ಮೋದಿ ಆಡಳಿತದಲ್ಲಿ ಮುಸ್ಲಿಮರ ತಲಾ ಆದಾಯ ಹೆಚ್ಚಳ
ಮಂಗಳೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಮರಿಗೆ ಉದ್ಯಮ, ಉದ್ಯೋಗದಲ್ಲಿ ನೆರವು ನೀಡಿದ ಪರಿಣಾಮ ತಲಾ ಆದಾಯ ಹೆಚ್ಚಿದೆ, ಸಮುದಾಯ ಪ್ರಗತಿಯಾಗಿದೆ ಎಂದು ಗುಜರಾತ್ ಹಜ್ ಸಮಿತಿ ಸ್ಥಾಪಕ ಸೂಫಿ ಧರ್ಮಗುರು ಎಂ.ಕೆ. ಚಿಸ್ತಿ ಹೇಳಿದರು.
ಮೋತಿ ಮಹಲ್ ಸಭಾಭವನದಲ್ಲಿ ಮೋದಿ ಮತ್ತು ಮುಸ್ಲಿಂ ವಿಷಯ ಕುರಿತು ಉಪನ್ಯಾಸ ನೀಡಿದರು. ಮುಸ್ಲಿಮರು ಓಲೈಕೆ ಬಯಸುತ್ತಿಲ್ಲ, ಶಿಕ್ಷಣ ಮೂಲಕ ಸಬಲೀಕರಣ, ಸುಧಾರಣೆ ಬಯಸುತ್ತಿದ್ದಾರೆ. ಗುಜರಾತ್ನಲ್ಲಿ ಮುಸ್ಲಿಂ ಸಮುದಾಯದ 240 ಬಿಜೆಪಿ ಕಾರ್ಪೊರೇಟರ್ಗಳು ಇದ್ದಾರೆ. ಅದರಲ್ಲಿ 120 ಅಧ್ಯಕ್ಷರಾಗಿದ್ದಾರೆ. ರಸ್ತೆ, ಆಸ್ಪತ್ರೆ, ವೈದ್ಯಕೀಯ ಕೇಂದ್ರ ಮೊದಲಾದ ಮೂಲಭೂತ ಸೌಕರ್ಯಗಳಿವೆ.
ನಮ್ಮ ಸಮುದಾಯದ ಪ್ರಗತಿಯಾಗಬಹುದು ಎಂದು ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಿದರು. ಆದರೆ ಮುಸ್ಲಿಂ ನಾಯಕರು ಮಾತ್ರ ಶ್ರೀಮಂತರಾದರು, ಸಮುದಾಯ ಬಡತನದಲ್ಲಿಯೇ ಉಳಿಯಿತು.
ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ 2002ರಲ್ಲಿ ದಂಗೆಯಾದಾಗ ಆಡಳಿತದಲ್ಲಿ ಅನುಭವ ಇಲ್ಲದಿದ್ದರೂ ನಾಲ್ಕೇ ದಿನಗಳಲ್ಲಿ ಹತೋಟಿಗೆ ತಂದರು. ಬಳಿಕ ಒಂದೇ ಒಂದು ಕರ್ಫ್ಯೂ ಗುಜರಾತ್ನಲ್ಲಿ ನಡೆದಿಲ್ಲ. ಮಧ್ಯರಾತ್ರಿ 2 ಗಂಟೆಗೆ ಮುಸ್ಲಿಂ ಮಹಿಳೆಯರು ರಸ್ತೆಯಲ್ಲಿ ಅಡ್ಡಾಡಬಹುದು. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯದಲ್ಲಿ ಮುಸ್ಲಿಮರಿಗೆ ಏನು ಮಾಡಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ 11 ಸಾವಿರ ದಂಗೆಗಳಾದವು, ಇದರಲ್ಲಿ ಅಮಾಯಕ ಹಿಂದು, ಮುಸ್ಲಿಂ ಸಾವನ್ನಪ್ಪಿದರು. 1965ರಲ್ಲಿ ಹಿತೇಂದ್ರ ದೇಸಾಯಿ ಮುಖ್ಯಮಂತ್ರಿಯಾಗಿದ್ದಾಗ ದಂಗೆ ಅನೇಕ ದಿನಗಳ ಕಾಲ ನಡೆಯಿತು. 1985ರಲ್ಲಿ ಮಾಧವ ಸಿಂಗ್ ಸೋಳಂಕಿ ಮುಖ್ಯಮಂತ್ರಿಯಾಗಿದ್ದಾಗ ದಂಗೆ 5 ತಿಂಗಳು ನಡೆಯಿತು. 1990 ಮತ್ತು 1992ರಲ್ಲಿ ಸಿ.ಡಿ. ಪಾಟೀಲ್ ಗೃಹಮಂತ್ರಿಯಾಗಿದ್ದಾಗ ಅವರ ಎದುರಲ್ಲಿಯೇ ದಂಗೆ ನಡೆದಾಗ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆಗ ಆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾರೂ ಒತ್ತಾಯಿಸಿಲ್ಲ ಈಗ ಏಕೆ ಹೀಗೆ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿಕೊಂಡು ಸಲಿಂಗ ಕಾಮ ಕಾನೂನು ಜಾರಿಗೆ ತರಲು ಹೊರಟಿದ್ದಾರೆ ಇದಕ್ಕೆ ಧರ್ಮ ಇಲ್ಲ. ಇದು ಇಲ್ಲಿ ಸಂಸ್ಕೃತಿಯನ್ನು ನಾಶ ಮಾಡಲಿದೆ ಎಂದರು.
ಇಶ್ರತ್ ಜಹಾನ್ ಎನ್ಕೌಂಟರ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಿಸ್ತಿ, ದೇಶದಲ್ಲಿ ಅದೆಷ್ಟೊ ಎನ್ಕೌಂಟರ್ಗಳು ನಡೆದಿದೆ. ಎನ್ಕೌಂಟರ್ ಯಾವಾಗಲೂ ನಕಲಿಯೇ ಆಗಿರುತ್ತದೆ. ಆದರೆ ಭಾರತೀಯ ಗುಪ್ತಚರ ಸಂಸ್ಥೆ ಇಶ್ರತ್ ಪಾಕಿಸ್ತಾನ ಐಎಸ್ಐ ಜತೆ ಲಿಂಕ್ ಇತ್ತು ಎಂದು ದೃಢಪಡಿಸಿದೆ ಎಂದರು.
ಹಿಂದು- ಮುಸ್ಲಿಮರು ಒಂದೇ ನಾವೆ ನಾವಿಕರು
ಹಿಂದೂ ಮತ್ತು ಮುಸ್ಲಿಮರು ಒಂದೇ ಹಡಗಿನಲ್ಲಿರುವ ಪ್ರಯಾಣಿಕರು, ನಮ್ಮೊಳಗೆ ಜಗಳವಾಡಿದರೆ ನಾವೇ ನಾಶವಾಗುತ್ತೇವೆ ಎಂದು
ಇರಾಕ್, ಇರಾನ್ ಯುದ್ಧದಿಂದ ಲಾಭ ಆದದ್ದು ಅಮೆರಿಕಕ್ಕೆ ಎಂಬ ಉದಾಹರಣೆ ನೀಡಿದರು. ರಷ್ಯಾ ದೇಶವನ್ನು ಮಣಿಸಲೆಂದೇ ಒಸಾಮ ಬಿನ್ ಲಾದೆನ್ನನ್ನು ಅಮೆರಿಕದ ಬೆಳೆಸಿತು. ಇದನ್ನು ಹಿಲರಿ ಕ್ಲಿಂಟನ್ ಬಹಿರಂಗವಾಗಿಯೇ ಹೇಳಿದ್ದಾರೆ. ಸಿರಿಯ, ಲಿಬಿಯ, ಇರಾನ್, ಇರಾಕ್ ಮೊದಲಾದ ಅಮಾಯಕ ಮುಸ್ಲಿಂ ರಾಷ್ಟ್ರಗಳ ಮೇಲೆ ಅಮೆರಿಕ ಯುದ್ಧ ಸಾರಿ ಸಹಸ್ರಾರು ಅಮಾಯಕ ಮುಸ್ಲಿಮರು ಸಾಯುವಂತೆ ಮಾಡಿದೆ. ಮುಸ್ಲಿಮರಿಗೆ ಹಿಂದೂ ಸಮಾಜದಿಂದ ಯಾವುದೇ ಭೀತಿ ಇಲ್ಲ. ಅವರು ಸದಾ ಸಹನೆ ಮತ್ತು ಶಾಂತಿ ಪ್ರಿಯರು. ಹಿಂದುಸ್ತಾನ್ ಶಾಂತಿ ಪ್ರಿಯ ದೇಶ. ಇದು ಸೂಪರ್ ಪವರ್ ಆಗಬೇಕು.
ಇದುವರೆಗೆ ಅಧಿಕಾರ ಶಾಹಿಗಳು ಬಡವರನ್ನು ಬಲಿ ಪಡೆದೇ ಆಡಳಿತ ನಡೆಸಿದರು. ಇನ್ನು ಮುಂದಾದರೂ ಬಡವರನ್ನು ಬದುಕಿಸುವ ಆಡಳಿತ ನೀಡುವತ್ತ ಮನ ಮಾಡಿ ಎಂದು ಸಾಹಿತಿ ಮಹಮ್ಮದ್ ಬಡ್ಡೂರ್ ವಿನಂತಿಸಿದರು. ಚಕ್ರವರ್ತಿ ಸೂಲಿಬೆಲೆ ಸ್ವಾಗತಿಸಿದರು. ನಮೋ ಬ್ರಿಗೇಡ್ ನರೇಶ್ ಶೆಣೈ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

