ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Published On :

ಅಪರಿಚಿತ ವಾಹನ ಡಿಕ್ಕಿ: ಅಂಚೆ ಇಲಾಖೆ ಸಿಬ್ಬಂದಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ರಾ.ಹೆ. 75 ರಲ್ಲಿ ಅಪರಿಚಿತ ವಾಹನವೊಂದು ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಂಚೆ ಇಲಾಖೆ ಸಿಬ್ಬಂದಿ ಧರ್ನಪ್ಪ ಗೌಡ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಗಾಯಾಳು ಆಸ್ಪತ್ರೆಗೆ ದಾಖಲಾಗಿದ್ದು, ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಲ್ಲಡ್ಕದಲ್ಲಿ ಘರ್ಷಣೆ: ದೂರು, ಪ್ರತಿದೂರು
ಬಂಟ್ವಾಳ: ಕಲ್ಲಡ್ಕದಲ್ಲಿ ಶುಕ್ರವಾರ ರಾತ್ರಿ ಸಂಘ ಪರಿವಾರದ ಸಂಘಟನೆಗಳ ನಡುವೆ ನಡೆದ ಘರ್ಷಣೆಯ ಕುರಿತಂತೆ ಬಂಟ್ವಾಳ ನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ಶುಕ್ರವಾರ ರಾತ್ರಿಯೇ ಠಾಣೆಗೆ ದೂರು ನೀಡಿದ ಶ್ರೀಕಾಂತ್ ಎಂಬವರು ತನ್ನ ಮೇಲೆ ಜಯರಾಂ, ಮಹಾಬಲ ಶೆಟ್ಟಿ, ನವೀನ, ಯತೀನ್, ರವಿ, ಪುಷ್ಪ, ಸಂದೇಶ್ ಶೆಟ್ಟಿ, ಮಿಥುನ್ ಮೊದಲಾದವರಿದ್ದ ತಂಡ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೊಳಕೀರು ನಿವಾಸಿ ವಾಸು ಎಂಬವರು ಪ್ರತಿದೂರು ನೀಡಿದ್ದು, ಶುಕ್ರವಾರ ರಾತ್ರಿ ಕಲ್ಲಡ್ಕದಲ್ಲಿ ಸಂತೋಷ್, ಕಿರಣ್, ಮೋಹನ್ ದಾಸ್, ರತ್ನಾಕರ ಶೆಟ್ಟಿ, ಸುಂದರ, ಕರುಣಾಕರ ಶೆಟ್ಟಿ, ರಾಮಕೃಷ್ಣ, ದಿನೇಶ, ರವಿ ಪೂಜಾರಿ, ಕರುಣಾಕರ ಪೂಜಾರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬಂಟ್ವಾಳ ನಗರ ಪೊಲೀಸರು ಇತ್ತಂಡಗಳ ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹಿಂಸಾತ್ಮಕವಾಗಿ ಕರು ಸಾಗಾಟ: ಇಬ್ಬರ ಬಂಧನ
ಬಂಟ್ವಾಳ: ಜೀಪೊಂದರಲ್ಲಿ ಎರಡು ಕರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಹಾಗೂ ಅಬೂಬಕ್ಕರ್ ಬಂಧಿತ ಆರೋಪಿಗಳು.
 ಇವರು ಜೀಪೊಂದರಲ್ಲಿ ದನದ ಕರುಗಳನ್ನು ಸಾಗಿಸುತ್ತಿದ್ದ ವೇಳೆ ವಿಟ್ಲ ಚಂದಳಿಕೆ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಎರಡು ಕರುಗಳ ಸಹಿತ ಜೀಪನ್ನು ವಶಪಡಿಸಿಕೊಂಡಿದ್ದಾರೆ.

ಕಾರು ಬೈಕ್ ಡಿಕ್ಕಿ: ವಿದ್ಯಾರ್ಥಿ ಸಾವು
ಉಪ್ಪಿನಂಗಡಿ: ಇಲ್ಲಿನ ಸಮೀಪದ ಪಾಪರ್‌ಕಲ್ಲು ಎಂಬಲ್ಲಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಉದಯ ಆಚಾರಿ (19) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಉಜಿರೆ ಕಾಲೇಜಿನ ವಿದ್ಯಾರ್ಥಿಯಾಗಿರುವ ಉದಯ ಆಚಾರಿ ತನ್ನ ಸ್ನೇಹಿತರೊಡಗೂಡಿ ಬೈಕ್‌ನಲ್ಲಿ ಕೊಕ್ಕಡದ ತನ್ನ ಮನೆಗೆ ಹೋಗುತ್ತಿದ್ದಾಗ ಧರ್ಮಸ್ಥಳ- ಪೆರಿಯಶಾಂತಿ ಹೆದ್ದಾರಿಯ ಪಾಪರ್‌ಕಲ್ಲು ಬಳಿ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು. ಪರಿಣಾಮ ಉದಯ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ವಿಖ್ಯಾತ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಉದಯ ಆಚಾರಿ ಕೊಕ್ಕಡದ ನಾವಳೆ ಶ್ರೀನಿವಾಸ ಆಚಾರಿ ಎಂಬವರ ಮಗನಾಗಿದ್ದಾರೆ. ಘಟನೆಯಲ್ಲಿ ಇನ್ನೊಂದು ಬೈಕ್‌ನಲ್ಲಿದ್ದ ದೀಪಕ್ ಮತ್ತು ಗುರು ಎಂಬವರಿಗೂ ಗಾಯಗಳಾಗಿದ್ದು, ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಪುತ್ತೂರು ಟ್ರಾಫಿಕ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರದಡಿ ಸಿಲುಕಿ ಕಾರ್ಮಿಕ ಸಾವು
ಸುಳ್ಯ: ಮರ ಕಡಿಯುತ್ತಿದ್ದಾಗ ಅದರಡಿ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಮಡಪ್ಪಾಡಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಡಪ್ಪಾಡಿಯ ಕೇವಳ ಬಳಿಯ ಶೇಷಪ್ಪ ಪೂಜಾರಿ (38) ಮೃತರು. ಪೈಕ ರಾಮಚಂದ್ರ ಗೌಡ ಎಂಬವರ ಜಾಗದಲ್ಲಿ ಮರ ಕಡಿಯುತ್ತಿದ್ದಾಗ ಶೇಷಪ್ಪ ಪೂಜಾರಿ ಮೇಲೆ ಮರ ಬಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಶನಿವಾರ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದ್ದು, ಸಂಜೆ ವೇಳೆಗೆ ಮರ ತೆರವುಗೊಳಿಸಿ ಮೃತದೇಹ ಹೊರತೆಗೆಯಲಾಯಿತು.

ಕಾರು ಡಿಕ್ಕಿ: ಬಾಲಕಿ ಗಂಭೀರ
ವಿಟ್ಲ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಆಮ್ನಿ ಕಾರು ಡಿಕ್ಕಿಯಾಗಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಶನಿವಾರ ನಡೆದಿದೆ. ವಿಟ್ಲ ಕೊಡಂಗಾಯಿಯ ಎರ್ಮನಿಲೆ ನಿವಾಸಿ ಶೇಖರ ಎಂಬವರ ಪುತ್ರಿ ಹರಿಣಾಕ್ಷಿ (10) ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿದೆ. ಸಾಲೆತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಮಹಮ್ಮದ್ ಆಸೀಫ್ ಎಂಬವರು ಚಲಾಯಿಸುತ್ತಿದ್ದ ಕಾರು, ಸಾಲೆತ್ತೂರು ರಸ್ತೆಯ ಕೊಡಂಗಾಯಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ಡಿಕ್ಕಿ ಹೊಡೆಯಿತು. ಬಾಲಕಿ ಎದೆ, ಕೈ, ಮುಖಕ್ಕೆ ಗಂಭೀರ ಗಾಯಗಳಾದವು. ಕಾರು ಚಾಲಕನ ಅತಿ ವೇಗ, ಅಜಾಗರೂಕತೆ ಚಾಲನೆಯೇ ಘಟನೆಗೆ ಕಾರಣ ಎನ್ನಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು- ಸ್ಕೂಟರ್ ಡಿಕ್ಕಿ: ಮಹಿಳೆಗೆ ಗಾಯ
ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚನಕೆರೆ ಸಮೀಪದ ಡಿವೈನ್ ಕಮ್ಯೂನಿಟಿ ಸೆಂಟರ್ ಎದುರು ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಕಿನ್ನಿಗೋಳಿ ಕಡೆಯಿಂದ ಮೂಲ್ಕಿಗೆ ಬರುತ್ತಿದ್ದ ಮಾರುತಿ ಕಾರೊಂದು ಸ್ಕೂಟರ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ರಮೀಜಾ ತೀವ್ರ ಗಾಯಗೊಂಡಿದ್ದಾರೆ. ರಮೀಜಾ ಸ್ಕೂಟರ್‌ನಲ್ಲಿ ಕೆಂಚನಕೆರೆ ಕಡೆಗೆ ಹೋಗುತ್ತಿದ್ದು, ಅಪಘಾತದಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಶನಿವಾರ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯ ಅಕ್ರಮ ಸಾಗಾಟ: ಓರ್ವ ಬಂಧನ
ಉಪ್ಪಿನಂಗಡಿ: ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಅಕ್ರಮ ಸಾಗಾಟಕ್ಕೆ ಬಳಸಿದ್ದ 67 ಬಾಟ್ಲಿ ಮದ್ಯವನ್ನು ಉಪ್ಪಿನಂಗಡಿ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ತಪಾಸಣೆ ಕೈಗೊಂಡ ಉಪ್ಪಿನಂಗಡಿ ಪೊಲೀಸರು ಬೆಳ್ತಂಗಡಿ ತಾಲೂಕು ಬಂದಾರು ನಿವಾಸಿ ಕೃಷ್ಣಪ್ಪ ಪೂಜಾರಿ ಎಂಬವರನ್ನು ಶೋಧಿಸಿದಾಗ ಅವರಲ್ಲಿ 67 ಬಾಟ್ಲಿ ಮದ್ಯ ಪತ್ತೆಯಾಗಿತ್ತು. ಮದ್ಯವನ್ನು ಸ್ವಾಧೀನ ಪಡಿಸಿದ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.