ಷಷ್ಠಿ ಮಡೆಸ್ನಾನ ತಡೆಯಿರಿ: ದಲಿತರ ಆಗ್ರಹ
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.6ರಿಂದ 8ರವರೆಗೆ ನಡೆಯುವ ಚಂಪಾಷಷ್ಠಿ ಉತ್ಸವಕ್ಕೆ ಮಡೆಸ್ನಾನ ಉರುಳು ಸೇವೆ ತಡೆಯಬೇಕು ಎಂದು ದಲಿತ ಮುಖಂಡ ಶೇಖರ್ ಆಗ್ರಹಿಸಿದ್ದಾರೆ.
ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಎಸ್ಪಿ ಶಂತನು ಸಿನ್ಹಾ ಅಧ್ಯಕ್ಷತೆಯಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪುತ್ತೂರು ಡಿವೈಎಸ್ಪಿ ಎಚ್.ಡಿ. ಮೆಂಡೋನ್ಸ, ಕ್ಷೇತ್ರದಲ್ಲಿ ನಡೆಯುವ ಮಡೆಸ್ನಾನ ವಿಚಾರ ಸರ್ಕಾರದ ಮುಂದಿದ್ದು, ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಿದೆ ಎಂದರು. ಬೆಳ್ತಂಗಡಿ ಎಸ್ಐ ವಾಹನ ತಪಾಸಣೆ ಸಂದರ್ಭದಲ್ಲಿ ಹೆಚ್ಚಿನ ದಂಡ ವಸೂಲಿ ಮಾಡುತ್ತಿದ್ದಾರೆ. ಆದರೆ ರಶೀದಿಯಲ್ಲಿ ಮಾತ್ರ ಕಡಿಮೆ ದಂಡ ನಮೂದಿಸಿ ಸಾರ್ವಜನಿಕರಿಗೆ ವಂಚಿಸಲಾಗುತ್ತಿದೆ. ಈ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಈ ಕುರಿತು ನೀಡಿದ ದೂರಿನಲ್ಲಿಯೇ 3 ತಪ್ಪುಗಳಿದ್ದು, ಪರಿಶೀಲನೆ ನಡೆಸಿ ವಿಚಾರಣೆ ನಡೆಸಲಾಗುವುದು ಎಂದು ಎಸ್ಪಿ ಹೇಳಿದರೆ, ಪುತ್ತೂರು ಡಿವೈಎಸ್ಪಿ, ದೂರಿನ ಕುರಿತು ನಡೆಸಿದ ವಿಚಾರಣೆಯನ್ನು ಈಗಾಗಲೇ ಚಿತ್ರೀಕರಿಸಲಾಗಿದೆ. ಎಸ್ಐ ತರಬೇತಿಗೆ ತೆರಳಿರುವ ಕಾರಣ ಹಿಂದಿರುಗಿದ ತಕ್ಷಣ ತನಿಖೆ ಮುಂದುವರಿಸಲಾಗುವುದು ಎಂದರು.
ಸಂಘಟನೆಗಳ ಕಾಟ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಒಕ್ಕಲೆಬ್ಬಿಸುವ ವಿಚಾರದಲ್ಲಿ ದಲ್ಲಾಳಿಯೊಬ್ಬರು ಸಂಘಟನೆ ಮೂಲಕ ನಕ್ಸಲ್ ಪ್ಯಾಕೇಜ್ ದುರುಪಯೋಗ ಮಾಡುವ ಜತೆಗೆ ದಲಿತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದಲಿತ ಮುಖಂಡ ಶೇಖರ್ ದೂರಿದರು. ಇತ್ತೀಚೆಗೆ ಸಂಘಟನೆಯೊಂದು 62 ಕುಟುಂಬವನ್ನು ರು. 20 ಲಕ್ಷ ನೀಡಿ ಒಕ್ಕೆಲೆಬ್ಬಿಸಿದ ಕುರಿತು ಮಾಹಿತಿ ತಿಳಿಸಿದೆ. ಆ ಸಂಘಟನೆ ಅಧಿಕೃತವೇ ಇಲ್ಲವೇ ಎಂಬ ಕುರಿತು ಮಾಹಿತಿ ಯಾರಿಗೂ ತಿಳಿದಿಲ್ಲ. ಈ ಸಂಘಟನೆಯಿಂದ ಮಲೆಕುಡಿಯರು ತೊಂದರೆಗೊಳಗಾಗಿದ್ದು, ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು. ಸಂಘಟನೆಯಿಂದ ತೊಂದರೆ ಆಗಿರುವ ಕುರಿತು ಮಲೆಕುಡಿಯರು ಇಲ್ಲಿಯವರೆಗೆ ಯಾವುದೇ ಲಿಖಿತ ದೂರು ನೀಡಿಲ್ಲ. ದೂರು ಸಲ್ಲಿಸಿದರೆ ಪರಿಶೀಲನೆ ನಡೆಸಲಾಗುವುದು ಎಂದು ಎಸ್ಪಿ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

