ಅನಿಷ್ಟ ಪದ್ಧತಿ ನಿರ್ಮೂಲನೆಗೆ ಆಂದೋಲನ ಅಗತ್ಯ
ಬೆಳ್ತಂಗಡಿ: ಧರ್ಮ ವಿರೋಧಿಯಾಗಿರುವ ಅನಿಷ್ಟ ಪದ್ಧತಿಗಳನ್ನು ದೂರ ಮಾಡಲು ಸಾಮಾಜಿಕ ಆಂದೋಲನ ಅವಶ್ಯಕತೆ ಇದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವದ ಅಂಗವಾಗಿ ಭಾನುವಾರ ನಡೆದ ನಡೆದ ಸರ್ವಧರ್ಮ ಸಮ್ಮೇಳನದ 81ನೇ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ನಂಬಿಕೆ, ಮೂಢನಂಬಿಕೆಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕಿದೆ. ಕಾನೂನುಗಳೇ ಇದ್ದರೂ ಅಸ್ಪೃಶ್ಯತೆಯಂತಹ ಆಚರಣೆಗಳನ್ನು ಪೂರ್ಣವಾಗಿ ತೊಡೆದು ಹಾಕಲು ಇನ್ನೂ ನಮಗೆ ಸಾಧ್ಯವಾಗಿಲ್ಲ. ಇಂತಹ ಪಿಡುಗುಗಳು ಇರುವವರೆಗೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಾರದು ಎಂದರು.
21ನೇ ಶತಮಾನ ಭಾರತೀಯರದ್ದು: ಯಾವ ಮತಧರ್ಮವೂ ದ್ವೇಷದ ಸಿದ್ಧಾಂತ ಪ್ರತಿಪಾದಿಸಿಲ್ಲ. ವ್ಯಕ್ತಿಗಳ ನಡುವಿನ ದ್ವೇಷಗಳನ್ನೇ ಧರ್ಮದ ನಡುವಿನ ದ್ವೇಷಗಳೆಂದು ಬಿಂಬಿಸಲಾಗುತ್ತಿದೆ. 21ನೇ ಶತಮಾನ ಭಾರತೀಯರದ್ದಾಗಿದ್ದು, ಎಲ್ಲಾ ಮತಧರ್ಮದ ಯುವಕರು ಮೂಢನಂಬಿಕೆಗಳಿಂದ ಹೊರ ಬರಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗದಗದ ಬಾಳೆಹೊಸೂರು ದಿಂಗಾಲೇಶ್ವರ ಮಠದ ಶ್ರೀ ಮ.ನಿ.ಪ್ರ. ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಬದಲಾವಣೆಯ ಕಾರ್ಯ ಧಾರ್ಮಿಕ ಮುಖಂಡರಿಂದ ಆರಂಭವಾಗ ಬೇಕು ಎಂದರು.
ನಂಬಿಕೆ ಇಲ್ಲದಿದ್ದರೆ ಜೀವನಕ್ಕೆ ಅರ್ಥವಿಲ್ಲ: ಸ್ವಾಗತಿಸಿ ಮಾತನಾಡಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ನಂಬಿಕೆಗಳು ಇರುವುದು ತಪ್ಪಲ್ಲ. ನಂಬಿಕೆ ಇಲ್ಲದಿದ್ದರೆ ಜೀವನಕ್ಕೊಂದು ಅರ್ಥ ಬರುವುದಿಲ್ಲ. ಆದರೆ, ಅಂತಹ ನಂಬಿಕೆ ಪರರಿಗೂ, ಸಮಾಜಕ್ಕೂ ಹಿಂಸೆ ನೀಡಿದರೆ ಅರ್ಥ ಹೀನವಾಗಿ ಪರಿಣಮಿಸಿದರೆ ಆಗ ಅದು ಮೂಢನಂಬಿಕೆಯಾಗುತ್ತದೆ ಎಂದರು.
ಶಾಂತಿ, ಸುಖ, ಸಂತೋಷವನ್ನು ನೀಡಿ ಬದುಕಿಗೆ ಆತ್ಮ ವಿಶ್ವಾಸದ ಹುರುಪು ನೀಡುತ್ತದೆ ಎಂದಾದರೆ ಮೂಢ ನಂಬಿಕೆ ಎನಿಸುವುದಿಲ್ಲ. ಪ್ರಾಚೀನವಾದುದೆಲ್ಲ ತ್ಯಾಜ್ಯವಲ್ಲ. ನಮ್ಮ ಧರ್ಮಗ್ರಂಥಗಳಲ್ಲಿರುವ ಮೌಲಿಕ ಸತ್ಯ, ತತ್ವ, ಸಿದ್ಧಾಂತಗಳನ್ನು ಗುರುತಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು. ಸಮ್ಮೇಳನದಲ್ಲಿ ಜೈನಮತದ ಬಗ್ಗೆ ಮೈಸೂರಿನ ನಿವೃತ್ತ ಪ್ರಾಧ್ಯಾಪಕಿ ಡಾ. ಸರಸ್ವತಿ ವಿಜಯಕುಮಾರ್, ಇಸ್ಲಾಂ ಮತದ ಬಗ್ಗೆ ಬೆಂಗಳೂರು ಫೋರಂ ಫಾರ್ ಹ್ಯೂಮಾನಿಟಿ ಅಧ್ಯಕ್ಷ ಎಂ. ಯಾಸಿನ್ ಮಲ್ಪೆ, ಕ್ರೈಸ್ತ ಮತದ ಬಗ್ಗೆ ಗುಲ್ಬರ್ಗಾದ ಸೈಂಟ್ ಮೇರಿಸ್ ಕಾಲೇಜಿನಿ ಪ್ರಾಚಾರ್ಯ ಫಾ. ಅನಿಲ್ ಪ್ರಸಾದ್ ವಿಚಾರ ಮಂಡಿಸಿದರು.
ಸಚಿವರು ಹಾಗೂ ಉಪನ್ಯಾಸಕರನ್ನು ಡಾ. ಹೆಗ್ಗಡೆ ಸನ್ಮಾನಿಸಿದರು. ಡಿ. ಸುರೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್ ಇದ್ದರು. ರುಡ್ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಮೂರ್ತಿ ವಂದಿಸಿದರು. ಎಸ್ಡಿಎಂ ಕಾಲೇಜಿನ ಉಪನ್ಯಾಸಕ ಡಾ.ಬಿ.ಪಿ. ಸಂಪತ್ ಕುಮಾರ್, ಡಾ.ಬಿ.ಎ. ಕುಮಾರ್ ಹೆಗ್ಡೆ ನಿರ್ವಹಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 23 ಜಿಲ್ಲೆಗಳ 25 ಸಾವಿರ ಗ್ರಾಮಗಳಲ್ಲಿ ಸುಮಾರು ರು. 30 ಲಕ್ಷ ಸದಸ್ಯರನ್ನು ಹೊಂದಿದೆ. ಯೋಜನೆಯ ಆಶ್ರಯದಲ್ಲಿ 78 ಸಾವಿರ ಜನರು ಮದ್ಯಮುಕ್ತರಾಗಿ ಬದುಕು ನಡೆಸುತ್ತಿದ್ದಾರೆ. ಯೋಜನೆಯ ನೆರಳಿನಲ್ಲಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಒದಗಿಸಲಾಗುತ್ತಿದೆ. 13 ಸಾವಿರ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ.
- ಡಾ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ.
ನಾನು ಶ್ರೀ ಕ್ಷೇತ್ರದ ಭಕ್ತ. ನಂಬಿಕೆಯಿಂದ ಚುನಾವಣೆಗಿಂತ ಮೊದಲು ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಬೇಡಿದ್ದೇನೆ. ಈಗ ಸಚಿವನಾಗಿ ಕ್ಷೇತ್ರಕ್ಕೆ ಬಂದು ಸ್ವಾಮಿಯ ಸೇವೆ ಮಾಡಿದ್ದೇನೆ. ಇದು ನನ್ನ ನಂಬಿಕೆ.
- ಟಿ.ಬಿ. ಜಯಚಂದ್ರ, ಕಾನೂನುಸಚಿವ.
ಈ ದೇಶದಲ್ಲಿ ಬದುಕಿರುವವರಿಗೆ ಬೆಲೆ ಇಲ್ಲ. ಸತ್ತವರಿಗೆ ಮಾತ್ರ ಬೆಲೆ ನೀಡುತ್ತಾರೆ. ಒಳ್ಳೆಯ ಕಾರ್ಯ ಮಾಡುವವರಿಗೆ ಸೂಕ್ತ ಬೆಂಬಲ ಸಹಕಾರ ಸಿಗುವುದಿಲ್ಲ. ಅಂತೆಯೇ ಸೇವಾ ಕಾರ್ಯಗಳ ಮೂಲಕ ದೇಶಾದ್ಯಂತ ಪ್ರಸಿದ್ಧಿ ಹೊಂದಿರುವ ಡಾ. ಹೆಗ್ಗಡೆಯರಿಗೆ ಕಳಂಕ ತರುವ ಪ್ರಯತ್ನಗಳು ಫಲಕಾರಿಯಾಗದು.
- ದಿಂಗಾಲೇಶ್ವರ ಶ್ರೀ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

