ಮೊಬೈಲ್ ಕದ್ದವ ಸಿಸಿ ಕ್ಯಾಮೆರಾದಲ್ಲಿ 'ಸೆರೆ'
ಸುಳ್ಯ: ಗ್ರಾಹಕರ ಸೋಗಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದಕ್ಕೆ ಬಂದ ವ್ಯಕ್ತಿ ಟೇಬಲ್ ಮೇಲೆ ಇರಿಸಿದ್ದ ಮೊಬೈಲ್ ಫೋನ್ ಎಗರಿಸಿದ್ದು, ಸಿ.ಸಿ. ಕ್ಯಾಮರಾದ ಮೂಲಕ ಈ ಕೃತ್ಯ ಬಹಿರಂಗಗೊಂಡು ಆ ವ್ಯಕ್ತಿಯಿಂದ ಮೊಬೈಲ್ ವಾಪಾಸ್ ಪಡೆದ ಘಟನೆ ಇತ್ತೀಚೆಗೆ ನಡೆದಿದೆ. ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ನಲ್ಲಿರುವ ಅಡ್ಕಾರ್ ಎಲೆಕ್ಟ್ರಾನಿಕ್ಸ್ ಸಂಸ್ಥೆಗೆ ಮೊಬೈಲ್ ರಿಚಾರ್ಜ್ ಮಾಡಲೆಂದು ಬಂದಿದ್ದ ಕೊಯನಾಡಿನ ಮೊಯ್ದು ರಿಚಾರ್ಜ್ ಮಾಡಿ ವಾಪಾಸ್ ಹೋಗುವಾಗ, ಸಂಸ್ಥೆಯ ಮಾಲೀಕರ ಪತ್ನಿ ಕೌಂಟರ್ನ ಟೇಬಲ್ ಮೇಲೆ ಇರಿಸಿದ್ದ ಮೊಬೈಲನ್ನು ಆತ ಕಿಸೆಗಿಳಿಸಿಕೊಂಡು ಕೊಂಡು ಹೋಗಿದ್ದರು. ಮೊಬೈಲ್ ಕಾಣದಿದ್ದಾಗ ಸಿ.ಸಿ. ಕ್ಯಾಮರಾ ಪರಿಶೀಲಿಸಲಾಯಿತು. ಆಗ ಅದರಲ್ಲಿ ವ್ಯಕ್ತಿಯೊಬ್ಬ ಟೇಬಲ್ನಲ್ಲಿ ಇರಿಸಿದ್ದ ಮೊಬೈಲನ್ನು ಕಿಸೆಗೆ ಇಳಿಸಿಕೊಳ್ಳುತ್ತಿದ್ದುದು ಕಂಡುಬಂತು. ವ್ಯಕ್ತಿಯ ಗುರುತು ಹಿಡಿದ ಮಾಲೀಕರು ಮೊಯ್ದುಗೆ ಫೋನ್ ಮಾಡಿ ವಿಚಾರಿಸಿದಾಗ, ತಾನು ತೆಗೆದಿಲ್ಲವೆಂದು ಆತ ಹೇಳಿದ್ದು, ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರು ಮೊಯ್ದುವನ್ನು ಕರೆಸಿ, ವಿಚಾರಣೆ ನಡೆಸಿದಾಗ ತನಗೆ ಗೊತ್ತಾಗದೆ ಕೊಂಡೊಯ್ದಿರುವುದಾಗಿ ಹೇಳಿ ಮೊಬೈಲ್ ವಾಪಸ್ ನೀಡಿದ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ
ಬೈಕ್ ಡಿಕ್ಕಿ: ವ್ಯಕ್ತಿಗೆ ಗಾಯ
ಉಡುಪಿ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಇಲ್ಲಿನ ಪುತ್ತೂರಿನ ಅಂಬಾಗಿಲು ಪೆರಂಪಳ್ಳಿಯಲ್ಲಿ ಭಾನುವಾರ ನಡೆದಿದೆ. ಗಾಯಗೊಂಡವರನ್ನು ಕೇಶವ ಎಂದು ಗುರುತಿಸಲಾಗಿದೆ. ಇವರು ಮಗ ಸುಬ್ರಹ್ಮಣ್ಯ ಅವರೊಂದಿಗೆ ಪುತ್ತೂರಿನ ಅಂಬಾಗಿಲು ಪೆರಂಪಳ್ಳಿ ರಸ್ತೆ ಬದಿಯಲ್ಲಿ ರಸ್ತೆ ದಾಟಲು ನಿಂತಿರುವಾಗ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಶೇಖರ ದೇವಾಡಿಗ ಅವರು ಚಲಾಯಿಸಿಕೊಂಡು ಬಂದ ಬೈಕ್ ಕೇಶವಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೆರೆಗೆ ಬಿದ್ದು ವ್ಯಕ್ತಿ ಸಾವು
ಬ್ರಹ್ಮಾವರ: ಇಲ್ಲಿನ ಕೋಟೆಬೆಟ್ಟು ಕೆರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಭಾನುವಾರ ವರದಿಯಾಗಿದೆ. ಮೃತರು ದೇವೆಂದ್ರ ಪೂಜಾರಿ (35). ಇವರು ಕೋಟೆಬೆಟ್ಟು ಕೆರೆಯ ಬದಿಯಿಂದಾಗಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ಕೆರೆಯ ನೀರಿಗೆ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ಕರುಣಾಕರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪರಸ್ಪರ ಬೈಕ್ ಡಿಕ್ಕಿ: ಓರ್ವನಿಗೆ ಗಾಯ
ಉಡುಪಿ: ಆಶೀರ್ವಾದ ಚಿತ್ರಮಂದಿರದ ಬಳಿಯಿರುವ ರೋಬೋಸಾಫ್ಟ್ ಸಂಸ್ಥೆ ಬಳಿ ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಗಾಯಗೊಂಡವರನ್ನು ಯೋಗೀಶ್ ಎಂದು ಗುರುತಿಸಲಾಗಿದೆ. ಇವರು ಬನ್ನಂಜೆ ನಾರಾಯಣ ಗುರು ಮಂದಿರದಲ್ಲಿ ಸಂಬಂಧಿಕರ ಮದುವೆಗೆ ಸಂತೆಕಟ್ಟೆ ಕಡೆಯಿಂದ ಬರುತ್ತಿರುವಾಗ ಆಶೀರ್ವಾದ ಚಿತ್ರಮಂದಿರದ ಸಮೀಪದ ರೋಬೋಸಾಫ್ಟ್ ಸಂಸ್ಥೆ ಬಳಿ ಮಂಜುನಾಥ ಎಂಬವರು ಬೈಕನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯೋಗೀಶ್ ಅವರ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬೈಕ್ ಚರಂಡಿಗೆ: ಸವಾರ ಸಾವು
ಕಾರ್ಕಳ: ಮಾಳ ಗ್ರಾಮದ ಮುಳ್ಳೂರು ಘಾಟ್ ಬಳಿ ಬೈಕೊಂದು ಚರಂಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಮೃತರು ಸಂತೋಷ್ ಆಚಾರ್ಯ (26). ಇವರು ತಮ್ಮ ಬೈಕ್ನಲ್ಲಿ ಪ್ರಶಾಂತ ಆಚಾರ್ಯ ಎಂಬವರನ್ನು ಕುಳ್ಳಿರಿಸಿಕೊಂಡು ಬೈಕನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಮಾಳ ಗ್ರಾಮದ ಮುಳ್ಳೂರು ಘಾಟ್ ಬಳಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗೆ ಬಿದ್ದಿದೆ. ಪರಿಣಾಮ ಸಂತೋಷ್ ಆಚಾರ್ಯ ಅವರ ತಲೆಗೆ ತೀವ್ರ ತರದ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಪ್ರಶಾಂತ ಆಚಾರ್ಯ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪ್ರಶಾಂತ ಆಚಾರ್ಯ ನೀಡಿದ ದೂರಿನಂತೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಬ್ಬರ್ ಗೋದಾಮಿಗೆ ಬೆಂಕಿ
ಸುಳ್ಯ: ಮುರುಳ್ಯ ಕುಕ್ಕಟೆ ಶಿವಪ್ರಸಾದ್ ರೈ ಮಾಲಕತ್ವದ ರಬ್ಬರ್ ಎಸ್ಟೇಟ್ನಲ್ಲಿ ರಬ್ಬರ್ ಒಣಗಿಸುವ ಬೆಂಕಿ ಅನಾಹುತ ಸಂಭವಿಸಿ ಕಟ್ಟಡ ಬಾಗಶಃ ಹಾನಿಯಾಗಿರುವ ಘಟನೆ ಭಾನುವಾರ ನಡೆದಿದೆ. ಸುಳ್ಯ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದರು. ಸುಮಾರು ಒಂದೂವರೆ ಲಕ್ಷ ರು. ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಕನಕಮಜಲು: ಅಂಗಡಿಗೆ ನುಗ್ಗಿ ಕಳವು
ಸುಳ್ಯ: ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಕಳ್ಳರು ಅಂಗಡಿಯೊಂದಕ್ಕೆ ನುಗ್ಗಿ ಸಾಮಗ್ರಿಗಳನ್ನು ಕದ್ದಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಕನಕಮಜಲಿನ ಜಗನ್ನಾಥ ಕೋಡಿ ಎಂಬವರ ಅಂಗಡಿಗೆ ರಾತ್ರಿ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಫಿನಾಯಿಲ್ ಬಾಟಲ್, ಸೋಪು, ಬೀಡಿ ಇತ್ಯಾದಿ ಅಂಗಡಿ ಸಾಮಗ್ರಿಗಳನ್ನು ಕದ್ದಿದ್ದಾರೆ. ಅಂಗಡಿಯಲ್ಲಿದ್ದ ಖಾದರ್ ಎಂಬವರ ಸೂಟ್ಕೇಸ್ನಲ್ಲಿದ್ದ ಮೊಬೈಲ್ ಇತ್ಯಾದಿ ವಸ್ತುಗಳನ್ನು ಕಳವು ಮಾಡಿ ಸೂಟ್ಕೇನ್ನು ಬೊಳುಬೈಲಿನಲ್ಲಿ ರಸ್ತೆ ಬದಿಯ ಚರಂಡಿಗೆ ಎಸೆದು ಪರಾರಿಯಾಗಿದ್ದಾರೆ. ಮೂರು ಸಾವಿರದಷ್ಟು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ನೇಣು ಬಿಗಿದು ಆತ್ಮಹತ್ಯೆ
ಸುಳ್ಯ: ಆಲೆಟ್ಟಿ ಗ್ರಾಮದ ಕುಡೆಂಬಿ ಕರ್ಲಪ್ಪಾಡಿ ಮುದ್ದಪ್ಪ ಗೌಡರ ಪುತ್ರ ಕರುಣಾಕರ (42)ಭಾನುವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರುಣಾಕರ ಅಜ್ಜಾವರ ದೇವಸ್ಥಾನದ ಬಳಿ ಕರುಣಾಕರ ಅಡ್ಪಂಗಾಯಗೆ ಸೇರಿದ ಅಂಗಡಿಯಲ್ಲಿ ಹಳೆ ಮರದ ಸಾಮಗ್ರಿ ವ್ಯಾಪಾರ ಮಾಡಿಕೊಂಡಿದ್ದರು. ಅದೇ ಅಂಗಡಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಸಮೀಪದ ಅಂಗಡಿಯವರಿಗೆ ಈ ವಿಷಯ ತಿಳಿದು ಬಂತು. ಬಳಿಕ ಅವರು ವಿಷಯ ಇತರರಿಗೆ ತಿಳಿಸಿದರು. ಸುಳ್ಯ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು ಅವರು ಅಂಗಡಿಗೆ ಫೈನಾನ್ಸ್ ಮತ್ತು ಕೆಲವರಿಂದ ಕೈ ಸಾಲ ಪಡೆದುಕೊಂಡಿದ್ದು ಅದನ್ನು ಮರುಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಹೋದರ ಕೇಶವ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

