ಪುನರ್ವಸತಿ ಪ್ಯಾಕೇಜ್: ನಿವೇಶನಕ್ಕೆ ಆದ್ಯತೆ ಇಲ್ಲ
ಮಂಗಳೂರು: ನಕ್ಸಲ್ ಪ್ರದೇಶದ ಪುನರ್ವಸತಿ ಪ್ಯಾಕೇಜ್‌ನಲ್ಲಿ ಕುದುರೆಮುಖ ರಕ್ಷಿತಾರಣ್ಯದಿಂದ ಹೊರಬರುತ್ತಿರುವ ಸಂತ್ರಸ್ತರಿಗೆ ಸರ್ಕಾರ ನೀಡುವ ಉಡುಗೊರೆ ನೇರ ಖಾತೆಗೆ ಹಣ ಜಮಾವಣೆ. ಇದು ಪ್ಯಾಕೇಜ್-1ರಂತೆ ಹಣ ನೀಡಿ ಕೈತೊಳೆದುಕೊಳ್ಳುವ ಪರಿ.
ಆದರೆ, ಪ್ಯಾಕೇಜ್-2ರ ಪ್ರಕಾರ ಜಾಗ ಗುರುತಿಸಿ, ನಿವೇಶನ ನೀಡುವ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಜಾಗ ಇದ್ದರೂ ಸಂತ್ರಸ್ತರಿಗೆ ನಿವೇಶನ ಒದಗಿಸಲು ಆದ್ಯತೆ ಸಿಗುತ್ತಿಲ್ಲ.
ಇದು ನಕ್ಸಲ್ ಬಾಧಿತ ಪ್ರದೇಶಗಳಿರುವ ದ.ಕ., ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂಡುಬರುವ ಕಾಡಿನಿಂದ ನಾಡಿಗೆ ವಾಸ್ತವ್ಯ ಸ್ಥಳಾಂತರಿಸುವವರ ಸಮಸ್ಯೆ.
2009ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವಿದ್ದಾಗ ಪುನರ್ವಸತಿ ಯೋಜನೆಯಲ್ಲಿ ಪ್ರಥಮವಾಗಿ ರು. 1 ಕೋಟಿ ಬಿಡುಗಡೆಯಾಗಿತ್ತು. ನಂತರ ರು. 3 ಕೋಟಿ, ಈಗ 3 ವರ್ಷ ಬಳಿಕ ರು. 8.70 ಕೋಟಿ ನೀಡಲಾಗಿದೆ. ಪುನರ್ವಸತಿ ಯೋಜನೆಯಲ್ಲಿ ಎರಡು ಪ್ಯಾಕೇಜ್‌ಗಳಿವೆ.
ಪ್ಯಾಕೇಜ್-1ರಲ್ಲಿ ಕಾಡಿನಿಂದ ನಾಡಿಗೆ ಬರುವವರಿಗೆ ಜಾಗದ ಮೌಲ್ಯ ಲೆಕ್ಕಹಾಕಿ ಮೊತ್ತವನ್ನು ನೇರವಾಗಿ ಜಿಲ್ಲಾಡಳಿತ ಸಮಿತಿ ಮುಖೇನ ಸಂತ್ರಸ್ತರ ಖಾತೆಗೆ ನೇರ ಜಮೆ ಮಾಡುವುದು.
ಅರ್ಜಿ ಸಲ್ಲಿಸಿದರೂ ನಿವೇಶನ ನೀಡುತ್ತಿಲ್ಲ: ಪ್ಯಾಕೇಜ್-2ರಲ್ಲಿ ಜಿಲ್ಲಾಡಳಿತವೇ ಸಂತ್ರಸ್ತರಿಗೆ ನಿವೇಶನ ನೀಡುವುದು. ಈವರೆಗೆ 15 ಮಂದಿ ಪ್ಯಾಕೇಜ್-2ರಲ್ಲಿ ಅರ್ಜಿ ಸಲ್ಲಿಸಿದರೂ ಇದುವರೆಗೆ ನಿವೇಶನ ಸಿಗದೆ ಸಂತ್ರಸ್ತರು ಅತಂತ್ರ ಜೀವನ ನಡೆಸುವಂತಾಗಿದೆ.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಪ್ರಕಾರ, ಪ್ಯಾಕೇಜ್-2ರಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ ಎನ್ನುತ್ತಾರೆ. ಪ್ಯಾಕೇಜ್-1ರಲ್ಲಿ 3 ಜಿಲ್ಲೆಯಲ್ಲಿ ಒಟ್ಟು 590 ಮಂದಿ ಅರ್ಜಿ ಸಲ್ಲಿಸಿದ್ದು, ಈವರೆಗೆ 80 ಮಂದಿಗೆ ಪರಿಹಾರ ಪಾವತಿಸಲಾಗಿದೆ.
ಬೆಳ್ತಂಗಡಿಯ ನಾಯ್ದಗುರಿಯಲ್ಲಿ 5 ಕುಟುಂಬ 2010ರಲ್ಲಿ ಜಿಲ್ಲಾಡಳಿತದ ಮಾತು ನಂಬಿ ಕಾಡಿನಿಂದ ನಾಡಿಗೆ ಬಂದಿತ್ತು. ನಾಡಿಗೆ ಬರುವಾಗ ಜಿಲ್ಲಾಡಳಿತ ಜಾಗ ತೋರಿಸಿರಲಿಲ್ಲ, ಹಾಗಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದರು. ಕಾಡಿನಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದಾಗ, ಸುಪ್ರೀಂ ಕೋರ್ಟ್ ತೀರ್ಪಿನ ಕಾರಣದಲ್ಲಿ ಅರಣ್ಯ ಸಮಿತಿ ಅದನ್ನು ತಿರಸ್ಕರಿಸಿತ್ತು.
ನಾಡಿನಲ್ಲಿ ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದಾಗ, ಹಕ್ಕು ಪತ್ರ ಸಾಧ್ಯವಿಲ್ಲ ಎಂದಿತ್ತು ಕಂದಾಯ ಇಲಾಖೆ. ಇದರಿಂದ ಕಂಗೆಟ್ಟು ಜಿಲ್ಲಾಡಳಿತದ ಮೊರೆ ಹೋದಾಗ ಅವರ ಮನೆಗಳನ್ನೇ ಧ್ವಂಸ ಮಾಡಲಾಯಿತು.
ಈ ಬಗ್ಗೆ ಸಾಕಷ್ಟು ಪ್ರತಿರೋಧ ವ್ಯಕ್ತಗೊಂಡಾಗ ಜಿಲ್ಲಾಡಳಿತ ಸುಲ್ಕೇರಿಯಲ್ಲಿ 190 ಎಕರೆಯನ್ನು ಪುನರ್ವಸತಿ ಪ್ಯಾಕೇಜ್‌ಗೆ ಕಾದಿರಿಸಿತ್ತು.
ಈಗ ಅಲ್ಲೇ ಈ ನಿರ್ಗತಿಕ ಕುಟುಂಬ ವಾಸವಿದೆ. ಮತ್ತೆ ಅವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಸಕ್ರಮಗೊಳಿಸುವ ಅರ್ಜಿ ಸರ್ಕಾರದಲ್ಲಿ ಕೊಳೆಯುತ್ತಿದೆ. ಇಲ್ಲಿ ಜಾಗ ಇದ್ದರೂ ನಾಡಿಗೆ ಬರುವವರಿಗೆ ಜಾಗ ಗುರುತಿಸಿ ನಿವೇಶನ ನೀಡುವ ಕೆಲಸ ನಡೆಯುತ್ತಿಲ್ಲ. ಸುಲ್ಕೇರಿಯಲ್ಲಿ ನಿವೇಶನರಹಿತರಿಗೆ ಜಾಗ ಕಾದಿರಿಸಲಾಗಿದೆ. ಅಲ್ಲಿ ಈಗಾಗಲೇ ವಾಸ್ತವ್ಯ ಇರುವವರ ಮನೆಯನ್ನು ಸಕ್ರಮಗೊಳಿಸುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಉಳಿದವರಿಗೆ ಮನೆ ಹಂಚಿಕೆಗೆ ಸರ್ಕಾರಿಂದ ಸೂಕ್ತ ಅನುದಾನಕ್ಕೆ ಕಾಯಲಾಗುತ್ತಿದೆ ಎನ್ನುವುದು ಜಿಲ್ಲಾಡಳಿತದ ಸಮಜಾಯಿಷಿ.
ಈ ವರ್ಷ ಮೂರು ಜಿಲ್ಲೆಗಳಲ್ಲಿ 250 ಮಂದಿ ಪುನರ್ವಸತಿಗೆ ರು. 81 ಕೋಟಿ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತಗಳಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈಗ ರು. 8.7 ಕೋಟಿ ಬಿಡುಗಡೆಯಾಗಿದೆ. ಉಡುಪಿಗೆ ರು. 1 ಕೋಟಿ, ಚಿಕ್ಕಮಗಳೂರಿಗೆ ರು. 4.2 ಕೋಟಿ, ದ.ಕ. ರು. 3.5 ಕೋಟಿ ನೀಡಿದೆ. ಸರ್ಕಾರ ಹಂತ ಹಂತವಾಗಿ ಮೊತ್ತ ಬಿಡುಗಡೆ ಮಾಡುತ್ತಿದೆ. ಮೊತ್ತವನ್ನ ನೇರವಾಗಿ ಸಂತ್ರಸ್ತರ ಖಾತೆಗೆ ಜಮೆ ಮಾಡುತ್ತೇವೆ.
ರಮೇಶ್, ವನ್ಯಜೀವಿ ವಿಭಾಗ ಅಧಿಕಾರಿ, ಮಂಗಳೂರು
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

