ನಕ್ಸಲ್ ಬಾಧಿತ ಪ್ರದೇಶದಲ್ಲಿ ಸದ್ದಡಗಿದ ಟರ್ಬೈನರ್
-ಆತ್ಮಭೂಷಣ್
ಮಂಗಳೂರು: ಬೆಳ್ತಂಗಡಿಯ ನಕ್ಸಲ್ ಬಾಧಿತ ಪ್ರದೇಶಗಳ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಲುವಾಗಿ ಜಿಲ್ಲಾಡಳಿತ ಕಳೆದ ವರ್ಷ ಸ್ಥಾಪಿಸಿದ ಟರ್ಬೈನರ್ ಎರಡು ತಿಂಗಳಿಂದ ಸದ್ದಡಗಿಸಿದೆ. ಇದರಿಂದ ಜಲವಿದ್ಯುತ್ ಉತ್ಪಾದನೆ ಇಲ್ಲದೆ ಕಾಡಂಚಿನಲ್ಲಿರುವ ಸುಮಾರು 13 ಮನೆಗಳು ಕಗ್ಗಲ್ಲಲ್ಲಿ ಕಾಲಕಳೆಯುವಂತಾಗಿದೆ.
ನಕ್ಸಲ್ ಬಾಧಿತ ಪ್ರದೇಶ ಇಂದಬೆಟ್ಟು ಗ್ರಾಮ ಪಂಚಾಯ್ತಿಯ ಕುದ್ಕೋಳಿ ಎಂಬಲ್ಲಿ ಕಳೆದ ವರ್ಷ ಜಿಲ್ಲಾಡಳಿತ ಹರಿಯುವ ಹೊಳೆಯಿಂದ ಮಿನಿ ಜಲವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಿತ್ತು. ಅಲ್ಲಿನ ಎರ್ಮಟ ಹೊಳೆಗೆ ಟರ್ಬೈನರ್ ಅಳವಡಿಸಿ ಅದನ್ನು 2012 ಜು.25ರಂದು ಉದ್ಘಾಟಿಸಿತ್ತು. 5 ಮೆಗಾವ್ಯಾಟ್ ವಿದ್ಯುತ್ನ್ನು ಸಮೀಪದ 5 ಮನೆಗಳ ಬಳಕೆಗೆ ಸಂಪರ್ಕ ನೀಡಲಾಗಿತ್ತು. ಈಗ ಹೊಳೆಯಲ್ಲಿ ನೀರಿನ ಕೊರತೆ ತಲೆದೋರಿದ್ದು, ಜನವರಿಯಿಂದ ಟರ್ಬೈನರ್ ಸ್ಥಗಿತಗೊಂಡಿದೆ.
ನೀರು ಸಂಗ್ರಹ ವ್ಯವಸ್ಥೆ ಇಲ್ಲ: ನಕ್ಸಲ್ ಪ್ಯಾಕೇಜ್ನಲ್ಲಿ ಆಗಿನ ಜಿಲ್ಲಾಧಿಕಾರಿ ಡಾ.ಚೆನ್ನಪ್ಪ ಗೌಡ ಮುತುವರ್ಜಿಯಲ್ಲಿ ಟರ್ಬೈನರ್ ಮೂಲಕ ವಿದ್ಯುತ್ಗೆ ವ್ಯವಸ್ಥೆ ಮಾಡಿದ್ದರು. ಆದರೆ ಬೇಸಗೆಯಲ್ಲಿ ಟರ್ಬೈನರ್ ಹೇಗೆ ವಿದ್ಯುತ್ ಉತ್ಪಾದಿಸಬೇಕು ಎಂಬ ಬಗ್ಗೆ ಯಾವುದೇ ದೂರದೃಷ್ಟಿ ಚಿಂತನೆ ಮಾಡಿರಲಿಲ್ಲ.
ಕಾಡಿನ ಪ್ರದೇಶವಾಗಿದ್ದರೂ, ಇಲ್ಲಿ ಜನವರಿಯಲ್ಲೇ ನೀರು ಕಡಿಮೆಯಾಗಿದೆ. ನೀರಿದ್ದರೂ ಟರ್ಬೈನರ್ ತಿರುಗಲು ಸಾಲದು. ಹಾಗಾಗಿ ಜನವರಿಯಿಂದಲೇ ಟರ್ಬೈನರ್ ವಿದ್ಯುತ್ ಉತ್ಪಾದನೆ ನಿಲ್ಲಿಸಿದೆ. ನೀರು ಸಂಗ್ರಹಕ್ಕೆ ಕಿಂಡಿ ಅಣೆಕಟ್ಟೆಯಂಥ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಲ್ಲ. ಹೊಳೆಗೆ ಸಣ್ಣ ಕಟ್ಟ(ಮಣ್ಣಿನ ತಡೆಗೋಡೆ)ನಿರ್ಮಿಸಬಹುದಾದರೂ, ಅದಕ್ಕೇ ಬೇಕಾದ ಸಂಪನ್ಮೂಲ ಒದಗಿಸುವತ್ತ ಗಮನವನ್ನೂ ಹರಿಸಿಲ್ಲ. ಇದೆಲ್ಲದರ ಪರಿಣಾಮ ಯೋಜನೆ ಇದ್ದರೂ ಉಪಯೋಗಕ್ಕೆ ಇಲ್ಲ ಎಂಬಂತಾಗಿದೆ.
ಕಿಂಡಿ ಅಣೆಕಟ್ಟೆ ಇಲ್ಲದಿದ್ದರೂ 4.74 ಲಕ್ಷ ವೆಚ್ಚ!: ಟರ್ಬೈನ್, ಅದಕ್ಕೊಂದು ಶೆಡ್, ಐದು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರ ವಹಿಸಿತ್ತು. ನಿರ್ಮಿತಿ ಕೇಂದ್ರ ಕೊಪ್ಪದ ಟರ್ಬೋ ಸಂಸ್ಥೆಗೆ ಕಾಮಗಾರಿಯನ್ನು ವಹಿಸಿತ್ತು. ಇಷ್ಟಕ್ಕೆ ತಗಲಿದ ವೆಚ್ಚ 4.74 ಲಕ್ಷ ರುಪಾಯಿ. ಆದರೆ ಇದರಲ್ಲಿ ಕಿಂಡಿ ಅಣೆಕಟ್ಟೆ ಸೇರಿಲ್ಲ. ಹಾಗಾದರೆ ಇಷ್ಟೊಂದು ಮೊತ್ತ ಕೇವಲ ಶೆಡ್, ಟರ್ಬೈನ್, ವಿದ್ಯುತ್ ಸಂಪರ್ಕಕ್ಕೆ ವೆಚ್ಚವಾಯಿತೇ ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಪ್ರಶ್ನಿಸುತ್ತಾರೆ.
13 ಮನೆಗಳಿಗೂ ಬೆಳಕಿಲ್ಲ: ಇದು ಜಿಲ್ಲಾಡಳಿತದ ಟರ್ಬೈನ್ ಕಥೆಯಾದರೆ, ಇಲ್ಲೇ ಸಮೀಪ ಪುಳಿತ್ತಡಿ ಎಂಬಲ್ಲಿ ಇನ್ನೆರಡು ಟರ್ಬೈನ್ನ್ನು ಖಾಸಗಿ ನೆರವಿನಲ್ಲಿ ಸ್ಥಾಪಿಸಲಾಗಿದೆ. ಅಲ್ಲಿಂದ 8 ಮನೆಗಳಿಗೆ ವಿದ್ಯುತ್ ಪೂರೈಕೆ ಇದೆ. ಅಲ್ಲಿಯೂ ಕಿಂಡಿ ಅಣೆಕಟ್ಟೆ ಇಲ್ಲ, ಹಾಗಾಗಿ ನೀರು ಸಂಗ್ರಹ ಇಲ್ಲದೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಹೀಗೆ ಒಟ್ಟು 13 ಮನೆಗಳಿಗೆ ಒಂದು ತಿಂಗಳಿಂದ ವಿದ್ಯುತ್ ಇಲ್ಲ. ಇದನ್ನು ಗ್ರಾಮ ಪಂಚಾಯ್ತಿ, ಜಿಲ್ಲಾಡಳಿತದ ಗಮನಕ್ಕೆ ತಂದಾಗ, ಹಿಂದೆ ಹಾಕಿದ್ದ ಸೋಲಾರ್ ದೀಪ ಉಪಯೋಗಿಸಿ ಎನ್ನುತ್ತಾರೆ. ಅದನ್ನು ದುರಸ್ತಿಪಡಿಸಲು ಯಾರೂ ಮುಂದಾಗುತ್ತಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಶಿವಪ್ಪ ಮಲೆಕುಡಿಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

