ದಕ್ಷಿಣ ಕನ್ನಡ

ದೇಶದ ಏಕತೆಗೆ ನಮೋ ನಾಯಕತ್ವ: ಡಾ.ಸ್ವಾಮಿ

Published On :

ಮಂಗಳೂರು: ದೇಶಕ್ಕೆ ಭ್ರಷ್ಟಾಚಾರ, ಆರ್ಥಿಕ ಕುಸಿತ ಮತ್ತು ಭದ್ರತೆಯ ಅಪಾಯ ತಟ್ಟುತ್ತಿರುವ ಇಂದಿನ ಸನ್ನಿವೇಶದಲ್ಲಿ ಏಕತೆಯನ್ನು ಮೂಡಿಸುವ ನರೇಂದ್ರ ಮೋದಿ ನಾಯಕತ್ವದ ಅಗತ್ಯವಿದೆ ಎಂದು ಬಿಜೆಪಿ ಹಿರಿಯ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಪ್ರತಿಪಾದಿಸಿದ್ದಾರೆ.  ನಮೋ ಬ್ರಿಗೇಡ್ ವತಿಯಿಂದ ನಗರದ ಎ.ಬಿ.ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ 'ಪ್ರಸಕ್ತ ರಾಜಕೀಯ ಸನ್ನಿವೇಶ ಮತ್ತು ಮೋದಿ ನಾಯಕತ್ವದ ಪ್ರಸ್ತುತತೆ' ಕುರಿತು ಮಾತನಾಡಿದರು.
 ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನು ಐದು ವರ್ಷಗಳಲ್ಲಿ ಡಾಲರ್ ಎದುರಿನ ರುಪಾಯಿ ಅಪಮೌಲ್ಯ ಅಂತರವನ್ನು ರು. 55ರಿಂದ ರು. 10ಕ್ಕೆ ಸೀಮಿತಗೊಳಿಸುತ್ತೇವೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಎದುರಾಳಿಯೇ ಇಲ್ಲ. ಸೋನಿಯಾ ಗಾಂಧಿ ಸೂಚಿಸುವ ರಾಹುಲ್ ಗಾಂಧಿ 'ಪೆದ್ದ' ಎಂದು ಮೂದಲಿಸಿದ ಅವರು, ದೇಶದ ಎಲ್ಲ ಸಮಸ್ಯೆಗಳಿಗೆ ನರೇಂದ್ರ ಮೋದಿಯೇ ಉತ್ತರ ಎಂದು ಹೇಳಿದರು.
ಯುಪಿಎಗೆ ಪಾಕ್ ಬ್ಲಾಕ್‌ಮೇಲ್: ಕಪ್ಪು ಹಣ ವಿಚಾರದಲ್ಲಿ ಕೇಂದ್ರ ಯುಪಿಎ ಸರ್ಕಾರವನ್ನು ಪಾಕಿಸ್ತಾನ ಬ್ಲಾಕ್‌ಮೇಲ್ ಮಾಡುತ್ತಿದೆ ಎಂದು ಆರೋಪಿಸಿದ ಡಾ.ಸ್ವಾಮಿ, ಹಾಗಾಗಿ ಪಾಕ್ ದುಷ್ಕೃತ್ಯ ವಿರುದ್ಧ ಭಾರತ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ. ದೇಶದಲ್ಲಿ ಹವಾಲ ಹಣ ದಂಧೆ ಮೇರೆ ಮೀರಿ ಹರಿಯುತ್ತಿದೆ. ಭೂಮಿಯ ಮೌಲ್ಯವೂ ವಿಪರೀತ ಏರಿಕೆಯಾಗಿದ್ದು, ನೇರ ಅಥವಾ ಪರೋಕ್ಷವಾಗಿಯಾದರೂ ಹೂಡಿಕೆಯಲ್ಲಿ ಶೇ.75 ಲಕ್ಷುರಿ ವಸ್ತುಗಳಿಗೆ ಹೋಗುತ್ತದೆ. ಬಡತನ ರೇಖೆಗಿಂತ ಕೆಳಗಿನ ಶೇ.35 ಮಂದಿಯ ಹೂಡಿಕೆಗೂ ಇದೇ ಗತಿಯಾಗಿದೆ. ಆದರೆ ಈ ಕಪ್ಪು ಹಣವನ್ನು ವಿದೇಶಿ ಹೂಡಿಕೆ ಎಂದು ಕೇಂದ್ರ ಬಿಂಬಿಸುವ ಅಪಾಯವಿದೆ ಎಂದರು.
ಹಣ ದುಬ್ಬರಕ್ಕೆ ವಾದ್ರಾ ಕಾರಣ: ಹಣ ದುಬ್ಬರಕ್ಕೆ ಸೋನಿಯಾ ಅಳಿಯ ರಾಬರ್ಟ್ ವಾದ್ರಾ ಹಾಗೂ ವಿತ್ತ ಸಚಿವ ಚಿದಂಬರಂ ಪುತ್ರ ಕಾರ್ತಿಕ್ ಕಾರಣ ಎಂದ ಡಾ.ಸ್ವಾಮಿ, ವಾದ್ರಾ ದುಬೈನಲ್ಲಿ, ಕಾರ್ತಿಕ್ ಸಿಂಗಾಪುರ್‌ನಲ್ಲಿ ಇದ್ದು ಡಾಲರ್‌ನ್ನು ಅಧಿಕ ದರಕ್ಕೆ ಖರೀದಿಸಿ ಮಾರುತ್ತಾರೆ. ಆರ್‌ಬಿಐ ಸಕಾಲದಲ್ಲಿ ಕ್ರಮ ಕೈಗೊಳ್ಳದಿದ್ದರೆ ರುಪಾಯಿ ಇನ್ನಷ್ಟು ಅಪಮೌಲ್ಯಕ್ಕೆ ಕಾರಣವಾಗುತ್ತಿತ್ತು. ತಾನು ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಅವರಿಗೆ ವಾದ್ರಾ, ಕಾರ್ತಿಕ್ ವಿರುದ್ಧ ಸೊಲ್ಲೆತ್ತುವ ತಾಕತ್ತು ಇಲ್ಲ ಎಂದು ಛೇಡಿಸಿದರು.
 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ ದೇಶಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಹೇಳಿದ ಡಾ.ಸ್ವಾಮಿ, ಭಾರತದಲ್ಲಿ ಸಂಪನ್ಮೂಲಕ್ಕೆ ಕೊರತೆ ಇಲ್ಲ, ಶೇ.35ರಷ್ಟು ಯುವಜನತೆ ದೇಶದಲ್ಲಿ ತುಂಬಿದ್ದಾರೆ. ವಿದೇಶದ ಮೂಲಸೌಕರ್ಯದ ಬಗ್ಗೆ ಮಾತನಾಡುವ ಯುಪಿಎ ಸರ್ಕಾರಕ್ಕೆ ಭಾರತದಲ್ಲಿ ರಸ್ತೆಗಳನ್ನು ಸರಿಪಡಿಸುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.
ಆಪ್‌ಗೆ ಮತ ನೀಡಿ ಪಾಪ್ ಆದರು!: ದೆಹಲಿಯಲ್ಲಿ ಆಪ್(ಆಮ್ ಆದ್ಮಿ ಪಾರ್ಟಿ)ಮತ ನೀಡಿ ಜನತೆ 'ಪಾಪ್‌' ಆಗಿದ್ದಾರೆ ಎಂದು ವಿಶ್ಲೇಷಿಸಿದ ಅವರು, ಪಾಕ್ ವಿಚಾರದಲ್ಲಿ ಅರವಿಂದ ಕೇಜ್ರಿವಾಲ್ ನಡವಳಿಕೆ ದೇಶದ ಹಿತಾಸಕ್ತಿಗೆ, ಪ್ರಜಾಪ್ರಭುತ್ವಕ್ಕೆ ವಿರೋಧವಾದ ಎಡಪಂಥೀಯದ್ದು. ಹಾಗಾಗಿಯೇ ಕಾಂಗ್ರೆಸ್ ಬೇಷರತ್ ಬೆಂಬಲ ನೀಡುವ ಮಾತನ್ನಾಡುತ್ತಿದೆ ಎಂದರು.
 ಬ್ಲಾಗರ್ ಸಂದೀಪ್ ಕೃಷ್ಣನ್ ಬರೆದ 'ಟಿಪ್ಪು ಸುಲ್ತಾನ್ ದಿ ಟೈರೆಂಟ್ ಆಫ್ ಮೈಸೂರು' ಆಂಗ್ಲ ಕೃತಿಯನ್ನು ಡಾ.ಸುಬ್ರಹ್ಮಣಿಯನ್ ಸ್ವಾಮಿ ಬಿಡುಗಡೆಗೊಳಿಸಿದರು.  ನಮೋ ಬ್ರಿಗೇಡ್ ಪ್ರವರ್ತಕ ಚಕ್ರವರ್ತಿ ಸೂಲಿಬೆಲೆ ಪ್ರಾಸ್ತಾವಿಕ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.