ಬಾಕಿ ಉಳಿಸಿದ ಸರ್ಕಾರ, ಬೆಳೆ ಸಾಲಕ್ಕೆ ಸಂಚಕಾರ
ಮಂಗಳೂರು: ಎರಡು ವರ್ಷ ಹಿಂದೆ ಸರ್ಕಾರ ರೈತರ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಿ ಕೈತೊಳೆದುಕೊಂಡದ್ದೇ ಬಂತು. ಸಾಲದ ಬಾಕಿ ಮೊತ್ತವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗಳಿಗೆ ಪಾವತಿಸದೆ ಬ್ಯಾಂಕ್ಗಳೂ ಸಾಕಷ್ಟು ಪ್ರಮಾಣದಲ್ಲಿ ಮರು ಬೆಳೆ ಸಾಲ ನೀಡಲಾಗದ ಪರಿಸ್ಥಿತಿಗೆ ತಲುಪಿವೆ.
ರಾಜ್ಯ ಸರ್ಕಾರದ ಸಾಲ ಮರುಪಾವತಿಸದ ಧೋರಣೆಯಿಂದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ದಿನಕ್ಕೆ ರು. 4 ಲಕ್ಷದಂತೆ 8 ತಿಂಗಳಲ್ಲಿ ರು. 3.20 ಕೋಟಿ ನಷ್ಟ ಅನುಭವಿಸುತ್ತಿದೆ. ಇದೇ ರೀತಿ ಗ್ರಾಮಾಂತರ ಪ್ರದೇಶಗಳಲ್ಲಿರುವ ಸೇವಾ ಸಹಕಾರಿ ಸಂಘಗಳೂ ಕೂಡ ನಷ್ಟದ ಹಾದಿಯಲ್ಲಿವೆ. ಇವನ್ನು ಮೇಲೆತ್ತುವ ಪ್ರಯತ್ನ ನಡೆಯದಿದ್ದರೆ ಮುಂದಿನ ಮಾರ್ಚ್ಗೆ ಈ ಸಂಘಗಳ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೇವಾ ಸಹಕಾರಿ ಸಂಘಗಳಿಗೆ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಸಾಲ ಬಿಡುಗಡೆ ಮಾಡುತ್ತದೆ. ಈ ಮೊತ್ತವನ್ನು ರೈತರಿಗೆ ನೀಡುವುದು ಸಹಕಾರಿ ಸಂಘಗಳು.
ಜಿಲ್ಲೆಯಲ್ಲಿ ದೀರ್ಘಾವಧಿ ಬೆಳೆ, ಹಾಗಾಗಿ ಇಲ್ಲಿ ರೈತರು ಸಾಲ ಮರುಪಾವತಿ ವಾಯಿದೆ ಪ್ರತಿ ವರ್ಷ ಏಪ್ರೀಲ್ಗೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅಲ್ಪಾವಧಿ ಬೆಳೆ ಬೆಳೆಯುವುದರಿಂದ ರೈತರ ಸಾಲ ಮನ್ನಾ ಬಾಕಿ ಮೊತ್ತವನ್ನು ಸರ್ಕಾರ ಮೂರು ತಿಂಗಳಲ್ಲಿ ಸಹಕಾರಿ ಸಂಘಗಳಿಗೆ ಮರು ಪಾವತಿಸುತ್ತದೆ.
8 ತಿಂಗಳಿಂದ ಪಾವತಿ ಬಾಕಿ: ಜಿಲ್ಲೆಯ ಸಹಕಾರಿ ಸಂಘಗಳು ತಮ್ಮದೇ ನಿಧಿಯಿಂದ ರೈತರ ಸಾಲವನ್ನು ಮರುಪಾವತಿಸಿ, ಶೇ.ನೂರು ವಸೂಲಾತಿ ಸಾಧನೆ ತೋರಿಸಿವೆ. ಇದು ಎದುರಿಗೆ ಮಾತ್ರ, ವಾಸ್ತವದಲ್ಲಿ ರೈತರಿಂದ ಪೂರ್ತಿ ಸಾಲ ಮರು ಪಾವತಿಯಾಗಿಲ್ಲ. ಏಪ್ರೀಲ್ನಿಂದ ಡಿಸೆಂಬರ್ ವರೆಗೆ ಬಡ್ಡಿ ಮತ್ತು ಅಸಲು ಸೇರಿ ಒಟ್ಟು ರು. 215 ಕೋಟಿ ಮೊತ್ತವನ್ನು ಸರ್ಕಾರ ಡಿಸಿಸಿ ಬ್ಯಾಂಕ್ಗೆ ಪಾವತಿಸಬೇಕು. ಈ ಬಗ್ಗೆ ಸತತ ಪತ್ರ ಬರೆದರೂ ಪ್ರಯೋಜನವಾಗಿಲ್ಲ.
ಬೆಳೆ ಸಾಲದಲ್ಲಿ ಕುಂಠಿತ: ಡಿಸಿಸಿ ಬ್ಯಾಂಕ್ಗೆ ಸರ್ಕಾರ ಅಸಲು ಮತ್ತು ಬಡ್ಡಿ ಮನ್ನಾ ಬಾಕಿ ಮೊತ್ತ ಪಾವತಿಸದಿರುವುದರಿಂದ ರೈತರಿಗೆ ಬೆಳೆ ಸಾಲ ನೀಡಿಕೆ ಕುಂಠಿತಗೊಂಡಿದೆ. ಪ್ರತಿ ವರ್ಷ ಸರಾಸರಿ 79 ಸಾವಿರಕ್ಕೂ ಮಿಕ್ಕಿ ರೈತರಿಗೆ ರು. 800 ಕೋಟಿಗೂ ಅಧಿಕ ಅಲ್ಪಾವಧಿ ಬೆಳೆ ಸಾಲ ನೀಡುತ್ತಿದ್ದು, ಈ ವರ್ಷ ಇದುವೆರೆಗೆ ನೀಡಿದ ಸಾಲ ರು. 540 ಕೋಟಿ.
ರೈತರಿಗೆ ಬೇಕಾದಷ್ಟು ಸಾಲ ನೀಡಲಾಗದ ಖೇದ ಸಹಕಾರಿ ಸಂಘಗಳದ್ದು. ಸಹಕಾರಿ ಸಂಘಗಳು ಸ್ವಲ್ಪ ಪ್ರಮಾಣದಲ್ಲಿ ಸಾಲ ನೀಡಿದರೂ ರೈತರಿಗೆ ಫಸಲು ಹಾನಿಯಿಂದ ಸರಿಯಾಗಿ ಅಸಲು, ಬಡ್ಡಿ ಪಾವತಿಸಲು ಆಗುತ್ತಿಲ್ಲ. ಸರ್ಕಾರದ ಬಾಕಿ ಮೊತ್ತ ಸಿಗದೆ ಡಿಸಿಸಿ ಬ್ಯಾಂಕ್ಗೆ ಬಡ್ಡಿಯೂ ಸಿಗುತ್ತಿಲ್ಲ.
215 ಕೋಟಿ ಬರಬೇಕು: 2 ವರ್ಷಗಳ ಬಾಕಿ ಬಡ್ಡಿ ಮತ್ತು ಅಸಲು ಮನ್ನಾ ಮೊತ್ತ ಸೇರಿ ಒಟ್ಟು ರು. 215 ಕೋಟಿ ಸರ್ಕಾರ ಡಿಸಿಸಿ ಬ್ಯಾಂಕ್ಗೆ ಪಾವತಿಸಬೇಕು. ಈ ಸಾಲಿನಲ್ಲಿ ದ.ಕ.ದಲ್ಲಿ 55,436 ರೈತರಿಗೆ ರು. 130.57 ಕೋಟಿ ಅಸಲು(ಶೇ.1 ಬಡ್ಡಿ) ಮತ್ತು ಶೇ.9 ಬಡ್ಡಿ ಪ್ರಕಾರ ರು. 38.83 ಕೋಟಿ, ಉಡುಪಿಯಲ್ಲಿ 16,003 ರೈತರಿಂದ ರು. 36.16 ಕೋಟಿ ಅಸಲು ಮತ್ತು ರು. 6.19 ಲಕ್ಷ ಬಡ್ಡಿ ಪಾವತಿ ಬಾಕಿ ಇದೆ. 2011-12ರಲ್ಲಿ ಬಡ್ಡಿ ಮನ್ನಾದ ರು. 13 ಕೋಟಿ ಇನ್ನೂ ಪಾವತಿಯಾಗಿಲ್ಲ. ಈಗಾಗಲೇ ರೈತರಿಗೆ ಸಾಲದಲ್ಲಿ ರು. 25 ಸಾವಿರ ಮೊತ್ತ ಮನ್ನಾ ಆಗಿರುವುದರಿಂದ ಆ ಮೊತ್ತ ಕಳೆದು ಇಲ್ಲಿ ಸಾಲ ನೀಡಲಾಗುತ್ತದೆ ಎನ್ನುತ್ತಾರೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪನಾ ನಿರ್ದೇಶಕ ಗೋಪಾಲಕೃಷ್ಣ ಭಟ್.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

