದಾನ ಖರ್ಚಾಗದಿರುವ ಅಂಶ ಪ್ರಸ್ತಾಪಗೊಂಡಿತು. ರೈತರಿಗೆ ಇಲಾಖೆಗಳಿಂದ ಸಮಸ್ಯೆಯಾಗದಂತೆ ಕಂದಾಯ ಇಲಾಖೆಯಿಂದ ಪಿಡಿಒ ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸಣ್ಣ ರೈತರ ಪಟ್ಟಿಯನ್ನು ಪಡೆದುಕೊಳ್ಳಬೇಕು. ಫಲಾನುಭವಿಗಳು ಅರ್ಜಿ ಸಲ್ಲಿಸಿದಾಗ, ಅವರ ಹೆಸರು ಸಣ್ಣ ಮತ್ತು ಅತಿ ಸಣ್ಣ ರೈತರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ ಅರ್ಜಿಯನ್ನು ಸ್ವೀಕರಿಸಬೇಕು ಸಭೆ ನಿರ್ಣಯಿಸಿತ್ತು. ಆದರೆ ಅದು ಕಡ್ಡಾಯ ಅನುಷ್ಠಾನವಾಗದೆ ಮತ್ತೆ ಪಿಡಿಒ ಅರ್ಜಿ ವಾಪಸ್ ಕಳುಹಿಸುವುದು ಮುಂದುವರಿಯುತ್ತಿತ್ತು.
ಇದೀಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಎಲ್ಲ ಪಿಡಿಒಗಳು ಕಡ್ಡಾಯವಾಗಿ ಸಣ್ಣ ರೈತರ ಪಟ್ಟಿ ಹೊಂದಿರಬೇಕಿದ್ದು, ಫಲಾನುಭವಿಗಳ ಅರ್ಜಿ ಪರಿಶೀಲಿಸಿ ಸ್ವೀಕರಿಸುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಖಾತರಿ ಯೋಜನೆ ತ್ವರಿತ ಅನುಷ್ಠಾನಕ್ಕೆ ವೇಗ ಸಿಕ್ಕಿದಂತಾಗಿದೆ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

