ಶಾರಿಕ ಮರು ಮರಣೋತ್ತರ ವರದಿ ನಿರೀಕ್ಷೆ
ಸುಬ್ರಹ್ಮಣ್ಯ: ಕಳೆದ ಐದು ತಿಂಗಳ ಹಿಂದೆ ಅಗಸ್ಟ್ 11 ರಂದು ನಾಪತ್ತೆಯಾಗಿ 13 ದಿನಗಳ ಬಳಿಕ ಸಮೀಪದ ಜೇನುಕೋಡಿ ಎಂಬಲ್ಲಿ ಹೊಳೆಯ ನೀರಿನಲ್ಲಿ ಪತ್ತೆಯಾದ ಚಾರ್ಮತದ ಹಸುಳೆ ಶಾರಿಕ ಮಗುವಿನ ಸಾವಿಗೆ ಸಂಬಂಧಿಸಿದಂತೆ ನಡೆದ ಮರುಮರಣೋತ್ತರ ಪರೀಕ್ಷೆಯ ವರದಿ ಕುರಿತಂತೆ ಸಾರ್ವಜನಿಕರಲ್ಲಿ ಕುತೂಹಲ ಮುಂದುವರೆದಿದೆ.
ಪರೀಕ್ಷಾ ವರದಿ ಕುರಿತಂತೆ ಅನಿಶ್ಚಿತತೆ ಇನ್ನೂ ಮುಂದುವರಿದಿದ್ದು, ಪರೀಕ್ಷಾ ವರದಿ ಪೊಲೀಸರ ಕೈ ಸೇರಿದಿಯೋ ಇಲ್ಲವೋ... ಎಂಬ ಬಗ್ಗೆ ಕುತೂಹಲ ಮತ್ತು ವರದಿಯಲ್ಲಿ ಏನಿದೆ ಎಂಬ ಜಿಜ್ಞಾಸೆ ಜನರಲ್ಲಿ ಮೂಡಿದೆ. ಶವದ ಎಲುಬುಗಳನ್ನು ಪರೀಕ್ಷೆಗಾಗಿ ಕೊಂಡೂಯ್ದು 20 ದಿನ ಕಳೆದಿದೆ. ಇಲ್ಲಿ ತನಕ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸ್ ಮೂಲಗಳಿಂದ ಅಧಿಕೃತ ಮಾಹಿತಿ ಹೊರ ಬಿದ್ದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ದೊರಕಬಹುದಾದ ನಿರೀಕ್ಷೆ ಇದೆ. ಸದ್ಯ ದೊರಕಿರುವ ಮಾಹಿತಿ ಪ್ರಕಾರ ಶವದ ಎಲುಬಿನ ತುಣುಕುಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಿರುವುದರಿಂದ ವರದಿ ಬರಲು ತಡವಾಗಿ, ಅಂತಿಮ ವರದಿ ಕೈ ಸೇರಲು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಡುಗಲ್ಲು ಚಾರ್ಮತ ಮೋಹನದಾಸ ಭವಾನಿ ದಂಪತಿ ಪುತ್ರಿ ಶಾರಿಕ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಂಶಯಗಳಿಗೆ ಇನ್ನೂ ತಾರ್ಕಿಕ ಅಂತ್ಯ ಬಿದ್ದಿಲ್ಲ. ಈ ಹಿಂದೆ ಮಗುವಿನ ಸಾವಿಗೆ ಸಂಬಂಧಿಸಿದಂತೆ ಕೊಲೆಯೋ, ಆಕಸ್ಮಿಕ ಸಾವೋ ಎಂಬ ಬಗ್ಗೆ ಸ್ಥಳೀಯರಲ್ಲಿ ಅನುಮಾನ ದಟ್ಟವಾಗಿ ಕಂಡು ಬಂದಿದೆ. ಕೆಲವು ಮಂದಿಯ ಮೇಲೆ ಆಧಾರ ರಹಿತ ಆರೋಪವನ್ನೂ ಮಾಡಲಾಗುತ್ತಿದೆ.
ಈ ಮಧ್ಯೆ ಮಗುವಿನ ತಾಯಿ ಭವಾನಿ ಮಗುವಿನ ಸಾವಿನ ಕುರಿತಂತೆ ಸಂಶಯ ವ್ಯಕ್ತಪಡಿಸಿ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಗುವಿನ ಮೃತ ದೇಹವನ್ನು ಡಿ. 3 ರಂದು ಮತ್ತೊಮ್ಮೆ ಮರು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಂತೆ ಮಂಗಳೂರಿನ ಕೆ.ಎಸ್. ಹೆಗ್ಡೆ ಪಾರ್ಮಸಿ ಲ್ಯಾಬ್‌ನ ಮೆಡಿಕಲ್ ವೈದ್ಯಾಧಿಕಾರಿಗಳು ಮಗುವಿನ ಶವದ ಎಲುಬುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದರು. ಆದರೆ, ಈ ತನಕ ವರದಿ ಕುರಿತಂತೆ ಯಾವುದೇ ಮಾಹಿತಿ ಪೊಲೀಸ್ ಇಲಾಖೆ ಹೊರಗೆಡದಿರುವುದರಿಂದ ಸಾರ್ವಜನಿಕರು ವರದಿಗಾಗಿ ಎದುರು ನೋಡುತಿದ್ದಾರೆ.
ಶಾರಿಕ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿದೆ ಎಂಬುದು ವರದಿ ಬಂದ ಬಳಿಕವಷ್ಟೇ ತಿಳಿಯಲು ಸಾಧ್ಯ. ಪರೀಕ್ಷೆಗೆ ಸಂಬಂಧಿಸಿದಂತೆ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ನೈಜ ವರದಿ ನೀಡುತ್ತಾರೆ ಮತ್ತು ಆ ವರದಿ ಆಧಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸ ಎಲ್ಲ ಅಧಿಕಾರಿಗಳ ಮೇಲೆ ನಮಗಿದೆ. ವರದಿ ಬರಲು ಇನ್ನಷ್ಟೂ ಕಾಲ ಹಿಡಿಯುವುದರಿಂದ ಅಲ್ಲಿ ತನಕ ಕಾದು ನೋಡುತ್ತೇವೆ. ಅವಶ್ಯವಿದ್ದರೆ ಮುಂದೆ ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು ಎಂದು ಗುತ್ತಿಗಾರು ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ಮೆಟ್ಟಿನಡ್ಕ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

