ಬಿ.ಸಿ. ರೋಡ್ ಮೇಲ್ಸೇತುವೆ ಕೆಳಗೆ 'ಮಿನಿ ಬಜಾರ್'
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ. ರೋಡ್‌ನ ಚತುಷ್ಪಥಮೇಲ್ಸೇತುವೆಯ ಅಡಿಭಾಗ ಇದೀಗ 'ಮಿನಿ ಬಜಾರ್'.
ಹೌದು ಮೇಲ್ಸೇತುವೆಯಡಿ ಅಕ್ರಮವಾಗಿ ತಲೆ ಎತ್ತಿರುವ ಅಂಗಡಿಗಳು ಈ ಮಿನಿ ಬಜಾರ್ ಸೃಷ್ಟಿ ಮಾಡಿದ್ದು, ಸ್ಥಳೀಯಾಡಳಿತಕ್ಕೆ ಸವಾಲು ಹಾಕಿದೆ.
ಬಟ್ಟೆ, ತರಕಾರಿ, ಹಣ್ಣಿನಂಗಡಿ, ಚಪ್ಪಲಿ ರಿಪೇರಿ, ಬೀಡಾ ಅಂಗಡಿ, ಫಾಸ್ಟ್ ಫುಡ್ ಸೆಂಟರ್‌ಗಳು, ಆಮ್ಲೇಟ್ ಅಂಗಡಿ, ಪಾನಿಪುರಿ ಗಾಡಿ, ಚಹಾ ಅಂಗಡಿ, ಫ್ಯಾನ್ಸಿ ಐಟಂಗಳು... ಹೀಗೆ ಸಾಲುಗಟ್ಟಿ ನಿಂತಿರುವ ಅಂಗಡಿಗಳು, ವಾಹನ ಪಾರ್ಕಿಂಗ್ ಗಮನಸೆಳೆಯುತ್ತವೆ.
ಸ್ಥಳೀಯಾಡಳಿತದ ನಿಯಮಗಳನ್ನು ಉಲ್ಲಂಘಿಸಿ ಇವು ಕಾರ್ಯನಿರ್ವಹಿಸುವುದು ಒಂದಡೆಯಾದರೆ ಗ್ರಾಹಕರಿಗೆ ಸುರಕ್ಷಿತ ಸೇವೆ ನೀಡುವುದಕ್ಕೂ ಇಲ್ಲಿ ಹಲವು ಅಡ್ಡಿ ಆತಂಕಗಳಿವೆ.
ಶುಚಿತ್ವ ಕೊರತೆ: ಇಲ್ಲಿರುವ ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಶುಚಿತ್ವದ ಕೊರತೆ ಇದ್ದರೆ, ಸ್ವಚ್ಛತೆ ಹಾಗೂ ಆರೋಗ್ಯದ ಪಾಠ ಹೇಳುವ ಆರೋಗ್ಯ ಇಲಾಖೆಯೂ ಇತ್ತ ಗಮನಹರಿಸದೆ ಇರುವುದು ವಿಪರ್ಯಾಸ.
ಪಾರ್ಕಿಂಗ್ ತಾಣ: ಇನ್ನು ಮೇಲ್ಸೇತುವೆಯ ಅಡಿಭಾಗ ಟೂರಿಸ್ಟ್ ಕಾರು ಹಾಗೂ ರಿಕ್ಷಾಗಳ ಪಾರ್ಕಿಂಗ್ ತಾಣಗಳಾದರೆ, ಇನ್ನೂ ನೂರಕ್ಕೂ ಅಧಿಕ ಬೈಕ್‌ಗಳು, ಇತರ ವಾಹನಗಳಿಗೆ ಈ ಫ್ಲೈಓವರ್‌ನ ನೆರಳೇ ಆಧಾರ. ನಗರ ಪೊಲೀಸರು ಶ್ರಮಪಟ್ಟು ಒಂದೆಡೆ ವಾಹನಗಳು ಅಂಗಡಿ ತೆರವು ಮಾಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದರೂ, ಮೇಲ್ಸೇತುವೆಯ ಕೆಳಬಾಗದಲ್ಲಿ ದಿನದಿಂದ ದಿನಕ್ಕೆ ಅಣಬೆಗಳಂತೆ ಅಂಗಡಿಗಳು ಏರುತ್ತಾ ಇದೆ.
ಚತುಷ್ಪಥ ರಸ್ತೆ ನಿರ್ಮಾಣ ಕಾಲದಲ್ಲಿ ಪರ್ಯಾಯವಾಗಿ, ನಂತರ ಪೇಟೆಯೊಳಗಡೆ ಲಘು ವಾಹನಗಳ ಸಂಚಾರಕ್ಕೆಂದು ನಿರ್ಮಾಣಗೊಂಡ ಸರ್ವಿಸ್ ರಸ್ತೆಯೂ ಕಿರಿದಾಗಿದೆ. ಈ ಕಿರಿದಾದ ಸರ್ವಿಸ್ ರಸ್ತೆಯೇ ಈಗ ಮಂಗಳೂರು ಕಡೆಗೆ ಹೋಗುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಸಹಿತ ಇತರ ವಾಹನಗಳಿಗೂ ರಾಜರಸ್ತೆಯಾಗಿದೆ. ಆದರೆ, ಈ ರಸ್ತೆಯಂಚಿನಲ್ಲಿ ಚರಂಡಿ, ಫುಟ್‌ಪಾತ್ ಕೂಡ ಇಲ್ಲ.
ರಸ್ತೆಯಲ್ಲಿ ಬಸ್ ನಿಲುಗಡೆ: ಬರುವ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಲು, ಇಳಿಸಲು ರಸ್ತೆಯಲ್ಲೇ ನಿಲುಗಡೆ ಮಾಡಬೇಕಾದ ಸ್ಥಿತಿ.
ಅನಧಿಕೃವಾಗಿರುವ ಎಲ್ಲಾ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸುವುದು. ಈ ಅಂಗಡಿಗಳಿಗೆ ಪರ್ಯಾಯ ಸ್ಥಳ ಒದಗಿಸುವುದು, ಆ ಮೂಲಕ ಬಿ.ಸಿ. ರೋಡಿನಲ್ಲಿ ಅನಗತ್ಯವಾಗಿ ಹುಟ್ಟಿಕೊಳ್ಳುವ ಜನದಟ್ಟಣೆ ಹಾಗೂ ವಾಹನದಟ್ಟಣೆಯನ್ನು ಕಡಿಮೆ ಮಾಡುವುದು ಸ್ಥಳೀಯಾಡಳಿತ ತಕ್ಷಣಕ್ಕೆ ಮಾಡಬೇಕಿರುವ ಕೆಲಸ ಎನ್ನುತ್ತಾರೆ ಇಲ್ಲಿನ ನಾಗರಿಕರು.
ನಡೆದದ್ದು ಒನ್ ಡೇ ಆಪರೇಷನ್
ಕಳೆದ ವರ್ಷ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಫಾಸ್ಟ್‌ಫುಡ್ ಅಂಗಡಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆದು, ಇವುಗಳ ತೆರವಿಗೆ ಸಭೆ ಸರ್ವಾನುಮತದ ನಿರ್ಣಯ ಆಂಗೀಕರಿಸಿತ್ತು. ಅದರಂತೆ ಬಿ.ಸಿ. ರೋಡಿನ ಚತುಷ್ಪತ ಮೇಲ್ಸೆತುವೆಯಡಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಗೂಡಂಗಡಿಗಳನ್ನು ಬಂಟ್ವಾಳ ಪುರಸಭಾ ಅಧಿಕಾರಿಗಳು ಒನ್ ಡೇ ಆಪರೇಷನ್ ನಡೆಸಿ ತೆರವು ಗೊಳಿಸಿದ್ದರು.
ಪೊಲೀಸ್ ರಕ್ಷಣೆಯೊಂದಿಗೆ ಕಾರ್ಯಾಚರಣೆ ನಡೆಸಿದ ಪುರಸಭಾ ಅಧಿಕಾರಿಗಳು ಪೌರ ಕಾರ್ಮಿಕರ ನೆರವಿನೊಂದಿಗೆ ಮೇಲ್ಸೆತುವೆಯ ಅಡಿಭಾಗದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿ ಲಾರಿಯಲ್ಲಿ ಕೊಂಡೊಯ್ದಿದ್ದರು. ಆದರೆ, ಈ ಘಟನೆಗಳು ನಡೆದು ವಾರವೊಂದು ಕಳೆಯುತ್ತಿದ್ದಂತೆಯೇ ಮತ್ತೆ ತಲೆ ಎತ್ತಿರುವ ಫಾಸ್ಟ್‌ಫುಡ್ ಅಂಗಡಿಗಳು ಈ ತನಕವೂ ಕಾರ್ಯ ನಿರ್ವಹಿಸುತ್ತಿದೆ. ಸಂಜೆ 5ರ ಬಳಿಕ ಕಾರ್ಯನಿರ್ವಹಿಸುವ ಕೆಲ ಅಂಗಡಿಗಳು ಅಧಿಕಾರಿಗಳೊಂದಿಗೂ ಕಣ್ಣುಮುಚ್ಚಾಲೆ ನಡೆಸಿತ್ತು.
ತಮಾಷೆ ಎಂದರೆ ಕಳೆದ ಮೂರು ತಿಂಗಳ ಹಿಂದೆ ನಡೆದ ಸಾಮಾನ್ಯ ಸಭೆಯೊಂದರಲ್ಲಿ ಬಂಟ್ವಾಳ ಪುರಸಭೆ ಮೇಲ್ಸೇತುವೆ ಅಡಿಯಲ್ಲಿರುವ ಅನಧಿಕೃತ ಅಂಗಡಿಗಳ ತೆರವಿಗೆ ಮತ್ತೆ ನಿರ್ಣಯ ಕೈಗೊಂಡಿತ್ತು. ಆದರೆ, ಅದು ಕಾಗದದಲ್ಲಿ ಮಾತ್ರ ಉಳಿಯಿತು ಹೊರತು ಅನುಷ್ಠಾನಕ್ಕೆ ಬರಲೇ ಇಲ್ಲ.
-ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

