ದಕ್ಷಿಣ ಕನ್ನಡ

ಕರು ತೊಳೆಯಲು ನದಿಗೆ ಇಳಿದ ವ್ಯಕ್ತಿ ನೀರುಪಾಲು

Published On :

ವಿಟ್ಲ: ಕರು ತೊಳೆಯಲೆಂದು ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರುಪಾಲಾದ ಘಟನೆ ಸಾಲೆತ್ತೂರು ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ಭಾನುವಾರ ಬೆಳಕಿಗೆ ಬಂದಿದೆ. ನೆಕ್ಕರೆಕಾಡು ನಿವಾಸಿ ಕೇಶವ ನಾಯ್ಕ (50) ಮೃತರು. ಅವರು ಶನಿವಾರ ಸಂಜೆ ಕರುವನ್ನು ತನ್ನ ಮನೆ ಸಮೀಪದ ನದಿ ಬಳಿಗೆ ಒಯ್ದಿದ್ದರು. ಆದರೆ ಮನೆಗೆ ಭಾನುವಾರವೂ ವಾಪಸಾಗಿರಲಿಲ್ಲ. ಮನೆಯವರು ಹುಡುಕಾಟ ನಡೆಸಿದ್ದರು. ಮೀನು ಹಿಡಿಯಲು ನದಿಗೆ ಹೋದವರಿಗೆ ಕೇಶವ ಅವರ ಶವ ಕಂಡುಬಂದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂತು. ಇತ್ತ ಕರು ಮಾತ್ರ ಜೀವಂತವಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಿತನಿಗೆ ಇರಿದು ಪರಾರಿ
ಮಂಗಳೂರು: ವೈಯಕ್ತಿಕ ಸ್ನೇಹಾಚಾರ ದ್ವೇಷಕ್ಕೆ ತಿರುಗಿ ಸ್ನೇಹಿತನನ್ನೇ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಭಾನುವಾರ ಪಂಜಿಮೊಗರಿನಲ್ಲಿ ವರದಿಯಾಗಿದೆ. ಆರೋಪಿ ಜಾಸನ್ ಡಿಸೋಜ(28)ಎಂಬಾತನೇ ಸ್ನೇಹಿತ ಚರಣ್‌ರಾಜ್(25)ನನ್ನು ಚೂರಿಯಿಂದ ಇರಿದಾತ. ಪಂಜಿಮೊಗರಿನಲ್ಲಿ ನೆರೆಕರೆ ನಿವಾಸಿಗಳಾದ ಇವರು ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ಶನಿವಾರ ರಾತ್ರಿ ಇಬ್ಬರ ಮಧ್ಯೆ ಯಾವುದೋ ಕಾಣಕ್ಕೆ ಜಗಳ ನಡೆದಿತ್ತು. ಉಳಿದ ಸ್ನೇಹಿತರು ಜಗಳನ್ನು ಬಿಡಿಸಿದ್ದರು. ಆದರೆ ಮರುದಿನ ಬೆಳಗ್ಗೆ ಚರಣ್‌ನನ್ನು ಮನೆಯಿಂದ ಹೊರಗೆ ಕರೆದ ಜಾಸನ್ ಡಿಸೋಜ, ಚೂರಿಯಿಂದ ತಿವಿದು ಕೊಲೆಗೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡ ಚರಣ್‌ನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಜಾಸನ್ ಡಿಸೋಜ ಪರಾರಿಯಾಗಿದ್ದಾನೆ. ಈತ ಹಿಂದೆ ಬಿಜೈ ರಾಜಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣಕ್ಕೆ ಬೆದರಿಕೆ ಕರೆ ಮಾಡಿದಾತ ಸೆರೆ
ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ಹಫ್ತಾ ವಸೂಲಿಗೆ ಬೆದರಿಕೆ ಹಾಕಿದ ಉದ್ಯಮಿಯನ್ನು ಬಂದರು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಜಿಜುದ್ದೀನ್ ರಸ್ತೆಯಲ್ಲಿ ಉದ್ಯಮ ನಡೆಸುತ್ತಿರುವ ಸಂಶುದ್ದೀನ್ ಎಂಬಾತನೇ ಬಂಧಿತ ಆರೋಪಿ. ಈತ ಸ್ಥಳೀಯ ಮಾತಾಜಿ ಹಾರ್ಡ್‌ವೇರ್ ಮಾಲಕ ಭರತ್ ಭೈಗೆ ರು. 10 ಲಕ್ಷ ನೀಡುವಂತೆ ನ.7ರಂದು ಮೊಬೈಲ್ ಮೂಲಕ ಕರೆ ಮಾಡಿ, ತಪ್ಪಿದಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಸಿದ್ದನು. ಈ ಬಗ್ಗೆ ಭರತ್ ಬಂದರು ಪೊಲೀಸರಿಗೆ ದೂರು ನೀಡಿದ್ದರು. ಮೊಬೈಲ್ ಕರೆಯನ್ನಾಧರಿಸಿ ತನಿಖೆ ನಡೆಸಿದ ಪೊಲೀಸರು ಭರತ್‌ನ ಪಕ್ಕದ ಅಂಗಡಿಯ ಸಂಶುದ್ದೀನ್‌ನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದ ನಿಜ ಸಂಗತಿ ಬಯಲಿಗೆ ಬಂದಿತ್ತು. ಶಂಸುದ್ದೀನ್ ಹಿಂದೆ ಭರತ್‌ನಿಂದ ರು. 40 ಸಾವಿರ ಸಾಲ ಪಡೆದಿದ್ದ. ಪುನಃ ಹಣದ ಅವಶ್ಯಕತೆ ಬಂದಾಗ, ಆತನ ಸ್ನೇಹಿತ ಫಯಾಜ್ ಎಂಬಾತ, ಭರತ್‌ನಲ್ಲಿ ಸಾಕಷ್ಟು ಹಣ ಇದೆ. ಭೂಗತರ ಹೆಸರಲ್ಲಿ ಕರೆ ಮಾಡಿ ಹಣ ವಸೂಲಿ ಮಾಡುವಂತೆ ಉಪಾಯ ತಿಳಿಸಿದ್ದ. ಅದರಂತೆ ಸಂಶುದ್ದೀನ್ ಫೋನ್ ಕರೆ ಮಾಡಿ ಸಿಕ್ಕಿಬಿದ್ದ. ಬಂಧಿತ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬೈಕ್‌ಗಳ ಮುಖಾಮುಖಿ; ಸವಾರರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಗಾಂಧಿ ಪಾರ್ಕ್ ಬಳಿ ಭಾನುವಾರ ರಾತ್ರಿ ಸಂಭವಿಸಿದ ಬೈಕ್- ಬೈಕ್ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.
  ಬಜತ್ತೂರು ಗ್ರಾಮದ ಕಾಂಚನ ನಿವಾಸಿಗರಾದ ಸದಾನಂದ ಮತ್ತು ಪ್ರಸಾದ್ ಎಂಬಿಬ್ಬರು ಬೈಕ್‌ನಲ್ಲಿ ಉಪ್ಪಿನಂಗಡಿಯತ್ತ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಪೆರಿಯಡ್ಕ ನಿವಾಸಿ ವಸಂತ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಹೆದ್ದಾರಿಗೆ ಅಪ್ಪಳಿಸಿದ ಸದಾನಂದ ಮತ್ತು ಪ್ರಸಾದ್ ಗಂಭೀರ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಇನ್ನೊಂದು ಬೈಕ್‌ನ ಸವಾರ ವಸಂತ ಕೂಡಾ ಗಾಯಗೊಂಡಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.