29ರಂದು ಯುವ ಬಂಟರ ಸಂಘದ ಕ್ರಿಕೆಟ್ ಪಂದ್ಯಾವಳಿ
ಪುತ್ತೂರು: ಪುತ್ತೂರು ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಬೆಳಿಯೂರು ಕಟ್ಟೆ ಸಾಜ ಶಾಲಾ ವಠಾರದಲ್ಲಿ ಡಿ.29ರಂದು ದಿ.ಎ. ಜೀವನ್ ಭಂಢಾರಿ ಅವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ರೈ ಡಿಂಬ್ರಿ ತಿಳಿಸಿದ್ದಾರೆ. ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟವನ್ನು ಬಂಟರ ಸಂಘದ ಅಧ್ಯಕ್ಷ ಸೀತಾರಾಮ ರೈ ಸವಣೂರು ಉದ್ಘಾಟಿಸಲಿದ್ದಾರೆ. ಬಲ್ನಾಡು ಗ್ರಾಮ ಸಮಿತಿ ವತಿಯಿಂದ ಸಾಧಕರಿಗೆ ಅಭಿನಂದನೆ, ಸಮಾಜದ ಹಿರಿಯರಿಗೆ ಗೌರವಾರ್ಪಣೆ ಹಾಗೂ ಸನ್ಮಾನ ಸಮಾರಂಭವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ ಎಂದರು. ಸಚಿವ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಶಕುಂತಳಾ ಶೆಟ್ಟಿ , ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಚಿತ್ರ ನಟ ಶಿವಧ್ವಜ್ ಪಾಲ್ಗೊಳ್ಳಲಿದ್ದಾರೆ.
29ರಂದು ಕೋಟಿ ಚೆನ್ನಯ ಕ್ರೀಡೋತ್ಸವ
ಪುತ್ತೂರು: ಯುವ ವಾಹಿನಿ ಪುತ್ತೂರು ಘಟಕದ ವತಿಯಿಂದ ಕೋಟಿ- ಚೆನ್ನಯ ಕ್ರೀಡೋತ್ಸವ ಡಿ.29ರಂದು ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯುವವಾಹಿನಿ ಪುತ್ತೂರು ಘಟಕದ ಸಂಚಾಲಕ ಹೊನ್ನಪ್ಪ ಪೂಜಾರಿ ಕೈಂದಾಡಿ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಪುತ್ತೂರು ತಾಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಲಿದ್ದಾರೆ. ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಘಟಕದ ಅಧ್ಯಕ್ಷ ರವಿಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಾದ ಕೊಂಬೆಟ್ಟು ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಕಿ ಗೀತಾ ಮಣಿ ಮತ್ತು ಸುದಾನ ಶಾಲೆಯ ದೈಹಿಕ ಶಿಕ್ಷಕಿ ರಾಷ್ಟ್ರ ಮಟ್ಟದ ಕ್ರೀಡಾಪಟು ಶ್ವೇತಾ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
30ರಂದು ಕಟ್ಟಡ ಕಾರ್ಮಿಕರ ತರಬೇತಿ
ಪುತ್ತೂರು: ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗಾಗಿ 4 ದಿನದ ತರಬೇತಿ ಶಿಬಿರವನ್ನು ಡಿ.30ರಂದು ಬೆಳಗ್ಗೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಳಲಾಗಿದೆ ಎಂದು ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್ನ ಅಧ್ಯಕ್ಷ ರವೀಂದ್ರ ಪಿ. ತಿಳಿಸಿದ್ದಾರೆ. ಶಿಬಿರವನ್ನು ಪುತ್ತೂರು ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಪ್ರತಿ ಸೋಮವಾರ ಮಧ್ಯಾಹ್ನದ ತನಕ ತರಬೇತಿ ಶಿಬಿರ ನಡೆಯಲಿದ್ದು, ಈ ಕಾರ್ಯಾಗಾರದಲ್ಲಿ ವಿವಿಧ ತಜ್ಞ ಎಂಜಿನಿಯರ್ಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಆಸಕ್ತ ಕಾರ್ಮಿಕರು 200 ಶುಲ್ಕ ಪಾವತಿಸಿ ಶಿಬಿರದಲ್ಲಿ ದಾಖಲಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಜ.2ರಂದು ತುಳುತೇರಿಗೆ ಪುತ್ತೂರಲ್ಲಿ ಸ್ವಾಗತ
ಪುತ್ತೂರು: ಒಡಿಯೂರು ಗುರುದೇವ ದತ್ತ ಸಂಸ್ಥಾನಂ ಇದರ ವಿಜಯ ರಜತ ಸಂಭ್ರಮ-2014 ಕಾರ್ಯಕ್ರಮದ ನೆನಪಿನಲ್ಲಿ ನಡೆಯುವ ತುಳುನಾಡ್ದ ಜಾತ್ರೆಯ ತುಳುತೇರನ್ನು ಸ್ವಾಗತಿಸುವ ಸಮಾರಂಭ ಜ.2ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ತುಳುತೇರ್ ಕೂಟದ ಅಧ್ಯಕ್ಷ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ವಿಜಯ ರಜತ ಸಂಭ್ರಮದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಳು ತೇರು ಕೂಟದ ಗೌರವಾಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ಯ, ಬೆಳ್ತಂಗಡಿ ಗುರುದೇವಾನಂದ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ, ಶಾಸಕಿ ಶಕುಂತಳಾ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತು ಮೂಡೆತ್ತಾಯ, ಪುತ್ತೂರು ಪುರಸಭಾ ಅಧ್ಯಕ್ಷೆ ವಾಣಿ ಶ್ರೀಧರ್ ಪಾಲ್ಗೊಳ್ಳಲಿದ್ದಾರೆ.
ಶಾಲೆ, ಕಾಲೇಜ್ ಬಂದ್ ಮಾಡದವರ ವಿರುದ್ಧ ಕರವೇ ಪ್ರತಿಭಟನೆ
ಮಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್.ಎಸ್. ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ತರಗತಿ ನಡೆಸಿದ ಶಾರದಾ ಕಾಲೇಜ್ ಮತ್ತು ಎಕ್ಸ್ಪರ್ಟ್ ಕಾಲೇಜ್ಗಳ ಮುಂಭಾಗದಲ್ಲಿ ಕನ್ನಡ ಕಟ್ಟೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿ ಭಟನೆ ನಡೆಸಿದರು. ಶಾರದಾ ಕಾಲೇಜ್ನಲ್ಲಿ ಪ್ರತಿಭಟಿಸುತ್ತಿದ್ದ ವೇಳೆ ಉಪನ್ಯಾಸಕರೊಬ್ಬರು 'ಜಿಎಸ್ಎಸ್ ಎಂದರೆ ಯಾರು ಬರೆದು ಕೊಡಿ, ಆಮೇಲೆ ನೋಡೋಣ' ಎಂದು ಉಡಾಫೆಯಾಗಿ ಮಾತನಾಡಿರುವುದು ಕಾರ್ಯಕರ್ತರನ್ನು ಕೆರಳಿಸಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಂ.ಬಿ.ಪುರಾಣಿಕ್, ಪ್ರತಿಭಟನಾಕಾರರನ್ನು ಸಮಾಧಾನಿಸಿ ರಜೆ ನೀಡುವುದಾಗಿ ಹೇಳಿದರು. ಎಕ್ಸ್ಪರ್ಟ್ ಕಾಲೇಜ್ನಲ್ಲಿಯೂ ಬಳಿಕ ರಜೆ ಸಾರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

