5 ಸಾವಿರ ಸೌಹಾರ್ದ ಸಹಕಾರಿ ಸಂಘ ಸ್ಥಾಪನೆ ಗುರಿ
ಮಂಗಳೂರು: ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ 5 ಸಾವಿರ ಸೌಹಾರ್ದ ಸಹಕಾರಿ ಸಂಘ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
ನಗರದ ಕ್ಯಾಂಪ್ಕೋ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಹಿಡಿತದಿಂದ ಸೌಹಾರ್ದ ಸಹಕಾರಿ ರಂಗ ಮುಕ್ತವಾಗಿದ್ದು, ಇದಕ್ಕೆ ಪೂರಕವಾಗಿ ಎಲ್ಲ ಜಿಲ್ಲೆಗಳಲ್ಲಿ ಪ್ರೇರಣಾ ಶಿಬಿರ ನಡೆಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ 2600 ಸೌಹಾರ್ದ ಸಹಕಾರಿ ಸಂಘಗಳಿದ್ದು, ರು. 5250 ಕೋಟಿ ವಹಿವಾಟು ನಡೆಸುತ್ತಿವೆ. 20 ಸಾವಿರ ಮಂದಿ ನೇರ ಉದ್ಯೋಗದಲ್ಲಿದ್ದು, 17 ಸಾವಿರ ಮಂದಿ ಪೂರಕ ಉದ್ಯೋಗದಲ್ಲಿದ್ದಾರೆ. ಇದರಲ್ಲಿ 18 ಗ್ರಾಮೀಣ ಬ್ಯಾಂಕ್, ಉಳಿದಂತೆ ಗ್ರಾಹಕ ಸಂಘ, ಮಾರುಕಟ್ಟೆ, ಶೈಕ್ಷಣಿಕ, ಸ್ವಸಹಾಯ, ಮಹಿಳಾ ಸಹಕಾರಿ ಸೌಹಾರ್ದ ಸಂಘಗಳಿವೆ. 550 ಇ ಸ್ಟಾಂಪಿಂಗ್ ಕೇಂದ್ರಗಳಿದ್ದು, ಸಕಾಲ ವ್ಯಾಪ್ತಿಗೆ ಸೌಹಾರ್ದ ಸಂಘಗಳನ್ನು ಒಳಪಡಿಸಲಾಗಿದೆ. ದೇಶದಲ್ಲಿ 70 ಸಾವಿರ ಸೌಹಾರ್ದ ಸಹಕಾರಿ ಸಂಘಗಳಿದ್ದು, ಶೇ.9 ಹಳೆ ಕಾಯ್ದೆಯ ಸಂಘಗಳು ಇದಕ್ಕೆ ಸೇರ್ಪಡೆಯಾಗಿವೆ ಎಂದರು.
ಈ ಕಾಯ್ದೆಯಲ್ಲಿ ವಾರ್ಷಿಕ ಮಹಾಸಭೆ ಸೆ.25ರೊಳಗೆ ಕಡ್ಡಾಯವಾಗಿ ಮಾಡಬೇಕು. ಈ ಸಭೆಗೆ ಕನಿಷ್ಠ ಶೇ.25 ಸದಸ್ಯರ ಹಾಜರಾತಿ ಬೇಕು. ಸೆಪ್ಟೆಂಬರ್ ಒಳಗೆ ಲೆಕ್ಕಪರಿಶೋಧನೆ ಮುಗಿಸಬೇಕು. ಸೌಹಾರ್ದ ಸಂಘಗಳು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಕಾರ್ಯಾಗಾರ ಉದ್ಘಾಟನೆ
ಇದೇ ಸಂದರ್ಭ ಕ್ಯಾಂಪ್ಕೋ ಸಭಾಂಗಣದಲ್ಲಿ ಆಯೋಜಿಸಲಾದ ಸೌಹಾರ್ದ ಸಹಕಾರಿ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿದ ಕ್ಯಾಂಪ್ಕೋ ನಿರ್ದೇಶಕ ರಾಧಾಕೃಷ್ಣ ಕೋಟೆ, ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ, ಸಾಮಾಜಿಕ ಸಬಲತೆ ಆಗಬೇಕು. ಸಹಕಾರಿ ಕ್ಷೇತ್ರ ಜನರ ಜೀವನಾಡಿ. 15 ವರ್ಷಗಳಲ್ಲಿ ಸಹಕಾರಿ ಕ್ಷೇತ್ರ ಬದಲಾವಣೆ ಕಾಣುತ್ತಿದೆ ಎಂದರು.
ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧಕ ಸುಬ್ರಹ್ಮಣ್ಯ ಹೆಗಡೆ, ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣ ಗೌಡ ಜಿ.ಪಾಟೀಲ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

