ಮಂಗಳೂರಲ್ಲಿ 15 ದಿನ ವಿಶೇಷ ಕೈಮಗ್ಗ ಮೇಳ
ಮಂಗಳೂರು: ಮಹಿಳೆಯರ ಸ್ವಾವಲಂಬನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದ್ದು, ಕೈಮಗ್ಗ ಮಳಿಗೆ ಮೂಲಕ ಕಡಿಮೆ ಬೆಲೆಗೆ ಗುಣಮಟ್ಟದ ವಸ್ತ್ರ ಉತ್ಪನ್ನವನ್ನು ಗ್ರಾಹಕರಿಗೆ ನೀಡಲು ಸಾಧ್ಯ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಭಾನುವಾರ ನಗರದ ಹಿಂದಿ ಪ್ರಚಾರ ಸಭಾದಲ್ಲಿ 15 ದಿನಗಳ 'ವಿಶೇಷ ಕೈಮಗ್ಗ ಮೇಳ' ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಕೈಮಗ್ಗ ವಸ್ತ್ರಗಳಿಗೆ ವಿಶೇಷ ಬೇಡಿಕೆ ಇದೆ. ಸಾಮಾನ್ಯ ಜನರಿಗೆ ಕೈಮಗ್ಗ ಬಟ್ಟೆಗಳು ಉಪಯುಕ್ತವಾಗಿದ್ದು, ಕೈಗೆಟಕುವ ದರದಲ್ಲಿ ಲಭ್ಯವಿರುತ್ತದೆ. ಮಹಿಳೆಯರ ಆರ್ಥಿಕ ಚೈತನ್ಯಕ್ಕೆ ಕೈಮಗ್ಗ ಮೇಳ ಸಹಕಾರಿ ಎಂದು ಹೇಳಿದರು. ತಾಳಿಪಾಡಿ ನೇಕಾರರ ಸಹಕಾರಿ ಸಂಘ ಅಧ್ಯಕ್ಷ ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿನಾಯಕ ಗಾರ್ಮೆಂಟ್ಸ್ ಉದ್ಯಮಿ ಕುಸುಮಾ ದೇವಾಡಿಗ, ಗುರುಪುರ ದಾಮೋದರ ಗಾರ್ಮೆಂಟ್ಸ್ ಮಾಲಕ ದಾಮೋದರ, ಕೈಮಗ್ಗ ಜವುಳಿ ಇಲಾಖೆ ಸಹಾಯಕ ನಿರ್ದೇಶಕ ಕಾಶಿನಾಥ ಬಾವಿಕಟ್ಟೆ ಹಾಜರಿದ್ದರು. ಈ ಮೇಳ ಡಿ.15ರ ವರೆಗೆ ನಡೆಯಲಿದ್ದು, ಬೆಳಗ್ಗೆ 10ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ. ಸುಮಾರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ 40ಕ್ಕೂ ಅಧಿಕ ಕೈಮಗ್ಗ ಮಳಿಗೆಗಳು ಗಮನ ಸೆಳೆಯುತ್ತಿವೆ.
ಇಂದಿನಿಂದ ವ್ಯಂಗ್ಯಚಿತ್ರ ಪ್ರದರ್ಶನ
ಮಂಗಳೂರು: ಕರಾವಳಿ ಯುವ ಸಿಂಚನ, ವನ್ಯ ಚಾರಣ ಬಳಗ ಮತ್ತು ಆರ್ಕಿಡ್ ಆರ್ಟ್ ಗ್ಯಾಲರಿ ವತಿಯಿಂದ 2 ರಿಂದ 4ರವರೆಗೆ ಬಲ್ಮಠ ಆರ್ಕಿಡ್ ಗ್ಯಾಲರಿಯಲ್ಲಿ 'ನೇತ್ರಾವತಿ ಉಳಿಸಿ ವ್ಯಂಗ್ಯಚಿತ್ರ' ಪ್ರದರ್ಶನ ನಡೆಯಲಿದೆ. ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧವಾಗಿ ಚಿತ್ರಪ್ರದರ್ಶನ ನಡೆಯಲಿದ್ದು, ಜಿಲ್ಲೆಯ 7 ಕಲಾವಿದರು ನದಿ ತಿರುವಿನ ಬಗ್ಗೆ ಎಚ್ಚರ ಹಾಗೂ ಜಾಗೃತಿ ಮೂಡಿಸುವ ಪೂರಕ ವ್ಯಂಗಚಿತ್ರ ರಚಿಸಿದ್ದಾರೆ. 2 ರಂದು ಸಂಜೆ 5ಕ್ಕೆ ಉಡುಪಿ ಸುಹಾಸಂ ಅಧ್ಯಕ್ಷ ಎಚ್. ಶಾಂತರಾಜ ಐತಾಳ್ ಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ಉಪ್ಪಿನಂಗಡಿ ನೇತ್ರಾವತಿ ನದಿ ತಿರುವು ಹೋರಾಟ ಸಮಿತಿ ಸಂಚಾಲಕ ಡಾ. ನಿರಂಜನ್ ರೈ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಧಿ ವಿಸ್ತರಣೆ
ಮಂಗಳೂರು: 2014 ಜ. 1ರ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಕಾರ್ಯವನ್ನು ಕರ್ನಾಟಕದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಡಿ. 6ರವರೆಗೆ ಅವಧಿ ವಿಸ್ತರಿಸಿದೆ ಉಪ ಮುಖ್ಯಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

