ಅಡಕೆ ನಿಷೇಧ ಬೇಡ: ಸಂಸದ ನಳಿನ್ ಮನವಿ
ಮಂಗಳೂರು: ಅಡಕೆ ನಿಷೇಧ ಕುರಿತು ಬಂದಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಳೆಗಾರರ ಹಿತದೃಷ್ಟಿಯಿಂದ ಕೂಡಲೇ ಗಂಭೀರ ಗಮನಹರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕೃಷಿ ಸಚಿವ ಶರದ್ ಪವಾರ್ರನ್ನು ಆಗ್ರಹಿಸಿದ್ದಾರೆ. ರಾಜ್ಯ ಸಂಸದರೊಂದಿಗೆ ಕೇಂದ್ರ ಕೃಷಿ ಸಚಿವರಿಗೆ ಮನವಿ ಸಲ್ಲಿಸಿರುವ ಅವರು, ದೇಶದ 12 ರಾಜ್ಯಗಳಲ್ಲಿ ಸುಮಾರು 6.3 ಲಕ್ಷ ಟನ್ ಅಡಕೆ ಉತ್ಪಾದನೆಯಾಗುತ್ತಿದೆ. ಕೋಟ್ಯಂತರ ಕುಟುಂಬಗಳು, ವ್ಯಾಪಾರಿಗಳು ಅಡಕೆಯನ್ನು ಅವಲಂಬಿಸಿದ್ದಾರೆ. ಆಹಾರ ಸುರಕ್ಷಾ ಪ್ರಾಧಿಕಾರವೂ ಅಡಕೆಯನ್ನು ಆಹಾರ ಎಂದು ಪರಿಗಣಿಸಿದೆ. ರಾಜ್ಯ ಹೈಕೋರ್ಟ್ 2007ರಲ್ಲಿ ನೀಡಿದ ಆದೇಶದಲ್ಲೂ ಅಡಕೆ ಪ್ರಯೋಜನಕಾರಿ ಎಂದು ತೀರ್ಪಿತ್ತಿದೆ. ಕೇಂದ್ರ ಸರ್ಕಾರವೂ ಅಡಕೆ ಬೆಳೆಗಾರರಿಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಲ್ಲಿ ಸಬ್ಸಿಡಿ ನೀಡಿ ಅಡಕೆ ಬೆಳೆಯನ್ನು ಪ್ರೋತ್ಸಾಹಿಸಿದೆ. ಅಲ್ಲದೆ ದೇಶದ ಆರ್ಥಿಕತೆಗೂ ಅಡಕೆ ದೊಡ್ಡ ಆದಾಯ ತರುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣ ಹಿನ್ನೆಲೆಯಲ್ಲಿ ಬೆಳೆಗಾರರ ಹಿತ ರಕ್ಷಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಿಎಂ ನಿಲುವಿಗೆ ಕಾಂಗ್ರೆಸ್ ಸ್ವಾಗತ: ಅಡಕೆ ನಿಷೇಧ ಪ್ರಸ್ತಾವದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿಲುವನ್ನು ಜಿಲ್ಲಾ ಕಾಂಗ್ರೆಸ್ ಸ್ವಾಗತಿಸಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿದ ಸಿಎಂ ತಕ್ಷಣ ಬೆಳೆಗಾರರ ಹಿತಾಸಕ್ತಿಗೆ ಸ್ಪಂದಿಸಿದ್ದಾರೆ. ಕರಾವಳಿ ಜಿಲ್ಲೆಯ ಪ್ರಮುಖ ಬೆಳೆ ಅಡಕೆಯಾಗಿದ್ದು, ಇದನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಧಾರಣೆ ಕುಸಿತ ಸಂದರ್ಭ ಪರಿಹಾರ ಒದಗಿಸಲು ಆವರ್ತ ನಿಧಿಯನ್ನು ಸ್ಥಾಪಿಸಿ ಬೆಳೆಗಾರರ ರಕ್ಷಣೆಗೆ ಮುಂದಾಗುವಂತೆ ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ. ಚುನಾವಣೆ ದೃಷ್ಟಿಯಲ್ಲಿರಿಸಿ ಬಿಜೆಪಿ ನಾಯಕರು ಬೆಳೆಗಾರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. 5 ವರ್ಷ ಅಧಿಕಾರದಲ್ಲಿದ್ದಾಗ ಬೆಳೆಗಾರರ ಬಗ್ಗೆ ಏನೂ ಕ್ರಮ ಕೈಗೊಂಡಿದೆ ಎಂದು ವಿಪಕ್ಷ ನಾಯಕ ಡಿ.ವಿ.ಸದಾನಂದ ಗೌಡ ಜನತೆಗೆ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

