ದಕ್ಷಿಣ ಕನ್ನಡ

ದೇವಳ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

Published On :

ಸುಬ್ರಹ್ಮಣ್ಯ: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಜನವಿರೋಧಿ ನಿರ್ಣಯ ಖಂಡಿಸಿ ಸೋಮವಾರ ಸುಬ್ರಹ್ಮಣ್ಯದಲ್ಲಿ ಜನಜಾಗೃತಿ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
 ಸಂಘಟಕರು ಮುಂಚಿತವಾಗಿ ಅಂಗಡಿಗಳನ್ನು ಸ್ವಇಚ್ಛೆಯಿಂದ ಬಂದ್ ಮಾಡುವಂತೆ ವಿನಂತಿಸಿದರು. ಇದಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಈ ಮಧ್ಯೆ 2 ಗಂಟೆ ಕಾಲ ಭಾಗಶಃ ಬಂದ್ ನಡೆಯಿತು. ಬಹುತೇಕ ಅಂಗಡಿಗಳು ತೆರೆದಿದ್ದವು. ಹಾಗಾಗಿ ಯಾತ್ರಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲ.
ತೆರಿಗೆ ಪಾವತಿಸಲು ಆಗ್ರಹ: ಗ್ರಾ.ಪಂ. ಪರವಾನಗಿ ಇಲ್ಲದೆ ದೇವಸ್ಥಾನದವರು ಕಟ್ಟಡಗಳನ್ನು ರಚಿಸಿದ್ದಾರಲ್ಲದೆ, ಗ್ರಾ.ಪಂ.ಗೆ ಸಲ್ಲಬೇಕಾದ ತೆರಿಗೆ ನೀಡುತ್ತಿಲ್ಲ. ನ್ಯಾಯಾಲಯವು ತೆರಿಗೆ ಪಾವತಿಸುವಂತೆ ತೀರ್ಪು ನೀಡಿದರೂ ಆಡಳಿತ ಮಂಡಳಿ ಪುನಃ ಅಪೀಲು ಮಾಡಿರುವುದು ಖೇದಕರ. ಗ್ರಾ.ಪಂ.ಗೆ ರು. 65 ಲಕ್ಷ ತೆರಿಗೆಯನ್ನು ದೇವಳ ನೀಡಬೇಕಾಗಿದೆ. ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಹಣದ ದುರ್ಬಳಕೆ ಆಗಿದೆ. ಅಭಿವೃದ್ಧಿ ಹೆಸರಿನಲ್ಲಿ ಈಗಿರುವ ಕಟ್ಟಡಗಳನ್ನು ಕೆಡವಿ ಸ್ಥಳೀಯರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ. ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೆ ಭೂಸ್ವಾಧೀನ ಪ್ರಕ್ರಿಯೆಗೆ ಆಡಳಿತವು ಮುಂದಾಗಿದೆ. ಬೈಪಾಸ್ ರಸ್ತೆ ನಿರ್ಮಾಣ, ರಥಬೀದಿ ವಾಹನ ಮುಕ್ತ ರಸ್ತೆಯಾಗಬೇಕು ಎಂದು ಪ್ರತಿಭಟನಾ ಸಭೆಯಲ್ಲಿ ಜಿ.ಪಂ. ಸದಸ್ಯ ದೇವರಾಜ್ ಕೆ.ಎಸ್. ಆಗ್ರಹಿಸಿದರು.
 ಚಂದ್ರಾ ಕೋಲ್ಚಾರ್, ತಾ.ಪಂ. ಸದಸ್ಯೆ ವಿಮಲಾ ರಂಗಯ್ಯ, ಸಂತೋಷ್ ಜಾಕೆ, ನಿತ್ಯಾನಂದ ಮುಂಡೋಡಿ, ಸತೀಶ್ ಕೂಜುಗೋಡು, ಕಾರ್ಯಪ್ಪ ಪಿ.ಎಸ್., ನಾರಾಯಣ ಅಗ್ರಹಾರ, ಕೃಷ್ಣಮೂರ್ತಿ ಭಟ್, ಶಿವಕುಮಾರ್ ಕಾಮತ್, ಧರ್ಮಾವತಿ ದೇವರಗದ್ದೆ ಮಾತನಾಡಿದರು.
ಪ್ರತಿಭಟನೆಯಲ್ಲಿ ಸುಮಾರು 100ರಷ್ಟು ಮಂದಿ ಪಾಲ್ಗೊಂಡಿದ್ದರು. ಶಿವರಾಮ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯಪ್ಪ ಪಿ.ಎಸ್. ವಂದಿಸಿದರು.

23ರಂದು ಸಚಿವರೊಂದಿಗೆ ಸಮಾಲೋಚನೆ
ಜನಜಾಗೃತಿ ಹೋರಾಟ ಸಮಿತಿ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ., ದೇವಳ ಆಡಳಿತ ಮಂಡಳಿಯ ಜನವಿರೋಧಿ ನಿರ್ಣಯಗಳ ಕುರಿತು ಜಿಲ್ಲಾ ಉಸ್ತವಾರಿ ಸಚಿವ ರಮಾನಾಥ ರೈ ಅವರಿಗೆ ಮನವಿ ಮಾಡಿದ್ದು, ಡಿ.23ರಂದು ಸಚಿವರು ದೇವಳದ ಆಡಳಿತ ಮಂಡಳಿ, ಅಧಿಕಾರಿ ವರ್ಗ, ಹೋರಾಟ ಸಮಿತಿ, ಗ್ರಾ.ಪಂ. ಹಾಗೂ ಊರವರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ ಎಂದು ದೇವರಾಜ್ ಕೆ.ಎಸ್. ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.