ದಕ್ಷಿಣ ಕನ್ನಡ

ಮಚ್ಚಿಮಲೆ; ಅಕ್ರಮ ಗುಡಿಸಲುಗಳ ತೆರವು

Published On :

ಪುತ್ತೂರು: ಆರ್ಯಾಪು ಗ್ರಾಮದ ಮಚ್ಚಿಮಲೆ ಎಕ್ರಿಜಾಲು ಎಂಬಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾದ 5 ಗುಡಿಸಲುಗಳನ್ನು ಪುತ್ತೂರು ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಸರ್ಕಾರಿ ಜಾಗದಲ್ಲಿ ಕಳೆದ ಮೂರು ದಿನಗಳಲ್ಲಿ 5 ಗುಡಿಸಲುಗಳನ್ನು ನಿರ್ಮಾಣ ಮಾಡಲಾಗಿತ್ತು. ಸ್ಥಳೀಯರಾದ ಸಾಜಿದಾ, ಜಯರಾಂ, ಜೈನಾಬಿ, ಸತೀಶ್ ಮತ್ತು ಪ್ರಕಾಶ್ ಎಂಬವರು ಕಂಬ ಮತ್ತು ಕಲ್ಲುಗಳಿಂದ ಗುಡಿಸಲುಗಳನ್ನು ನಿರ್ಮಿಸಿದ್ದರು.
ಈ ಕುರಿತು ಪುತ್ತೂರು ಸಹಾಯಕ ಕಮಿಷನರ್‌ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಟಿ. ಕುಳ್ಳೇಗೌಡ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು ಗುಡಿಸಲುಗಳನ್ನು ತೆರವುಗೊಳಿಸಿದ್ದಾರೆ.
ಅಕ್ರಮವಾಗಿ ನಿರ್ಮಿಸಿದ ಗುಡಿಸಲುಗಳನ್ನು ತೆರವುಗೊಳಿಸುವಂತೆ ತಹಸೀಲ್ದಾರ್ ಕೇಳಿಕೊಂಡ ಬಳಿಕ ಒಬ್ಬರು ಸ್ವಯಂ ತೆರವುಗೊಳಿಸಿದ್ದರು ಉಳಿದಂತೆ ನಾಲ್ಕು ಗುಡಿಸಲುಗಳನ್ನು ಅಧಿಕಾರಿಗಳೇ ತೆರವುಗೊಳಿಸಿ ಗುಡಿಸಲು ನಿರ್ಮಿಸಲು ಬಳಸಲಾದ ಮರಗಳನ್ನು ಜಫ್ತಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಎಂ.ಟಿ.ಕುಳ್ಳೇಗೌಡ, ಆರ್ಯಾಪು ಗ್ರಾಮದ ಸರ್ವೇನಂ. 189ರಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮ ಗುಡಿಸಲುಗಳನ್ನು ನಿರ್ಮಾಣ ಮಾಡಿರುವ ಕುರಿತು ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದರು. ಸಹಾಯಕ ಕಮಿಷನರ್ ನಿರ್ದೇಶನದಂತೆ ತಾವು ಗುಡಿಸಲುಗಳನ್ನು ತೆರವುಗೊಳಿಸಿದ್ದೇವೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿದ್ದು ಕಾನೂನಿನ ಉಲ್ಲಂಘನೆಯಾಗಿದೆ. ಗ್ರಾ.ಪಂ.ನವರಿಗೆ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ಎಂದು ಹೇಳಲು ಯಾವುದೇ ಅಧಿಕಾರವೂ ಇಲ್ಲ ಎಂದು ತಿಳಿಸಿದರು.
ಪಂಚಾಯಿತಿಯವರು ಹೇಳಿದ್ದರು: ಈ ಜಾಗದಲ್ಲಿ ಮನೆ ನಿರ್ಮಿಸಿ ಎಂದು ನಮಗೆ ಆರ್ಯಾಪು ಗ್ರಾ.ಪಂ. ಸದಸ್ಯರು ತಿಳಿಸಿದ್ದರು.
ಆ ಪ್ರಕಾರ ಗುಡಿಸಲುಗಳನ್ನು ನಿರ್ಮಿಸಿದ್ದೇವೆ. ಈ ಜಾಗದಲ್ಲಿ ಮನೆ ನಿರ್ಮಿಸುತ್ತೇವೆ ಎಂದು ಅಕ್ರಮ ಸಕ್ರಮದಡಿ ನಾವು ಅರ್ಜಿ ಹಾಕಿದ್ದೆವು ಎಂದು ಸ್ಥಳೀಯರಾದ ಸಾಜಿದಾ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕಂದಾಯ ಅಧಿಕಾರಿ ಕಿಂಞಣ್ಣ ರೈ ಇದ್ದರು. ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.