ಶಿಕ್ಷಣ ಇಲಾಖೆಯಲ್ಲಿ ಅನರ್ಹರಿಗೆ ಬಡ್ತಿ!
ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ 2013ನೇ ಸಾಲಿನ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಗ್ರೇಡ್-2 ಹುದ್ದೆಗೆ ಅಕ್ರಮವಾಗಿ ಬಡ್ತಿ ನೀಡಲು ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ.
ಪ್ರೌಢಶಾಲೆ ಕನ್ನಡ ಭಾಷಾ ಶಿಕ್ಷಕ ಗ್ರೇಡ್- 2 ಹುದ್ದೆಗೆ ಬಡ್ತಿ ನೀಡಲು ಡಿ.26ರಂದು ಕೌನ್ಸೆಲಿಂಗ್ ನಡೆಸಲು ಉಪನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ನಿಯಮದಂತೆ ವಿದ್ಯಾರ್ಹತೆ ಇಲ್ಲದವರನ್ನೂ ಅರ್ಹರೆಂದು ಉಲ್ಲೇಖಿಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಸಮಸ್ಯೆ ಏನು...?: ಕನ್ನಡ ಭಾಷಾ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಕರ್ನಾಟಕ ರಾಜ್ಯ ಪ್ರತದಲ್ಲಿ ಇರುವ ನಿಯಮಗಳನ್ನು ಉಲ್ಲಂಘಿಸಿ ಅರ್ಹತೆ ಇಲ್ಲದವರ ಹೆಸರನ್ನು ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವುದು ನೊಂದ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ನಿಯಮದಂತೆ ಯಾವುದೇ ಹುದ್ದೆಗೆ ಬಡ್ತಿ ಹೊಂದಲು ಆಯಾ ವಿಷಯದಲ್ಲಿ ಅಧ್ಯಯನ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ನೇಮಕಾತಿ ರಾಜ್ಯಪತ್ರದಲ್ಲೂ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಡಿ.26ಕ್ಕೆ ಕೌನ್ಸೆಲಿಂಗ್ ನಿಗದಿಪಡಿಸಿ ಹೊರಡಿಸಿರುವ ಆದೇಶ ಪತ್ರದಲ್ಲಿ ಉಲ್ಲೇಖಿಸಿರುವ ಮೂವರು ಶಿಕ್ಷಕರು ಇಂಗ್ಲಿಷ್ ಭಾಷೆಯಲ್ಲಿ ಬಿ.ಎಡ್ ಅಧ್ಯಯನ ಮಾಡಿರುವುದು ತಿಳಿದು ಬಂದಿದೆ. ಹೊರಡಿಸಲಾದ ಅಂತಿಮ ಪಟ್ಟಿಯಂತೆ ಬೆಳ್ತಂಗಡಿ ಸುಳ್ಯ ತಾಲೂಕಿನ ಮೂರು ಮಂದಿ ಶಿಕ್ಷಕಿಯರು ಇಎಸ್-344 ಟೀಚಿಂಗ್ ಆಫ್ ಇಂಗ್ಲಿಷ್ ಅಭ್ಯಸಿಸಿದ್ದು ಇವರ ಬಡ್ತಿಗೆ ಮಣೆ ಹಾಕಿರುವುದು ಇದೀಗ ಚರ್ಚಿತ ವಿಷಯ.
ಆಕ್ಷೇಪಣೆಗೂ ಅವಕಾಶ ಇಲ್ಲ: ಸರ್ಕಾರದ ನೇಮಕಾತಿಯ ಅಧಿಸೂಚನೆಯಂತೆ ದೇಶದ ಕಾನೂನಿನಂತೆ ಸ್ಥಾಪಿಸಲ್ಪಟ್ಟ ಮತ್ತು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದಿಂದ ಅಂಗೀಕೃತವಾದ ಯಾವುದೇ ಒಂದು ವಿಶ್ವವಿದ್ಯಾನಿಲಯದಿಂದ ಬಿ.ಎಡ್ ಪದವೀಧರರಾಗಿದ್ದು ಈ ಪದವಿ ಪರೀಕ್ಷೆಯಲ್ಲಿ ಆಯಾ ಭಾಷೆಯನ್ನು ಭೋದನಾ ವಿಷಯವಾಗಿ ಅಧ್ಯಯನ ಮಾಡಿರಬೇಕು. ಆದರೆ ಈ ಸೂಚನೆಯನ್ನು ಬದಿಗೊತ್ತಿ ಅರ್ಹತೆ ಇಲ್ಲದವರನ್ನು ನೇರ ಕೌನ್ಸೆಲಿಂಗ್ಗೆ ಹಾಜರಾಗಲು ತಿಳಿಸಿರುವುದು ನೊಂದ ಅರ್ಹ ಶಿಕ್ಷಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಪತ್ರಿಕೆಗಳಿಗೆ ಪ್ರಕಟಣೆ ನೀಡದೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳ ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸದೆ ಗೌಪ್ಯವಾಗಿ ಬಡ್ತಿ ಪ್ರಕ್ರಿಯೆ ನಡೆಸಲು ಮುಂದಾಗಿದ್ದು ಡಿ.24 ಹಾಗೂ ಡಿ.25 ರಂದು ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಅರ್ಹ ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಇಲ್ಲವಾಗಿದೆ.
ಸಾಮಾನ್ಯವಾಗಿ ಈ ಹಿಂದೆ ಶಿಕ್ಷಕರಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮಧ್ಯಾಹ್ನ 3 ಗಂಟೆಯ ಬಳಿಕ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಇದ್ಯಾವೂದಕ್ಕೂ ಅವಕಾಶ ನೀಡದೆ ಬೆಳಗ್ಗೆ 10 ಗಂಟೆಗೆ ಕೌನ್ಸೆಂಗ್ ನಡೆಸಲು ತೀರ್ಮಾನಿಸಿರುವುದು ಹಲವಾರು ಸಂಶಯಗಳಿಗೂ ಅವಕಾಶ ಮಾಡಿಕೊಟ್ಟಿದೆ. ಈ ವಿಚಾರವನ್ನು ಈಗಾಗಲೇ ಜಿಪಂ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಗಮನಕ್ಕೆ ತರಲಾಗಿತ್ತಾದರೂ ನೊಂದ ಶಿಕ್ಷಕರಿಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಇಲಾಖೆಯ ಈ ಕಾನೂನು ಬಾಹಿರ ಕ್ರಮದ ಬಗ್ಗೆ ನೊಂದ ಶಿಕ್ಷಕರು ಜಿಲ್ಲಾ ಉಪ ನಿರ್ದೇಶಕರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರು ಶಿಕ್ಷಣ ಇಲಾಖೆಯ ಮೇಲಧಿಕಾರಿಗಳಿಗೆ ಮಾಹಿತಿ ಕೋರಿದ್ದರು. ಇದಕ್ಕೆ ಕಳೆದ ಅ.9ರಂದು ಪ್ರತಿಕ್ರಿಯಿಸಿದ ಪ್ರೌಢಶಿಕ್ಷಣ ನಿರ್ದೇಶಕರು ನೇಮಕಾತಿ ನಿಯಮಗಳನ್ವಯ ನಿಗದಿತ ವಿದ್ಯಾರ್ಹತೆ ಹೊಂದಿರುವ ಬಗ್ಗೆ ಹಾಗೂ ಸೇವಾ ಜೇಷ್ಠತೆಗೆ ಅನುಗುಣವಾಗಿ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದರು.
ಅಲ್ಲದೆ 2012ರಲ್ಲಿ ಮಧುಗಿರಿಯಲ್ಲಿ ಇದೇ ರೀತಿಯ ಪ್ರಕರಣಕ್ಕೆ ಸಂಬಂಧಿಸಿ ಪ್ರೌಢಶಿಕ್ಷಣ ನಿರ್ದೇಶಕರು ಹೊರಡಿಸಿದ್ದ ಸ್ಪಷ್ಟೀಕರಣ ಸುತ್ತೋಲೆಯಲ್ಲಿಯೂ ಇದೇ ಅಂಶವನ್ನು ಎತ್ತಿಹಿಡಿದಿದೆ.
ಅತಿ ತುರ್ತು ಪಟ್ಟಿಯೂ ಬದಲು..: ಸಾಮಾನ್ಯವಾಗಿ ಕೌನ್ಸೆಲಿಂಗ್ ನಡೆಸುವುದಕ್ಕೆ ಮುಂಚಿತವಾಗಿ ಅಂತಿಮ ಪಟ್ಟಿ ತಯಾರಿಸಿ ಸೂಚನಾಫಲಕಗಳಲ್ಲಿ ಪ್ರದರ್ಶಿಸಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕೊಡುವುದು ಸರ್ಕಾರಿ ನಿಯಮ. ಆದರೆ ಡಿ.24 ಹಾಗೂ 25ರಂದು ಸರ್ಕಾರಿ ರಜೆ ಘೋಷಣೆಯಾದ ಹಿನ್ನೆಲೆಯಲ್ಲಿ ಡಿ.23ರಂದು ಅತಿ ತುರ್ತು ಎಂದು ಜಿಲ್ಲಾ ಉಪನಿರ್ದೇಶಕರು ಕೌನ್ಸೆಲಿಂಗ್ನ ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಈ ಮೊದಲು 01-01-2013ರಲ್ಲಿದ್ದಂತೆ ಎಂದು ಉಲ್ಲೇಖಿಸಿ ಹೊರಡಿಸಿದ್ದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿದ್ದ ಮೂವರು ಅರ್ಹ ಶಿಕ್ಷಕರ ಹೆಸರು, ಡಿ.23ರಂದು ಅತಿ ತುರ್ತು ಜ್ಞಾಪನಾ ಪತ್ರದೊಂದಿಗೆ ಲಗತ್ತಿಸಿದ ಅಂತಿಮ ಜೇಷ್ಠತಾ ಪಟ್ಟಿಯಿಂದ ನಾಪತ್ತೆಯಾಗಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಶಿಕ್ಷಕರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರವಾಣಿ ಕರೆ ಮಾಡಿದಾಗ ಅವರು ಸಂಪರ್ಕಕ್ಕೆ ಸಿಕ್ಕಲ್ಲ.
ಯಾವುದೇ ಕಾರಣಕ್ಕೂ ನಿಯಮಬಾಹಿರವಾಗಿ ಶಿಕ್ಷಕರ ಬಡ್ತಿಗೆ ಕೌನ್ಸೆಲಿಂಗ್ ನಡೆಸಲು ಅವಕಾಶವಿಲ್ಲ. ನಿಯಮದಂತೆ ಕೌನ್ಸೆಲಿಂಗ್ ನಡೆಸಲು ಉಪನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
- ತುಳಸಿ ಮದ್ದಿನೇನಿ, ಸಿಇಒ
-ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

