ದಕ್ಷಿಣ ಕನ್ನಡ

ಕಾನೂನು ಅವ್ಯವಸ್ಥೆಗೆ ಜನರೇ ಕಾರಣ: ಪೂಜಾರಿ

Published On :

ಮಂಗಳೂರು: 'ರಾಜ್ಯದ ಆರು ಕೋಟಿ ಜನರೇ ಸರ್ಕಾರ. ನೈತಿಕ ಪೊಲೀಸ್‌ಗಿರಿ ಸೇರಿದಂತೆ ಇನ್ನಿತರ ಘಟನೆಗಳಿಗೆ ರಾಜ್ಯ ಸರ್ಕಾರ ಹೊಣೆಯಲ್ಲ, ಇದಕ್ಕೆ ಜನರೇ ಕಾರಣ' ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಥ ಘಟನೆ ಸಂಭವಿಸಿದಾಗ ಸರ್ಕಾರದ ಆಡಳಿತ, ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುವುದಕ್ಕಿಂತ ಜನರೇ ಈ ಕುರಿತು ಜಾಗೃತಿ ವಹಿಸಬೇಕಾಗಿದೆ. ಇಂಥ ಕೃತ್ಯಗಳಿಗೆ ಆಗುವ ಶಿಕ್ಷೆ ಮತ್ತು ಪರಿಣಾಮಗಳ ಕುರಿತು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಮಟ್ಟದಲ್ಲಿ ಈ ಕುರಿತು ಭಯ ಮತ್ತು ಜಾಗೃತಿ ಮೂಡಿಸುವ ಕೆಲಸ ಹೆತ್ತವರು, ಶಿಕ್ಷಕರು ಮಾಡಬೇಕು. ಆದ್ದರಿಂದ ಇಂಥ ಘಟನೆಗಳಿಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡದೆ, ಜನರು ಘಟನೆ ತಡೆಗಟ್ಟುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
 ಅತ್ಯಾಚಾರ ಮಾಡುವವರು ಎಲ್ಲ ಧರ್ಮದಲ್ಲಿಯೂ ಇದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಸರ್ಕಾರ, ಮಂತ್ರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿಗಳ ಮೇಲಾದ ಘಟನೆ ಅಮಾನುಷವಾಗಿದ್ದು, ಜಾತಿಯ ಹಣೆಪಟ್ಟಿ ಕಟ್ಟದೆ ಎಲ್ಲ ಸಂಘಟನೆಯವರೂ ಈ ಕೃತ್ಯವನ್ನು ಖಂಡಿಸಬೇಕು. ಘಟನೆಯಿಂದ ಕರಾವಳಿ ಮಾತ್ರವಲ್ಲ ಕರ್ನಾಟಕಕ್ಕೆ ಕಳಂಕ ಬಂದಿದೆ. ವಿದ್ಯಾಸಂಸ್ಥೆಗಳ ಸುತ್ತಮುತ್ತ ಸಿಸಿ ಕ್ಯಾಮರಾವನ್ನು ಅಳವಡಿಸುವಲ್ಲಿ ಆಡಳಿತಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇದಕ್ಕೆ ಸಂಸ್ಥೆಯ ಮುಖ್ಯಸ್ಥರೇ ನೇರ ಹೊಣೆಯಾಗುತ್ತಾರೆ ಎಂದರು.
ಹಲವು ಸಂಘಟನೆಗಳನ್ನು ಹುಟ್ಟುಹಾಕಿರುವ ಬಿಜೆಪಿ, ಹಣಕೊಟ್ಟು ಜನರನ್ನು ಸೇರಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವ ನರೇಂದ್ರ ಮೋದಿ, ಗಣಿಗಾರಿಕೆಯಲ್ಲಿ ಒಬ್ಬ ಮಂತ್ರಿಗೆ 3 ವರ್ಷ ಶಿಕ್ಷೆ ಆಗಿದ್ದರೂ, ಮಂತ್ರಿಮಂಡಲದಿಂದ ತೆಗೆದು ಹಾಕಿಲ್ಲ. ಬಿಜೆಪಿಯಲ್ಲಿಯೇ ಅನೇಕ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಯಾವುದೇ ಚಕಾರವೆತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವಂತೆ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಹಾಗೂ ಮೋದಿ ನಡೆಸಿರುವ ಗುಜರಾತ್ ಹತ್ಯೆ ಪ್ರಕರಣವನ್ನು ತಿಳಿಸಿಕೊಡುವ ಕಾರ್ಯ ಮಾಡಬೇಕು. ಅನ್ಯಾಯ ಎಲ್ಲೇ ನಡೆದರೂ, ಪೂಜಾರಿ ಧ್ವನಿ ಎತ್ತುತ್ತಾರೆ ಎಂದು ಪೂಜಾರಿ ಗುಡುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.