ದಕ್ಷಿಣ ಕನ್ನಡ

ರಸ್ತೆ ದುರಂತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

Published On :

ವಿಟ್ಲ; ಬೈಕ್ ಮತ್ತು ತೂಫಾನ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುದ್ದುಪದವು ಅಪಘಾತ ತಿರುವಿನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಚಾಲಕ ತೂಫಾನ್ ಸಹಿತ ಪರಾರಿಯಾಗಿದ್ದು ಸಾರ್ವಜನಿಕರು ಪತ್ತೆ ಹಚ್ಚಿ ಠಾಣೆಗೆ ಹಸ್ತಾಂತರಿಸಿದ್ದಾರೆ.
ಬೈಕ್ ಚಲಾಯಿಸುತ್ತಿದ್ದ ಎಣ್ಮಕಜೆ ಗ್ರಾಮದ ಅಡ್ಯನಡ್ಕ ಸಮೀಪದ ಮುಗೇರು ನಿವಾಸಿ ಮಹಮ್ಮದ್ ಶರೀಫ್ (28) ಹಾಗೂ ಸಹ ಸವಾರ ಮುಗೇರು ನಿವಾಸಿ ಮಹಮ್ಮದ್ ಜಹೀರ್ (22) ಮೃತರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಡ್ಯನಡ್ಕದ ದಿನಸಿ ಅಂಗಡಿಗೆ ಸೇರಿದ ತೂಫಾನ್ ಹಾಗೂ ಚಾಲಕ ಚೌರ್ಕಾಡು ನಿವಾಸಿ ಉದಯನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಘಟನೆ ವಿವರ: ಕಂಬಳಬೆಟ್ಟುವಿನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಜಹೀರ್‌ನೊಂದಿಗೆ ಹೋಗಿದ್ದ ಶರೀಫ್ ವಾಪಸ್ ಅಡ್ಯನಡ್ಕಕ್ಕೆ ಬರುತ್ತಿದ್ದಾಗ ಅಡ್ಯನಡ್ಕದಿಂದ ಪಡಿಬಾಗಿಲು ಶಾಲೆಯ ವಾಷಿಕೋತ್ಸವಕ್ಕೆ ಬಾಡಿಗೆ ಹೋಗುತ್ತಿದ್ದ ತುಫಾನ್ ವಾಹನ ನಡುವೆ ಶನಿವಾರ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಕುದ್ದುಪದವಿನಲ್ಲಿ ಡಿಕ್ಕಿ ಸಂಭವಿಸಿ ಈ ಘಟನೆ ನಡೆದಿದೆ. ಘಟನೆ ನಡೆದ ಕೂಡಲೇ ತೂಫಾನ್‌ನೊಂದಿಗೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದ ಸುದ್ದಿ ತಿಳಿದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಬೈಕ್ ಸವಾರರನ್ನು ನೋಡಿ ಕೂಡಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಆ ವಾಹನ ಬರುವ ಹೊತ್ತಿಗಾಗಲೇ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ತೂಫಾನ್ ವಾಹನದ ಕನ್ನಡಿ ಕಿತ್ತು ಹೋಗಿದ್ದು, ಚಾಲಕ ವಾಪಸ್ ಬಂದು ಮಿರರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸ್ಥಳೀಯರ ಬೊಬ್ಬೆ ಕೇಳಿ ಮತ್ತೆ ಅಡ್ಯನಡ್ಕದತ್ತ ವಾಪಸ್ ಹೋಗಿದ್ದಾನೆ. ಕೂಡಲೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದು ಮೂವರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ರಾತ್ರಿ 1.35ರ ಸುಮಾರಿಗೆ ವೃತ್ತ ನಿರೀಕ್ಷ ರಾಜಶೇಖರ ಮಿಸ್ತ್ರಿ ಆಗಮಿಸುವವರೆಗೂ ಶವವನ್ನು ತೆಗೆಯದಿದ್ದದ್ದು ಸ್ಥಳದಲ್ಲಿ ನೆರೆದ ನೂರಾರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ರಸ್ತೆಯಲ್ಲಿ ಬಿದ್ದಿದ್ದ ತೂಫಾನ್ ವಾಹನದ ಕನ್ನಡಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದನ್ನು ಗಮನಿಸಿದ ಕೆಲ ಯುವಕರು ಆಗ ಕನ್ನಡಿಗಾಗಿ ಹುಡುಕಾಟ ನಡೆಸಿದ ವಾಹನದಲ್ಲೂ ಇದೇ ರೀತಿ ಸ್ಟಿಕ್ಕರ್ ಅಂಟಿಸಲಾಗಿತ್ತು ಎಂದು ಹೇಳಿದಾಗ ಈ ಬಗ್ಗೆ ವಿಚಾರಣೆ ನಡೆಸಿದಾಗ ಇದು ಅಡ್ಯನಡ್ಕದ ದಿನಸಿ ಅಂಗಡಿಗೆ ಸೇರಿದ್ದು ಎಂದು ಖಚಿತವಾಯಿತು.
 ಚಾಲಕ ವಾಹನದೊಂದಿಗೆ ಕೇರಳಕ್ಕೆ ಪರಾರಿಯಾದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಚಾಲಕ ಕೇರಳದ ಚೌರ್ಕಾಡುವಿನಲ್ಲಿ ಸಿಕ್ಕಿಬಿದ್ದಿದ್ದಾನೆ.
ಆದರೆ ಆರೋಪಿಯನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆಯುವಂತಿರಲಿಲ್ಲ. ಈ ಸಂದರ್ಭ ಸ್ಥಳೀಯರು ಕೇರಳದ ಬದಿಯಡ್ಕ(ಗಡಿನಾಡ ಕಾಸರಗೋಡು) ಠಾಣೆಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ವಾಹನ ಹಾಗೂ ಚಾಲಕನನ್ನು ವಿಟ್ಲ ಠಾಣೆಗೆ ಹಸ್ತಾಂತರಿಸುವ ಕಾರ್ಯ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.