ದಕ್ಷಿಣ ಕನ್ನಡ

ಸುಳ್ಯದ ಹಳ್ಳಿಯಲ್ಲಿ ಹರಡಿದ ಅರಿವಿನ ಬಳ್ಳಿ

Published On :

ಸುಳ್ಯ: ತಾಲೂಕಿನ ಗಡಿ ಗ್ರಾಮ ಮಂಡೆಕೋಲು ಸದಾ ಸುದ್ದಿಯಲ್ಲಿರುವ ಪುಟ್ಟ ಊರು. ಈ ಬಾರಿ ಇದು ಒಂದು ವಿನೂತನ ಪರಿಕಲ್ಪನೆಯಿಂದ ಸುದ್ದಿ ಮಾಡುತ್ತಿದೆ.
ಗ್ರಾಮದಲ್ಲಿ ಯಾವುದೇ ಅಪರಾಧ ಪ್ರಕರಣ ನಡೆಯದಂತೆ ತಡೆಗಟ್ಟುವ ಮಂಡೆಕೋಲು ಗ್ರಾಮ ಪಂಚಾಯಿತಿಯ ಪರಿಕಲ್ಪನೆ ಅಪರಾಧ ಮುಕ್ತ ಗ್ರಾಮ 28ರಂದು ಉದ್ಘಾಟನೆಗೊಳ್ಳಲಿದೆ.
ಕುಗ್ರಾಮ: ಮಂಡೆಕೋಲು ಒಂದು ಕಾಲದಲ್ಲಿ ಕುಗ್ರಾಮ ಎಂದೇ ಗುರುತಿಸಲ್ಪಟ್ಟ ಊರಾಗಿತ್ತು. ಇದೇ ಊರಿನ ರಾಜಕೀಯ ಮುತ್ಸದ್ಧಿ ಡಿ.ವಿ. ಸದಾನಂದ ಗೌಡರು ಕರ್ನಾಟಕ ರಾಜ್ಯದ ಚುಕ್ಕಾಣಿ ಹಿಡಿದದ್ದೂ ಆಯಿತು. ಪಕ್ಕದ ಕೇರಳ ರಾಜ್ಯ ಗಡಿ ಕುರಿತಂತೆ ತಗಾದೆ ತೆಗೆದದ್ದು ಇದೇ ಗ್ರಾಮದಿಂದಲೇ.
ಇದೀಗ ವಿನೂತನ ಪರಿಕಲ್ಪನೆಯಿಂದ ಈ ಗ್ರಾಮ ಸುದ್ದಿ ಮಾಡುತ್ತಿದೆ. ತಮ್ಮ ಗ್ರಾಮದಲ್ಲಿ ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವುದು ಜನಾಂದೋಲನದ ಮುಖ್ಯ ಉದ್ದೇಶ. ಸಾರ್ವಜನಿಕರ, ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಮುಂದಿನ ಒಂದು ವರ್ಷದಲ್ಲಿ ಯಾವುದೇ ಅಪರಾಧ ನಡೆಯದಂತೆ ನೋಡಿಕೊಂಡು ಮುಂದೆ ಅಪರಾಧ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವುದು. ಆ ಮೂಲಕ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಮತ್ತು ಜನರಲ್ಲಿ ಅನ್ಯೋನ್ಯತೆ ಬೆಳೆಸುವುದು ಇದರ ಉದ್ದೇಶ.
ಶಾಲೆಗೆ ನೂರು: ಮಂಡೆಕೋಲು ಗ್ರಾಮದ ಜನತೆಗೆ ಶಿಕ್ಷಣದ ಬೆಳಕನ್ನು ನೀಡಿದ ಮಂಡೆಕೋಲು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಈಗ ಶತಮಾನೋತ್ಸವದ ಸಂಭ್ರಮ. ಇದೇ ಸಂಭ್ರಮದಲ್ಲಿ ಗ್ರಾಮವನ್ನು ಅಪರಾಧ ಮುಕ್ತವನ್ನಾಗಿಸಲು ಸಿದ್ಧತೆ ನಡೆದಿದೆ.
ಒಂದು ಕಾಲದಲ್ಲಿ ಇಲ್ಲಿ ಯಾವಾಗ ನೋಡಿದರಾಗ ವೈಯಕ್ತಿಕ, ರಾಜಕೀಯ ಘರ್ಷಣೆಗಳು, ಮದ್ಯ ಅಕ್ರಮ ಮಾರಾಟ, ಮರಗಳ್ಳತನ ಹೀಗೆ ಅಪರಾಧ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದ್ದವು. ಇದು ಕರ್ನಾಟಕ- ಕೇರಳ ಗಡಿಪ್ರದೇಶವಾದುದರಿಂದ ಎರಡೂ ರಾಜ್ಯಗಳಲ್ಲಿ ಅಪರಾಧ ಮಾಡಿದವರಿಗೆ ಆಶ್ರಯ ಪಡೆಯುವ ಸುರಕ್ಷಿತ ಸ್ಥಳ ಎಂಬ ಕುಖ್ಯಾತಿಗೂ ಹೆಸರಾಗಿತ್ತು.
ಆದರೆ, ಮಂಡೆಕೋಲು ಇತ್ತೀಚಿನ ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದೆ. ಇದೇ ಹೆಗ್ಗಳಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಧರಿಸಿ ವಿನೂತನ ಯೋಜನೆ ಜಾರಿಗೊಳಿಸಿದೆ.
ವಿನೂತನ ಯೋಜನೆ: ಪೊಲೀಸ್, ಅಬಕಾರಿ, ಅರಣ್ಯ, ಸಿವಿಲ್ ವ್ಯಾಜ್ಯ ಹೀಗೆ ವಿವಿಧ ಇಲಾಖೆಗಳಲ್ಲಿ ಮಂಡೆಕೋಲು ಗ್ರಾಮದಿಂದ ಪ್ರತಿವರ್ಷ ನೂರಕ್ಕೂ ಅಧಿಕ ವಿವಿಧ ಪ್ರಕರಣಗಳು ದಾಖಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಅವರಿಂದ ಯೋಜನೆ ರೂಪಿತವಾಯಿತು.
ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಕಣೆಮರಡ್ಕ ಅಧ್ಯಕ್ಷರಾಗಿ, ಜಯರಾಜ್ ಕುಕ್ಕೆಟ್ಟಿ ಮತ್ತು ಸದಾನಂದ ಮಾವಜಿ ಸಂಚಾಲಕರಾಗಿ ಸಮಿತಿಯೊಂದನ್ನು ರೂಪಿಸಲಾಗಿದೆ.  ವಿವಿಧ ಕ್ಷೇತ್ರದ ಪ್ರಮುಖರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ಅಪರಾಧ ಪ್ರಕರಣದಲ್ಲಿ ಭಾಗಿಗಳಾಗದಂತೆ ಮತ್ತು ಅದನ್ನು ತಡೆಯುವಂತೆ ಜನರಲ್ಲಿ ಜಾಗೃತಿ ಮೂಡಿಸುವುದು. ಪ್ರತಿ ಮನೆ ಮನೆಗೆ ತೆರಳಿ ತಮ್ಮ ಯೋಚನೆ ಹಂಚಿಕೊಂಡು ಅವರನ್ನೂ ಪೂರ್ಣವಾಗಿ ತೊಡಗಿಸಿಕೊಳ್ಳುವುದು.
ಸಣ್ಣ ಪುಟ್ಟ ವೈಮನಸ್ಸು, ದ್ವೇಷ ಕಂಡು ಬಂದಲ್ಲಿ ಅದನ್ನು ಸೌಹಾರ್ದಯುತವಾಗಿ ಪರಿಹರಿಸುವುದು ಮತ್ತು ಇದಕ್ಕೆ ಪೂರಕ ಕಾರ್ಯಕ್ರಮಗಳನ್ನು ಸಂಘಟಿಸುವುದನ್ನು ವರ್ಷಪೂರ್ತಿ ನಿರಂತರವಾಗಿ ಸಂಘಟಿಸುವುದು. ಜೊತೆಗೆ ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿಯನ್ನು ಇನ್ನಷ್ಟು ಕ್ರಿಯಾಶೀಲವನ್ನಾಗಿಸುವುದು. ಅದರ ಮೂಲಕ ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಜನರನ್ನು ಮದ್ಯದ ಚಟದಿಂದ ದೂರವಿರುವಂತೆ ಪ್ರೇರೇಪಿಸುವ ಕಾರ್ಯಕ್ರಮವೂ ಜನಾಂದೋಲನದಲ್ಲಿ ಅಡಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.